ಇದು ಅವೈಜ್ಞಾನಿಕ ಅಭಿವೃದ್ಧಿ ಯೋಜನೆಗಳ ದುಷ್ಪರಿಣಾಮ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಳೆದ ಒಂದೆರಡು ವಾರಗಳ ಕಾಲಾವಧಿಯಲ್ಲಿ ವರ್ಷಧಾರೆಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈಗ ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದೆ. ಆದರೆ ಬಹುತೇಕ ಅಣೆಕಟ್ಟುಗಳು ತುಂಬಿ ತುಳುಕುವ ಹಂತಕ್ಕೆ ತಲುಪಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡುತ್ತಿರುವುದರಿಂದ ನದಿ ಪಾತ್ರದ ಪ್ರದೇಶಗಳಲ್ಲಿ ಪ್ರವಾಹದ ಆತಂಕ ಉಂಟಾಗಿದೆ. ವಿಜಯಪುರ ಜಿಲ್ಲೆಯ ಆಲಮಟ್ಟಿ ಹಾಗೂ ಮಂಡ್ಯ ಜಿಲ್ಲೆಯ ಕೃಷ್ಣ ರಾಜ ಸಾಗರ ಜಲಾಶಯಗಳಿಂದ ಮುಂಜಾಗ್ರತಾ ಕ್ರಮವಾಗಿ ಶನಿವಾರ ನೀರನ್ನು ಬಿಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಣೆಕಟ್ಟಿಗೆ ನೀರಿನ ಹರಿವು ಹೆಚ್ಚಾಗುತ್ತಲೇ ಇದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಮನೆಗಳು ಮತ್ತು ಗುಡ್ಡಗಳು ಕುಸಿದು ಸಾವುನೋವುಗಳು ಸಂಭವಿಸಿದ ವರದಿಗಳು ಬರುತ್ತಲೇ ಇವೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದ ಸಂದರ್ಭದಲ್ಲಿ ಕಣ್ಮರೆಯಾದ 11 ಜನರಲ್ಲಿ ಏಳು ಮಂದಿಯ ಕಳೇಬರಗಳು ಸಿಕ್ಕಿವೆ. ಗುಡ್ಡ ಕುಸಿದ ಶಿರೂರು ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರವಿವಾರ ಭೇಟಿ ನೀಡಿ ಪರಿಹಾರ ಕಾರ್ಯಗಳ ಪರಿಶೀಲನೆ ನಡೆಸಿದ್ದಾರೆ. ಪರಿಹಾರ ಕಾರ್ಯ ಮುಗಿದ ನಂತರ ಕಳಪೆ ಕಾಮಗಾರಿಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದಲ್ಲದೆ ಅಲ್ಲಲ್ಲಿ ಇನ್ನಿತರ ಅವಘಡಗಳು ಸಂಭವಿಸಿವೆ. ಮಳೆಗಾಲದಲ್ಲಿ ಭೂ ಕುಸಿತ ಕರ್ನಾಟಕಕ್ಕೆ ಹೊಸದಲ್ಲ. 2018ರಲ್ಲೂ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಭೂ ಕುಸಿತದ ಪರಿಣಾಮವಾಗಿ 20 ಮಂದಿ ಅಸುನೀಗಿದ್ದರು. 4,000 ಮನೆಗಳು ಕುಸಿದಿದ್ದವು. ನೂರಾರು ಎಕರೆ ಕಾಫಿ ಬೆಳೆ ನಾಶವಾಗಿತ್ತು. ಹಿಂದಿನ ಅನುಭವದ ಹಿನ್ನೆಲೆಯಲ್ಲಿ ಸರಕಾರ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬಹುದಿತ್ತು. ಇಂತಹ ಸಂದರ್ಭದಲ್ಲಿ ಪ್ರತಿಪಕ್ಷಗಳು ಸರಕಾರದ ಗಮನ ಸೆಳೆಯಬಹುದಿತ್ತು. ಆದರೆ ಅದಾಗುತ್ತಿಲ್ಲ. ಹೀಗಾಗಿ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ತತ್ತರಿಸಿದ ಜನರನ್ನು ಕೇಳುವವರೇ ಇಲ್ಲದಂತಾಗಿದೆ.ಎರಡು ವಿಪರೀತ ಹವಾಮಾನ ಪರಿಸ್ಥಿತಿಯನ್ನು ಎದುರಿಸಿದ ಕರ್ನಾಟಕ ಇಂತಹ ಸಂದರ್ಭದಲ್ಲಿ ವಿಶೇಷ ಎಚ್ಚರ ವಹಿಸಬೇಕಾಗುತ್ತದೆ. ಐದಾರು ತಿಂಗಳ ಹಿಂದೆ ಮಳೆಯ ಅಭಾವದಿಂದ ರಾಜ್ಯದ 123 ತಾಲೂಕುಗಳಲ್ಲಿ ಬರಗಾಲದ ಪರಿಸ್ಥಿತಿ ಉಂಟಾಗಿತ್ತು. ಈಗ ವಿಪರೀತ ಮಳೆ ಬೀಳುತ್ತಿದೆ. ಇಂತಹ ಸಂದರ್ಭದಲ್ಲಿ ನೀರನ್ನು ಸಂಗ್ರಹಿಸಿ ಬೇಸಿಗೆಯಲ್ಲಿ ಬಳಸಿಕೊಳ್ಳಲು ಸಣ್ಣಪುಟ್ಟ ಅಣೆಕಟ್ಟು, ಕೆರೆಗಳನ್ನು ನಿರ್ಮಿಸಿ ಮಳೆಯ ನೀರನ್ನು ಸದುಪಯೋಗ ಮಾಡಿಕೊಳ್ಳುವ ಯೋಜನೆ ರೂಪಿಸಬೇಕಾಗಿತ್ತು. ಆದರೆ ಮಳೆ ನೀರು ನಿರ್ವಹಣೆಯಲ್ಲಿ ಇನ್ನೂ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ.
ವಿಪರೀತ ಮಳೆಯಿಂದಾಗಿ ಸಂಭವಿಸುವ ದುರಂತಗಳಿಗೆ ನೈಸರ್ಗಿಕ ಪ್ರಕೋಪದ ಕಾರಣ ಮಾತ್ರವಲ್ಲ ಅಭಿವೃದ್ಧಿಯ ಹೆಸರಿನಲ್ಲಿ ನಡೆದಿರುವ ದುಸ್ಸಾಹಸಗಳೂ ಕಾರಣ. ಅದರಲ್ಲೂ ಪಶ್ಚಿಮ ಘಟ್ಟ ಪ್ರದೇಶ ಸೇರಿದಂತೆ ಕರಾವಳಿ ಹಾಗೂ ಮಲೆನಾಡಿನಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ಕಡಲ ತೀರಕ್ಕೆ ಸಮಾನಾಂತರವಾಗಿ ಹೆದ್ದಾರಿ, ರೈಲು ಮಾರ್ಗ, ಸುರಂಗ ಸೇತುವೆಗಳ ನಿರ್ಮಾಣ ಹಾಗೂ ಗಣಿಗಾರಿಕೆ, ಅಕ್ರಮ ಸಾಗುವಳಿ ಮತ್ತು ರೆಸಾರ್ಟ್‌ಗಳ ಹಾವಳಿ ಜೊತೆಗೆ ಹವಾಮಾನ ವೈಪರೀತ್ಯಗಳಿಂದಾಗಿ ಇಂತಹ ದುರಂತಗಳು ಪದೇ ಪದೇ ಸಂಭವಿಸುತ್ತಿವೆ.
