ಹರ್ಯಾಣ: ಷರತ್ತು ವಿಧಿಸಿದ್ದರೂ ಹಿಂದುತ್ವ ಸಂಘಟನೆಯ ಸಮಾವೇಶದಲ್ಲಿ ದ್ವೇಷ ಭಾಷಣ
ಹೊಸದಿಲ್ಲಿ: ಹರ್ಯಾಣದಲ್ಲಿ ಹಿಂದುತ್ವ ಸಂಘಟನೆಯೊಂದರ ಬೃಹತ್ ಸಮಾವೇಶಕ್ಕೆ ಅನುಮತಿ ನೀಡುವಾಗ "ದ್ವೇಷದ ಭಾಷಣ ಮಾಡಬಾರದು" ಎಂಬ ಷರತ್ತು ವಿಧಿಸಿದ ಹೊರತಾಗಿಯೂ ಇಂದು ಪಲ್ವಾಲ್ ಜಿಲ್ಲೆಯಲ್ಲಿ ಭದ್ರತೆಗೆ ನಿಯೋಜಿಸಿದ್ದ ಪೊಲೀಸರಿಗೆ ಕೆಲವು ಭಾಷಣಕಾರರು ಬಹಿರಂಗ ಬೆದರಿಕೆ ಹಾಕಿದ್ದಾರೆ ಎಂದು NDTV ರವಿವಾರ ವರದಿ ಮಾಡಿದೆ
ದ್ವೇಷದ ಭಾಷಣ ಮಾಡದಂತೆ ಭಾಷಣಕಾರರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಂಘಟಕರು ಹೇಳುತ್ತಿದ್ದಾರೆ, ಆದರೆ ಕೆಲವು ಭಾಷಣಕಾರರು ಅದನ್ನು ನಿರ್ಲಕ್ಷಿಸಿದ್ದಾರೆ.
ಒಬ್ಬ ಭಾಷಣಕಾರ, "ನೀವು ಬೆರಳು ಎತ್ತಿದರೆ, ನಿಮ್ಮ ಕೈಗಳನ್ನು ಕತ್ತರಿಸುತ್ತೇವೆ" ಎಂದು ಹೇಳುವುದು ಕೇಳಿಸಿದೆ. ಆದರೆ ಇನ್ನೊಬ್ಬ ಭಾಷಣಕಾರ ರೈಫಲ್ ಗಳಿಗೆ ಪರವಾನಗಿ ನೀಡುವಂತೆ ಒತ್ತಾಯಿಸಿದ್ದ.
ಎರಡು ವಾರಗಳ ಹಿಂದೆ ಹರ್ಯಾಣದ ನೂಹ್ ನಲ್ಲಿ ನಡೆದ ಕೋಮು ಹಿಂಸಾಚಾರದಲ್ಲಿ ಆರು ಜನರು ಸಾವನ್ನಪ್ಪಿದ ನಂತರ ಇಂದು ಸಭೆ ನಡೆಸಲಾಗುತ್ತಿದೆ. ಕಳೆದ ತಿಂಗಳು ನೂಹ್ ನಲ್ಲಿ ದಾಳಿಗೊಳಗಾದ ವಿಶ್ವ ಹಿಂದೂ ಪರಿಷತ್ನ ಧಾರ್ಮಿಕ ಮೆರವಣಿಗೆಯನ್ನು ಪೂರ್ಣಗೊಳಿಸುವ ಕುರಿತು "ಚರ್ಚಿಸಲು ಇಂದು ಹಿಂದುತ್ವ ಸಂಘಟನೆಯು ಮಹಾಪಂಚಾಯತ್ ಅನ್ನು ನೂಹ್ ನಲ್ಲಿ ನಡೆಸಲು ಯೋಜಿಸಿದ್ದವು. ಆದರೆ,ಪೊಲೀಸರಿಂದ ಅನುಮತಿ ನಿರಾಕರಿಸಿದ ನಂತರ ಅದನ್ನು 35 ಕಿಮೀ ದೂರದ ಪಲ್ವಾಲ್ ಗೆ ಸ್ಥಳಾಂತರಿಸಲಾಯಿತು.
ಮಹಾಪಂಚಾಯತ್ ಈಗ ಪಲ್ವಾಲ್-ನೂಹ್ ಗಡಿಯಲ್ಲಿರುವ ಪೊಂಡ್ರಿ ಗ್ರಾಮದಲ್ಲಿ ನಡೆಯುತ್ತಿದೆ. ಹಲವು ಷರತ್ತುಗಳ ಮೇಲೆ ಅನುಮತಿ ನೀಡಲಾಗಿದೆ ಎಂದು ಪಲ್ವಾಲ್ ಪೊಲೀಸ್ ವರಿಷ್ಠಾಧಿಕಾರಿ ಲೋಕೇಂದ್ರ ಸಿಂಗ್ ಹೇಳಿದ್ದಾರೆ.