ಡೈಮಂಡ್ ಲೀಗ್: ಅಜೇಯ ಗೆಲುವಿನ ದಾಖಲೆ ಮುಂದುವರಿಸುವತ್ತ ನೀರಜ್ ಚೋಪ್ರಾ ಚಿತ್ತ

Update: 2023-08-30 17:06 GMT

ಹೊಸದಿಲ್ಲಿ, ಆ.30: ಇತ್ತೀಚೆಗಷ್ಟೇ ವಿಶ್ವ ಚಾಂಪಿಯನ್ ಕಿರೀಟ ಧರಿಸಿರುವ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಡೈಮಂಡ್ ಲೀಗ್ ಕ್ರೀಡಾಕೂಟದಲ್ಲಿ ತನ್ನ ಅಜೇಯ ಗೆಲುವಿನ ದಾಖಲೆ ಮುಂದುವರಿಸುವತ್ತ ಚಿತ್ತಹರಿಸಿದ್ದಾರೆ.

ಝುರಿಚ್ನಲ್ಲಿ ಗುರುವಾರ ಆರಂಭವಾಗಲಿರುವ ಪ್ರತಿಷ್ಠಿತ ಪುರುಷರ ಜಾವೆಲಿನ್ ಎಸೆತದ ಸ್ಪರ್ಧಾವಳಿಯಲ್ಲಿ ತನ್ನ ಕೌಶಲ್ಯವನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ.

ಚೋಪ್ರಾ ರವಿವಾರ ಬುಡಾಪೆಸ್ಟ್ನಲ್ಲಿ ತನ್ನ ಚೊಚ್ಚಲ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಫೈನಲ್ನಲ್ಲಿ ತನ್ನ 2ನೇ ಪ್ರಯತ್ನದಲ್ಲಿ 88.17 ಮೀ.ದೂರಕ್ಕೆ ಜಾವೆಲಿನ್ ಎಸೆದಿರುವ ಚೋಪ್ರಾ ಈ ಸಾಧನೆ ಮಾಡಿದ್ದಾರೆ. 2022ರ ಆವೃತ್ತಿಯ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಜಯಿಸಿದ್ದ ಚೋಪ್ರಾ ಈ ಬಾರಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಐತಿಹಾಸಿಕ ಚಿನ್ನ ಗೆಲ್ಲುವುದರೊಂದಿಗೆ ಚೋಪ್ರಾ ಜಾವೆಲಿನ್ ಎಸೆತಗಾರರ ಇಲೈಟ್ ಕ್ಲಬ್ಗೆ ಸೇರಿದ್ದಾರೆ. ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿಗಳನ್ನು ಜಯಿಸಿರುವ ಮೂರನೇ ಅತ್ಲೀಟ್ ಆಗಿದ್ದಾರೆ.

ಝೆಕ್ ಗಣರಾಜ್ಯದ ಜಾನ್ ಝೆಲೆಝ್ನಿ ಹಾಗೂ ನಾರ್ವೆಯ ಆ್ಯಂಡ್ರಿಯಸ್ ಥೋರ್ಕಿಲ್ಡಸನ್ ಪ್ರತಿಷ್ಠಿತ ಗುಂಪಿನಲ್ಲಿರುವ ಇನ್ನಿಬ್ಬರು ಜಾವೆಲಿನ್ ಎಸೆತಗಾರರಾಗಿದ್ದಾರೆ.

ಝೆಲೆಝ್ನಿ 1992, 1996 ಹಾಗೂ 2000ರಲ್ಲಿ ಒಲಿಂಪಿಕ್ಸ್ನಲ್ಲಿ ಚಿನ್ನ ಜಯಿಸಿದ್ದಾರೆ. 1993, 1995 ಹಾಗೂ 2001ರಲ್ಲಿ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಜಯಿಸಿದ್ದರು. ಥೋರ್ಕಿಲ್ಡ್ಸನ್ 2008ರ ಒಲಿಂಪಿಕ್ಸ್ ಹಾಗೂ 2009ರ ವಿಶ್ವ ಚಾಂಪಿಯನ್ಶಿಪ್ಗಳಲ್ಲಿ ಚಿನ್ನದ ಪದಕ ಜಯಿಸಿದ್ದರು.

