ಮಾನವೀಯತೆ ಕಳೆದುಕೊಂಡವರ ಮುಂದೆ ವಿವಸ್ತ್ರಗೊಂಡ ಮಣಿಪುರ

Update: 2023-07-22 04:23 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮಣಿಪುರದ ಮೇಲೆ ದೌರ್ಜನ್ಯಗಳನ್ನು ಎಸಗುವುದು ತನ್ನ ಹಕ್ಕು ಎಂದು ಕೇಂದ್ರ ಸರಕಾರ ಭಾವಿಸಿದಂತಿದೆ. ಮಣಿಪುರ ಶಾಂತವಾಗಿರುವುದು ಕೇಂದ್ರ ಸರಕಾರಕ್ಕೂ ಬೇಕಿದ್ದಂತಿಲ್ಲ. ಈ ಬಾರಿ ಮಣಿಪುರಕ್ಕೆ ಸ್ವತಃ ಕೇಂದ್ರ ಸರಕಾರ ಖುದ್ದಾಗಿ ನಿಂತು ಬೆಂಕಿ ಹಚ್ಚಿದೆ. ಮೀಸಲಾತಿಯನ್ನು ಮುಂದಿಟ್ಟು ಅಲ್ಲಿಯ ಎರಡು ಸಮುದಾಯಗಳ ನಡುವೆ ಕಿಚ್ಚು ಹಚ್ಚಿರುವುದು ಸಂಘಪರಿವಾರ ನೇತೃತ್ವದ ಬಿಜೆಪಿ. ಬಳಿಕ ಗಲಭೆಗಳು ಭುಗಿಲೆದ್ದಾಗ ಅದನ್ನು ನಿಯಂತ್ರಿಸಲು ಯಾವ ಕ್ರಮವನ್ನೂ ತೆಗೆದುಕೊಳ್ಳದೆ ಹಿಂಸಾಚಾರಕ್ಕೆ ಕೇಂದ್ರ ಸರಕಾರ ಪೆಟ್ರೋಲ್ ಸುರಿಯಿತು. ಮಣಿಪುರ ಹೊತ್ತಿ ಉರಿಯುತ್ತಿದ್ದಾಗ, ಮಕ್ಕಳು ಮಹಿಳೆಯರು ದುಷ್ಕರ್ಮಿಗಳ ದಾಳಿಗೊಳಗಾಗುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸುತ್ತಿದ್ದರು. ರಾಜ್ಯ ವಿಧಾನಸಭಾ ಚುನಾವಣೆಯ ಬಳಿಕವಾದರೂ ಮಣಿಪುರದ ಕಡೆಗೆ ಗಮನ ಹರಿಸುತ್ತಾರೆ ಎಂಬ ನಿರೀಕ್ಷೆಯೂ ಹುಸಿಯಾಯಿತು. ಅಂತಿಮವಾಗಿ ಇಬ್ಬರು ಮಹಿಳೆಯರು ಸಾರ್ವಜನಿಕವಾಗಿ ವಿವಸ್ತ್ರಗೊಂಡು ಸಾಮೂಹಿಕವಾಗಿ ಅತ್ಯಾಚಾರಕ್ಕೊಳಗಾದ ದೃಶ್ಯ ವೀಡಿಯೋ ಮೂಲಕ ವೈರಲ್ ಆದಾಗ ದೇಶ ಮಾತ್ರವಲ್ಲ, ವಿಶ್ವವೇ ಮಣಿಪುರದೆಡೆಗೆ ನೋಡುವಂತಾಯಿತು.