ವಿಭಿನ್ನ ಶಿಲಾ ರಚನೆಯಿಂದ ಕೂಡಿರುವ ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ಗಿಡ ಮರಗಳ ಸಾಂದ್ರತೆ ಹಾಗೂ ನೀರನ್ನು ಹಿಡಿದಿಡುವ ಸ್ವರೂಪವೂ ಏಕರೂಪವಾಗಿಲ್ಲ.ಇಂಥ ಸೂಕ್ಷ್ಮ ಪ್ರದೇಶದಲ್ಲಿ ರಸ್ತೆ, ಸೇತುವೆಯಂತಹ ನಿರ್ಮಾಣ ಕಾರ್ಯವನ್ನು ಹಮ್ಮಿಕೊಳ್ಳುವಾಗ ಸಾಕಷ್ಟು ಮುಂಜಾಗ್ರತೆಯನ್ನು ವಹಿಸಬೇಕಾಗುತ್ತದೆ. ತರಾತುರಿಯಲ್ಲಿ ಭಾರೀ ಯಂತ್ರೋಪಕರಣಗಳನ್ನು ಉಪಯೋಗಿಸಿ ಹೆದ್ದಾರಿಗಳನ್ನು ನಿರ್ಮಿಸುವಾಗ ಗುತ್ತಿಗೆದಾರರ ಲೋಪಗಳಿಂದ ಅನಾಹುತಗಳನ್ನು ತಪ್ಪಿಸಲು ಸರಕಾರ ಮುನ್ನೆಚ್ಚರಿಕೆ ವಹಿಸಬೇಕು.
ಅಭಿವೃದ್ಧಿ ಯೋಜನೆಗಳು ಜನರ ಹಿತಾಸಕ್ತಿಯನ್ನು ಕಾಪಾಡುವಂತಿರಬೇಕು.ಆದರೆ ದುಡ್ಡಿನ ದಾಹದ ಇಂದಿನ ಅಭಿವೃದ್ಧಿ ಯೋಜನೆಗಳಿಂದ ಮತ್ತೆ ಮತ್ತೆ ಅನಾಹುತಗಳು ಸಂಭವಿಸುತ್ತಲೇ ಇವೆ. ಐದು ವರ್ಷಗಳ ಹಿಂದೆ ಸಕಲೇಶಪುರ ಮತ್ತು ಸುಬ್ರಹ್ಮಣ್ಯದ ರೈಲು ಹಳಿಯ ಮಾರ್ಗದಲ್ಲಿ 35ಕ್ಕೂ ಹೆಚ್ಚು ಕಡೆ ಭೂ ಕುಸಿತ ಸಂಭವಿಸಿತ್ತು. ಕೇರಳ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗುಡ್ಡ ಕುಸಿತದ ದುರಂತಗಳು ಆಗಾಗ ಸಂಭವಿಸುತ್ತಲೇ ಇವೆ. ನಮ್ಮ ಸರಕಾರಗಳು ಇದನ್ನು ತಡೆಯುವ ಯಾವುದೇ ಶಾಶ್ವತ ಯೋಜನೆಯನ್ನು ರೂಪಿಸಲು ಈವರೆಗೆ ಸಾಧ್ಯವಾಗಿಲ್ಲ.
ಮಳೆ ಬರುವುದು ಸಹಜ ಪ್ರಕ್ರಿಯೆ. ಜೀವ ಜಗತ್ತಿಗೆ ಮಳೆ ಬೇಕೇ ಬೇಕು. ಮಳೆ ಹನಿ ಕಾಣಿಸಿಕೊಳ್ಳುತ್ತಿದ್ದಂತೆ ರೈತರು ಹುರುಪಿನಿಂದ ಕಾರ್ಯೋನ್ಮುಖರಾಗುತ್ತಾರೆ.ಕೃಷಿ ಚಟುವಟಿಕೆಗಳಿಗೆ ಜೀವ ಬರುತ್ತದೆ. ಆದರೆ ಬೆಳೆ ಕೈಗೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿರುವಾಗಲೇ ಅನಿರೀಕ್ಷಿತವಾಗಿ ಆರ್ಭಟಿಸಿ ಸುರಿಯುವ ಮಳೆಯಿಂದಾಗಿ ಬೆಳೆಗಳು ನಾಶವಾಗುತ್ತವೆ. ಸರಕಾರ ನೀಡುವ ಬೆಳೆ ನಷ್ಟ ಪರಿಹಾರದ ಮೊತ್ತ ಯಾತಕ್ಕೂ ಸಾಲುವುದಿಲ್ಲ. ಹೀಗಾಗಿ ಮಣ್ಣಿನ ಮಕ್ಕಳ ಬದುಕು ಡೋಲಾಯಮಾನವಾಗುತ್ತದೆ. ಇದು ತಪ್ಪಬೇಕೆಂದರೆ ಇದಕ್ಕೆ ಶಾಶ್ವತ, ವೈಜ್ಞಾನಿಕ ಪರಿಹಾರ ಕಂಡು ಹಿಡಿಯಬೇಕು. ಮಳೆಗಾಲದಲ್ಲಿ ರೈತರು ಬೆಳೆಯಬಹುದಾದ ಬೆಳೆಗಳು ಅವುಗಳ ರಕ್ಷಣಾ ಕಾರ್ಯದ ಬಗ್ಗೆ ಕೃಷಿ ಇಲಾಖೆ ರೈತರಿಗೆ ಸೂಕ್ತ ತರಬೇತಿಯನ್ನು ನೀಡಬೇಕು. ಈ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು.
