ಉಳ್ಳಾಲ: ಸಿಡಿಲು ಬಡಿದು ದಿನಸಿ ಅಂಗಡಿಗೆ ಹಾನಿ; ಅಪಾರ ನಷ್ಟ
ಉಳ್ಳಾಲ: ಸಿಡಿಲು ಬಡಿದು ದಿನಸಿ ಅಂಗಡಿ ಸುಟ್ಟು ಭಸ್ಮವಾದ ಘಟನೆ ಇಂದು ಮುಂಜಾನೆ ವೇಳೆ ಮುನ್ನೂರು ಗ್ರಾಮದ ರಾಣಿಪುರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ರಾಣಿಪುರ ಚರ್ಚ್ ಎದುರಿನ ಪೀಟರ್ ಆಪೊಸು ಎಂಬವರ ದಿನಸಿ ಅಂಗಡಿಗೆ ಸಿಡಿಲು ಬಡಿದಿದೆ. ಘಟನೆ ವೇಳೆ ಪೀಟರ್ ಮತ್ತು ಮನೆಯವರು ನಿದ್ರೆಯಲ್ಲಿದ್ದರು. ದಾರಿ ಹೋಕರೊಬ್ಬರು ಅಂಗಡಿಗೆ ಬೆಂಕಿ ಬಿದ್ದಿರುವುದನ್ನ ಕಂಡು ಮನೆ ಮಂದಿಗೆ ತಿಳಿಸಿದ್ದಾರೆ.ತಕ್ಷಣ ಎಚ್ಚೆತ್ತ ಪೀಟರ್ ಕುಟುಂಬ ಅಗ್ನಿ ಶಾಮಕದಳಕ್ಕೆ ಕರೆಮಾಡಿದ್ದು, ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಮನೆಗೆ ವ್ಯಾಪಿಸುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಿಂದ ಮೂರು ರೆಫ್ರಿಜರೇಟರ್ ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ದಿನಸಿ ದಾಸ್ತಾನು ಸುಟ್ಟು ಕರಕಲಾಗಿದೆ.ಇತರ ಇಲೆಕ್ಟ್ರಾನಿಕ್ ಉಪಕರಣಗಳು ಕೆಟ್ಟು ಹೋಗಿವೆ. ಅಂಗಡಿ,ಮನೆ ಒಟ್ಟಿಗೆ ಇದ್ದು ಕಟ್ಟಡದ ಗೋಡೆ ಬಿರುಕು ಬಿಟ್ಟಿದೆ.ಸ್ಥಳಕ್ಕೆ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಲ್ಫ್ರೆಡ್ ಡಿ ಸೋಜ, ಮಾಜಿ ಉಪಾಧ್ಯಕ್ಷ ನವೀನ್ ಡಿ ಸೋಜಾ,ಕಂದಾಯ ನಿರೀಕ್ಷರು, ಗ್ರಾಮಲೆಕ್ಕಾಧಿಕಾರಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.