ಮಣಿಪುರ ಭೀಕರವಾಗಿ ಗಾಯಗೊಂಡಾಗಲೆಲ್ಲ ಇಲ್ಲಿನ ಮಹಿಳೆಯರು ಜಗತ್ತಿನ ಗಮನ ಸೆಳೆಯಲು ಅನಿವಾರ್ಯವಾಗಿ ವಿವಸ್ತ್ರಗೊಂಡಿದ್ದಾರೆ. ಸೇನೆ ತನ್ನ ವಿಶೇಷಾಧಿಕಾರವನ್ನು ಬಳಸಿಕೊಂಡು (ಆಫ್ ಸ್ಪಾ) ಹಲವು ದಶಕಗಳಿಂದ ಮಣಿಪುರವನ್ನು ಶೋಷಿಸುತ್ತಾ ಬಂದಿದೆ ಮತ್ತು ಸೇನೆಯ ವಿಶೇಷಾಧಿಕಾರದಿಂದ ಅತಿ ಹೆಚ್ಚು ನೊಂದಿರುವುದು ಮಣಿಪುರದ ಮಹಿಳೆಯರೇ ಆಗಿದ್ದಾರೆ. ಇದರ ವಿರುದ್ಧ ಜಗತ್ತೇ ಅಚ್ಚರಿ ಪಡುವಂತೆ ಪ್ರತಿಭಟಿಸಿದವರೂ ಮಹಿಳೆಯರು. ವಿಶೇಷಾಧಿಕಾರವನ್ನು ಬಳಸಿಕೊಂಡು ಮಹಿಳೆಯರನ್ನು ಉಗ್ರಗಾಮಿಗಳೆಂದು ಬಂಧಿಸುವುದು, ಬಳಿಕ ಅವರ ಮೇಲೆ ಅತ್ಯಾಚಾರವೆಸಗುವುದು ಸಾಮಾನ್ಯವಾದಾಗ ಇದರ ವಿರುದ್ಧ ಮಣಿಪುರದ ಮಹಿಳೆಯರು ಸಂಘಟಿತವಾಗಿ ಬಂಡೆದ್ದರು. 2004 ರಲ್ಲಿ ತಂಜಮ್ಮ ನೋರಮ ಎಂಬ ಮಹಿಳೆಯ ಮೇಲೆ ಭೀಕರ ಅತ್ಯಾಚಾರ ಎಸಗಿದ ಸೇನೆ ಬಳಿಕ ಕೊಂದು ಹಾಕಿತ್ತು. ಆಕೆಯ ಮೇಲೆ ಎಷ್ಟು ಬರ್ಬರವಾಗಿ ಅತ್ಯಾಚಾರ ನಡೆದಿತ್ತೆಂದರೆ ಆಕೆಯ ಮರ್ಮಾಂಗ ಛಿದ್ರವಾಗಿತ್ತು. ಆಕೆಯ ದೇಹದಲ್ಲಿ 16 ಗುಂಡುಗಳು ಪತ್ತೆಯಾಗಿದ್ದವು. ಆಕೆಯ ಕೈ ಕಾಲುಗಳನ್ನು ಸೀಳಿ ಹಾಕಿದ್ದರು. ಇದರ ವಿರುದ್ಧ 2004ರ ಜುಲೈ ತಿಂಗಳಲ್ಲಿ ಇಂಫಾಲ ಕವೆಯ ಕಂಗ್ಲಾ ಕೋಟೆಯಲ್ಲಿ 12 ಮಣಿಪುರಿ ಮಹಿಳೆಯರು ಜಗತ್ತೇ ಬೆಚ್ಚಿ ಬೀಳುವ ರೀತಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡರು. ಅವರು ಸಾರ್ವಜನಿಕವಾಗಿ ಸಂಪೂರ್ಣ ನಗ್ನರಾಗಿ ‘ಸೇನೆಯೇ ಬನ್ನಿ ನಮ್ಮ ಮೇಲೆ ಅತ್ಯಾಚಾರ ವೆಸಗಿ’ ಎನ್ನುವ ಬ್ಯಾನರ್ ಹಿಡಿದು ನಿಂತರು. ‘ಬನ್ನಿ, ನಮ್ಮನ್ನು ಕೊಲ್ಲಿ, ಅತ್ಯಾಚಾರ ಮಾಡಿ, ನಮ್ಮ ಮಾಂಸಗಳನ್ನು ತಿನ್ನಿ’ ಎನ್ನುವ ಘೋಷಣಾ ಫಲಕಗಳು ಅವರ ಕೈಯಲ್ಲಿದ್ದವು. ‘‘ಭಾರತ ಸೇನೆಯು ನಮ್ಮ ಮೇಲೆ ಅತ್ಯಾಚಾರವೆಸಗಿದೆ. ನಾವೆಲ್ಲರೂ ಮನೋರಮಾ ಅವರ ತಾಯಂದಿರು’ ಎನ್ನುವ ಘೋಷಣೆಗಳನ್ನು ಕೂಗಿದರು. ಉಗ್ರಗಾಮಿಗಳು ಮತ್ತು ಭಾರತೀಯ ಸೇನೆಯಿಂದ ನಿರಂತರವಾಗಿ ಶೋಷಣೆಗೀಡಾದ ಮಹಿಳೆಯರ ಆಕ್ರೋಶದ ಧ್ವನಿಯಾಗಿತ್ತು ಅದು. ಈ ಪ್ರತಿಭಟನೆಯಿಂದ ಸರಕಾರ ಬೆಚ್ಚಿ ಬಿತ್ತು ಮಾತ್ರವಲ್ಲ, ಪ್ರತಿಭಟನೆಯ ಪರಿಣಾಮವಾಗಿ ಅಸ್ಸಾಂ ರೈಫಲ್ಸ್ ಕಂಗ್ಲಾ ಕೋಟೆಯನ್ನು ತೆರವುಗೊಳಿಸಿತು. ಇಂಫಾಲದ ಏಳು ವಿಭಾಗಗಳಿಂದ ಆಫ್ ಸ್ಪಾ ವನ್ನು ಹಿಂದೆಗೆಯಲಾಯಿತು.

ಮಣಿಪುರದಲ್ಲಿ ಭಾರತೀಯ ಸೇನೆ ಎಸಗುತ್ತಾ ಬಂದ ಅತ್ಯಾಚಾರವನ್ನು ಜಗತ್ತಿನ ಮುಂದೆ ತೆರೆದಿಟ್ಟ ಇನ್ನೊಬ್ಬಳು ಇರೋಮ್ ಶರ್ಮಿಳಾ. ಆಫ್ ಸ್ಪಾ ವನ್ನು ಹಿಂದೆಗೆಯಬೇಕು ಎಂದು ಒತ್ತಾಯಿಸಿ ಆಕೆ 2000 ಇಸವಿಯಿಂದ ಆಮರಣ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದರು. 2016ರವರೆಗೆ ಅದನ್ನು ಮುಂದುವರಿಸಿದರು. ಪೈಪ್ ನಲ್ಲಿ ಮೂಗಿನ ಮೂಲಕ ಸುಮಾರು 15 ವರ್ಷಗಳ ಕಾಲ ಆಕೆಗೆ ಬಲವಂತವಾಗಿ ಆಹಾರವನ್ನು ನೀಡುವ ಸ್ಥಿತಿ ನಿರ್ಮಾಣವಾಯಿತು. ಇರೋಮ್ ಶರ್ಮಿಳಾ ಶೋಷಿತ ಮಣಿಪುರದ ಸಂಕೇತವಾಗಿ ಬೆಳೆದರು. ಇರೋಮ್ ಶರ್ಮಿಳಾ ಹೋರಾಟವನ್ನು ನುಂಗಿ ನೀರು ಕುಡಿಯುವಲ್ಲಿ ಕೇಂದ್ರದ ನಾಯಕರು ಕೊನೆಗೂ ಯಶಸ್ವಿಯಾದರು. ಆದರೆ ಮಣಿಪುರದ ಮಹಿಳಾ ಧ್ವನಿಯನ್ನು ಅಡಗಿಸುವುದು ಮಾತ್ರ ಸಾಧ್ಯವಾಗಲಿಲ್ಲ. ಎನ್ಆರ್ ಸಿ ಮತ್ತುಸಿಎಎ ಕಾಯ್ದೆಯ ವಿರುದ್ಧ ಮಣಿಪುರ ಮಹಿಳೆಯರು ಸಂಘಟಿಸಿದ ಹೋರಾಟದಿಂದಾಗಿ ಮಣಿಪುರ ರಾಜ್ಯ ಸರಕಾರ, ಕಾಯ್ದೆಯ ವಿರುದ್ಧ ತನ್ನ ಹೇಳಿಕೆಯನ್ನು ದಾಖಲಿಸುವಂತಹ ಸ್ಥಿತಿ ನಿರ್ಮಾಣವಾಯಿತು. ಖೈರಾ ಬಂದ್ ಬಝಾರ್ ನ ಮಹಿಳಾ ವ್ಯಾಪಾರಿಗಳು 2019 ಜನವರಿ 19ರಂದು ಸಂಘಟಿಸಿದ ಬೃಹತ್ ಹೋರಾಟ ಸಿಎಎ ವಿರುದ್ಧದ ಎಲ್ಲ ಹೋರಾಟಗಳಿಗೆ ಸ್ಫೂರ್ತಿಯಾಯಿತು. ಈ ಪ್ರತಿಭಟನೆಯಲ್ಲಿ 4,000ಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದರು. ಯಾವುದೇ ರಾಜಕೀಯ ಅಥವಾ ಸಾಮಾಜಿಕ ವಿಷಯಗಳನ್ನು ಮುಂದಿಟ್ಟು ನಡೆಸುವ ಪ್ರತಿಭಟನೆಗಳಲ್ಲಿ ಈ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ಮಹಿಳೆಯರು ಮುಂಚೂಣಿಯಲ್ಲಿರುತ್ತಾರೆ.