ಸಾಮಾನ್ಯವಾಗಿ ಬೇಸಿಗೆ ಕೊನೆಯಾಗುತ್ತಿದ್ದಂತೆ ಮುಂಗಾರು ಕಾಣಿಸಿಕೊಳ್ಳುವ ಸೂಚನೆಗಳು ಸಿಗುತ್ತವೆ. ಆಗ ಸರಕಾರ ನದಿ ತೀರದ ಹಳ್ಳಿಗಳ ಜನರಿಗೆ ಮುನ್ನೆಚ್ಚರಿಕೆಯನ್ನು ನೀಡಬೇಕು. ಆದರೆ ಜಲಾಶಯಗಳಿಂದ ಹೊರ ಹರಿವು ತೀವ್ರ ಸ್ವರೂಪ ತಾಳಿ ಅಪಾಯದ ಹಂತಕ್ಕೆ ತಲುಪಿದ ಕೊನೆಯ ಘಟ್ಟದಲ್ಲಿ ಸ್ಥಳೀಯ ಆಡಳಿತಗಳು ನಿದ್ರೆಯಿಂದ ಎಚ್ಚೆತ್ತು ಜನರ ರಕ್ಷಣೆಗೆ ಮುಂದಾಗುತ್ತವೆ. ಆಗ ಕೈ ಪರಿಸ್ಥಿತಿ ಮೀರಿರುತ್ತದೆ. ಮುಂದೆ ಹೀಗಾಗಬಾರದು.
ವಿಪರೀತ ಮಳೆಯಿಂದ ಉಂಟಾಗುವ ಇನ್ನೊಂದು ಅನಾಹುತವೆಂದರೆ ಈಗಾಗಲೇ ದುರ್ಬಲವಾಗಿರುವ ದುರಸ್ತಿ ಕಾಣದ ಸರಕಾರಿ ಶಾಲೆಗಳು ಶಿಥಿಲವಾಗಿ ಕುಸಿದು ಬೀಳುವ ಘಟನೆಗಳು. ಹೀಗಾಗಿ ಪೋಷಕರು ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ಹಿಂಜರಿಯುತ್ತಾರೆ. ಈಗಾಗಲೇ ಖಾಸಗಿ ಶಾಲೆಗಳ ಪೈಪೋಟಿ ಎದುರಿಸುತ್ತಿರುವ ಸರಕಾರಿ ಶಾಲೆಗಳಿಗೆ ಸುರಕ್ಷಿತ ಕಟ್ಟಡ ಒದಗಿಸುವುದು ಅಗತ್ಯವಾಗಿದೆ.
ಮಳೆಯಿಂದಾಗಿ ದುರಂತ ಸಂಭವಿಸಿರುವ ಸ್ಥಳಗಳಲ್ಲಿ ವೇಗವಾಗಿ ಪರಿಹಾರ ಕಾರ್ಯಗಳು ನಡೆಯಬೇಕು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಪರಿಹಾರ ಕಾರ್ಯದಲ್ಲಿ ತೊಡಗಿದೆ. ಇದಕ್ಕೆ ಉನ್ನತ ತಂತ್ರಜ್ಞಾನದ ಸ್ಪರ್ಶ ನೀಡುವುದು ಅಗತ್ಯವಾಗಿದೆ.