25ರ ಹರೆಯದ ಚೋಪ್ರಾ ಪ್ರಸಕ್ತ ಋತುವಿನಲ್ಲಿ ಅಜೇಯ ಗೆಲುವಿನ ದಾಖಲೆ ಹೊಂದಿದ್ದಾರೆ. ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಾಂಪಿಯನ್ ಆಗುವ ಮೊದಲು ದೋಹಾ(ಮೇ 5) ಹಾಗೂ ಲಾಸಾನ್ನಲ್ಲಿ(ಜೂ.30)ನಡೆದಿರುವ ಎರಡು ಡೈಮಂಡ್ ಲೀಗ್ ಕ್ರೀಡಾಕೂಟಗಳಲ್ಲಿ ಜಯ ಸಾಧಿಸಿದ್ದಾರೆ.

ಝೂರಿಚ್ನಲ್ಲಿ ಚೋಪ್ರಾ ಪ್ರತಿಸ್ಪರ್ಧಿಗಳಾದ ಝೆಕ್ ಗಣರಾಜ್ಯದ ಜೇಕಬ್ ವಡ್ಲೆಜ್, ಜರ್ಮನಿಯ ಜೂಲಿಯನ್ ವೆಬರ್ ಹಾಗೂ ಎರಡು ಬಾರಿಯ ವಿಶ್ವ ಚಾಂಪಿಯನ್ , ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್ರನ್ನು ಎದುರಿಸಲಿದ್ದಾರೆ. ವಡ್ಲೆಜ್ ಬುಡಾಪೆಸ್ಟ್ನಲ್ಲಿ 86.67 ಮೀ.ದೂರಕ್ಕೆ ಜಾವೆಲಿನ್ ಎಸೆದು ಕಂಚಿನ ಪದಕ ಜಯಿಸಿದ್ದರು.

ಕಳೆದ ವರ್ಷ ಡೈಮಂಡ್ ಲೀಗ್ ಟ್ರೋಫಿ ಜಯಿಸಿದ್ದ ಚೋಪ್ರಾ ಸದ್ಯ ಎರಡು ಸ್ಪರ್ಧೆಗಳಲ್ಲಿ 16 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ವಡ್ಲೆಜ್(3 ಸ್ಪರ್ಧೆಗಳಲ್ಲಿ 21 ಅಂಕ) ಹಾಗೂ ಬುಡಾಪೆಸ್ಟ್ನಲ್ಲಿ 85.79 ಮೀ.ದೂರಕ್ಕೆ ಜಾವೆಲಿನ್ ಎಸೆದು ನಾಲ್ಕನೇ ಸ್ಥಾನ ಪಡೆದಿರುವ ವೆಬರ್(3 ಸ್ಪರ್ಧೆಗಳಿಂದ 19 ಅಂಕ)ಕ್ರಮವಾಗಿ ಮೊದಲನೇ ಹಾಗೂ 2ನೇ ಸ್ಥಾನದಲ್ಲಿದ್ದಾರೆ.

ಡೈಮಂಡ್ ಲೀಗ್ ಸೀರಿಸ್ನಲ್ಲಿ ಝೂರಿಚ್ ಸ್ಪರ್ಧೆಯು ಕೊನೆಯದ್ದಾಗಿದ್ದು ಅಮೆರಿಕದಲ್ಲಿ ಸೆಪ್ಟಂಬರ್ 16-17ರಂದು ನಡೆಯುವ ಫೈನಲ್ನಲ್ಲಿ ಗೆಲ್ಲುವ ಕ್ರೀಡಾಪಟು ಡೈಮಂಡ್ ಲೀಗ್ ಚಾಂಪಿಯನ್ ಕಿರೀಟ ಧರಿಸಲಿದ್ದಾರೆ.

ಅಂಕಪಟ್ಟಿಯಲ್ಲಿರುವ ಅಗ್ರ-6 ಕ್ರೀಡಾಳುಗಳು ಅಮೆರಿಕದಲ್ಲಿ ಸ್ಪರ್ಧಿಸಲಿದ್ದಾರೆ. ಝೂರಿಚ್ನಲ್ಲಿ ನಡೆದಿದ್ದ 2022ರ ಫೈನಲ್ನಲ್ಲಿ ಚೋಪ್ರಾ ಪ್ರಶಸ್ತಿ ಜಯಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News