ಭಾರತ ವಿಶ್ವಕಪ್ ಗೆಲ್ಲಲು ಈ ಎರಡು ತಂಡಗಳು ನೈಜ ತಡೆ: ಗಂಗೂಲಿ ಹೇಳಿದ್ದೇನು?

Update: 2023-10-29 02:33 GMT

Photo:PTI

ಹೊಸದಿಲ್ಲಿ: ಅತಿಥೇಯ ಭಾರತ ತಂಡಕ್ಕೆ ವಿಶ್ವಕಪ್ ಗೆಲ್ಲುವ ಅಭಿಯಾನದಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ, ದೊಡ್ಡ ಸವಾಲಾಗಿ ಪರಿಣಮಿಸಲಿವೆ ಎಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ, ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ವಿರುದ್ಧ ಸತತ ಸೋಲುಂಡಿದೆ. ಆದರೆ ನಿರಂತರವಾಗಿ ನಾಲ್ಕು ಗೆಲುವುಗಳ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಮೂಲಕ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕು ತಂಡಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

"ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಭಾರತಕ್ಕೆ ಎದುರಾಗಿರುವ ಅತಿದೊಡ್ಡ ಸವಾಲುಗಳು" ಎಂದು ಶನಿವಾರ ಬಾಂಗ್ಲಾದೇಶ ಮತ್ತು ನೆದರ್ಲೆಂಡ್ಸ್ ತಂಡಗಳ ನಡುವಿನ ಹೋರಾಟಕ್ಕೆ ವೇದಿಕೆಯಾದ ಈಡನ್ ಗಾರ್ಡನ್ಸ್ ನಲ್ಲಿ ಅಭಿಪ್ರಾಯಪಟ್ಟರು.

"ಅವರು ನಿಜವಾಗಿಯೂ ಪುಟಿದೆದ್ದಿದ್ದಾರೆ. ನಿಜವಾಗಿ ಉತ್ತಮ ಕ್ರಿಕೆಟ್ ಪ್ರದರ್ಶನ ನೀಡುತ್ತಿದ್ದಾರೆ. ನ್ಯೂಝಿಲೆಂಡ್ ವಿರುದ್ಧದ ಇಂದಿನ ವಿಜಯ ನಿಜಕ್ಕೂ ರೋಮಾಂಚಕಾರಿ" ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ರಾಗಿದ್ದ ಅವರು ಹೇಳಿದ್ದಾರೆ.

ಧರ್ಮಶಾಲಾದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಅವರ ಸ್ಫೋಟಕ ಬ್ಯಾಟಿಂಗ್ ನಿಂದ (67 ಎಸೆತಗಳಲ್ಲಿ 109) ಮತ್ತು ಡೇವಿಡ್ ವಾರ್ನರ್ (65 ಎಸೆತಗಳಲ್ಲಿ 81) ಅವರ ಅದ್ಭುತ ಪ್ರದರ್ಶನದಿಂದ 49.2 ಓವರ್ ಗಳಲ್ಲಿ 388 ರನ್ ಗಳ ಬೃಹತ್ ಮೊತ್ತವನ್ನು ಆಸ್ಟ್ರೇಲಿಯಾ ಕಲೆ ಹಾಕಿತ್ತು. ರೋಚಕವಾಗಿ ಐದು ರನ್ ಅಂತರದ ಗೆಲುವು ಸಾಧಿಸಿತ್ತು.

ವಿಶ್ವಕಪ್ ಪಂದ್ಯಾವಳಿಯಲ್ಲಿ 'ಚೋಕರ್' ಎನಿಸಿಕೊಂಡಿರುವ ದಕ್ಷಿಣ ಆಫ್ರಿಕಾ ಈ ಬಾರಿ ಆರು ಪಂದ್ಯಗಳ ಪೈಕಿ 5ನ್ನು ಗೆದ್ದು, ಭಾರತವನ್ನು ಮೀರಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿರುವ ಭಾರತ ತನ್ನ ಆರನೇ ಪಂದ್ಯವನ್ನು ಲಕ್ನೋದಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದೆ. "ಭಾರತ ಈ ಪಂದ್ಯಾವಳಿಯಲ್ಲಿ ಉತ್ತಮವಾಗಿ ಆಡುತ್ತಿದೆ. ಆದರೆ ಮೊದಲು ನಾಕೌಟ್ ಹಂತ ತಲುಪಬೇಕು" ಎಂದು ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News