ಬ್ರಿಟಿಷರ ಕಾಲದಿಂದಲೇ ಮಣಿಪುರದ ಧ್ವನಿಯಾಗುತ್ತಾ ಬಂದವರು ಇಲ್ಲಿನ ಮಹಿಳೆಯರು. 1904 ಮತ್ತು 1939ರ ಆಂದೋಲನದ ನೇತೃತ್ವವನ್ನು ಇಲ್ಲಿನ ಮಹಿಳೆಯರೇ ವಹಿಸಿಕೊಂಡಿದ್ದರು. ರಾಣಿ ಗೈಡಿನ್ಲಿಯ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ನಡೆದ ಹೋರಾಟ, ನೀರಿನ ತೆರಿಗೆಯ ವಿರುದ್ಧ ಅಂದಿನ ರಾಜನ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಇಲ್ಲಿನ ಮಹಿಳೆಯರೇ ಗುರುತಿಸಿಕೊಂಡಿದ್ದರು. 1969ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಇಂಫಾಲದಲ್ಲಿ ರ್‍ಯಾಲಿ ಹಮ್ಮಿಕೊಂಡಾಗ ಸಾವಿರಾರು ಮಹಿಳೆಯರು ಪ್ರಧಾನಿಯ ವಿರುದ್ಧ ಕಪ್ಪು ಬಾವುಟಗಳನ್ನು ಹಿಡಿದು ಪ್ರತಿಭಟಿಸಿದ್ದರು. ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಸದಾ ಧ್ವನಿಯೆತ್ತಿದ ಹೆಗ್ಗಳಿಕೆ ಇವರದು. ಮಣಿಪುರದಲ್ಲಿ ಇತ್ತೀಚೆಗೆ ಹಿಂಸಾಚಾರ ಭುಗಿಲೆದ್ದಾಗ ಸರಕಾರದ ಮೌನವನ್ನು ವಿರೋಧಿಸಿ ಮಹಿಳೆಯರು ಸಂಘಟಿತರಾಗಿ ಬೀದಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ರಾಜೀನಾಮೆಯನ್ನು ನೀಡುವ ಸ್ಥಿತಿಯೂ ನಿರ್ಮಾಣವಾಗಿತ್ತು. ಅಂತಿಮವಾಗಿ ಮುಖ್ಯಮಂತ್ರಿ ರಾಜೀನಾಮೆ ನೀಡಬಾರದು, ರಾಜ್ಯದ ನಿಯಂತ್ರಣವನ್ನು ಸಂಪೂರ್ಣವಾಗಿ ಕೈಗೆ ತೆಗೆದುಕೊಳ್ಳಬೇಕು ಎಂದು ಅವರ ಜೊತೆಗೆ ನಿಂತವರೂ ಮಹಿಳೆಯರು. ಆ ಮಹಿಳೆಯರನ್ನೇ ಮುಂದಿಟ್ಟುಕೊಂಡು ತನ್ನ ರಾಜೀನಾಮೆ ನಿರ್ಧಾರದಿಂದ ಮುಖ್ಯಮಂತ್ರಿ ಹಿಂದೆ ಸರಿದರು.

ಕೇಂದ್ರದ ಸರ್ವಾಧಿಕಾರಿ ನೀತಿಯ ವಿರುದ್ಧ ಪ್ರತಿರೋಧಗಳನ್ನು ತೋರಿಸುತ್ತಾ ಬಂದಿದ್ದ ಮಣಿಪುರದ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾಗಿಯೇ ಅಲ್ಲಿನ ಎರಡು ಸಮುದಾಯಗಳ ನಡುವೆ ಕಿಚ್ಚು ಹಚ್ಚಲಾಗಿದೆಯೇ ಎನ್ನುವ ಅನುಮಾನ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಪುರದ ಕುರಿತಂತೆ ಕೇಂದ್ರ ಸರಕಾರದ ದಿವ್ಯ ನಿರ್ಲಕ್ಷ ಪರೋಕ್ಷವಾಗಿ ‘ಮಣಿಪುರ ಭಾರತದ ಭಾಗವಲ್ಲ’ ಎನ್ನುವುದನ್ನು ಪ್ರತಿಪಾದಿಸುತ್ತಿದೆ. ಸೇನೆಯ ವಿಶೇಷಾಧಿಕಾರದ ವಿರುದ್ಧ ಮಣಿಪುರ ತೋರಿದ ಪ್ರತಿರೋಧಕ್ಕೆ ಪ್ರತಿಯಾಗಿ ಮಣಿಪುರವನ್ನು ಬಗ್ಗು ಬಡಿಯಲು ಅಲ್ಲಿನ ಜನರನ್ನೇ ಕೇಂದ್ರ ಸರಕಾರ ಬಳಸಿಕೊಳ್ಳುತ್ತಿದೆಯೇ ಎಂದು ಪ್ರಶ್ನಿಸುವಂತಾಗಿದೆ. ಮಣಿಪುರದ ಹಕ್ಕಿಗಾಗಿ ಸದಾ ಧ್ವನಿಯೆತ್ತುತ್ತಾ ಬಂದಿರುವ ಮಹಿಳೆಯರೇ ಈ ಹಿಂಚಾಚಾರಕ್ಕೆ ನೇರ ಗುರಿಯಾಗುತ್ತಿರುವುದು ವಿಪರ್ಯಾಸ. ಆಫ್ ಸ್ಪಾ ಮಣಿಪುರವನ್ನು ರಕ್ಷಿಸುವುದಕ್ಕಾಗಿ ಅಸ್ತಿತ್ವದಲ್ಲಿದೆ ಎಂದಾದರೆ, ಅಲ್ಲಿ ಈಗ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಲು ಅಲ್ಲಿ ನೆಲೆಗೊಳಿಸಿರುವ ಸೇನೆಗಳಿಗೆ ಯಾಕೆ ಸಾಧ್ಯವಾಗುತ್ತಿಲ್ಲ? ಕೇಂದ್ರ ಸರಕಾರ ಮಣಿಪುರಕ್ಕೆ ಬಗೆದಿರುವ ದ್ರೋಹ ಭವಿಷ್ಯದಲ್ಲಿ ಆ ರಾಜ್ಯವನ್ನು ಭಾರತದಿಂದ ಇನ್ನಷ್ಟು ದೂರಗೊಳಿಸಲಿದೆ ಎನ್ನುವುದನ್ನು ಬಿಜೆಪಿ ನಾಯಕರೇ ಒಪ್ಪಿಕೊಳ್ಳುತ್ತಿದ್ದಾರೆ. ಮಣಿಪುರವನ್ನು ಸಂಘಪರಿವಾರದ ಹಿಂದುತ್ವವಾದದ ಪ್ರಯೋಗಕ್ಕೆ ಒಪ್ಪಿಸಿದ ಪರಿಣಾಮವನ್ನು ಇದೀಗ ಅಲ್ಲಿನ ಜನರು ಅನುಭವಿಸುತ್ತಿದ್ದಾರೆ. ಸಂಘಪರಿವಾರದ ಕನಸಿನ ಭಾರತವನ್ನು ನಾವು ಮಣಿಪುರದಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದೇವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News