“ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ತಗ್ಗಿಸಬೇಕಿದೆ”: ತರಕಾರಿ ಮಾರಾಟಗಾರನ ಮನಕಲಕುವ ವೀಡಿಯೋ ಶೇರ್‌ ಮಾಡಿದ ರಾಹುಲ್‌ ಗಾಂಧಿ

Update: 2023-07-29 07:38 GMT

ಹೊಸದಿಲ್ಲಿ: ದೇಶವನ್ನು ಎರಡು ವರ್ಗಗಳನ್ನಾಗಿ ವಿಭಜಿಸಲಾಗುತ್ತಿದೆ; ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಕಡಿಮೆಗೊಳಿಸುವ ಅಗತ್ಯವಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಗಗನಕ್ಕೇರುತ್ತಿರುವ ತರಕಾರಿ ಬೆಲೆಗಳಿಂದ ತಾನು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸುವಾಗ ತರಕಾರಿ ಮಾರಾಟಗಾರರೊಬ್ಬರು ಭಾವಾತ್ಮಕವಾಗಿ ಮಾತನಾಡಿರುವ ಜುಲೈ 20ರ ವೀಡಿಯೋ ತುಣುಕೊಂದನ್ನು ಶೇರ್‌ ಮಾಡಿ ರಾಹುಲ್‌ ಮೇಲಿನಂತೆ ಹೇಳಿದ್ದಾರೆ.

“ದೇಶವನ್ನು ಎರಡು ವರ್ಗಗಳನ್ನಾಗಿ ವಿಭಜಿಸಲಾಗುತ್ತಿದೆ. ಒಂದು ಕಡೆ ಆಡಳಿತದ ಮಂದಿಯ ರಕ್ಷಣೆಯಿರುವ ಪ್ರಬಲ ಜನರಿದ್ದಾರೆ ಹಾಗೂ ಇವರ ಸೂಚನೆ ಮೇರೆಗೆ ನೀತಿಗಳನ್ನು ರಚಿಸಲಾಗುತ್ತದೆ. ಇನ್ನೊಂದೆಡೆ ಸಾಮಾನ್ಯ ಭಾರತೀಯರಿದ್ದಾರೆ, ಅವರಿಗೆ ಮೂಲಭೂತ ಅವಶ್ಯಕತೆಗಳಾದ ತರಕಾರಿಗಳೂ ಕೈಗೆಟಕುತ್ತಿಲ್ಲ. ಈ ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ತಗ್ಗಿಸಬೇಕಿದೆ ಮತ್ತು ಬಡವರ ಕಣ್ಣೀರನ್ನು ಒರೆಸಬೇಕಿದೆ,” ಎಂದು ರಾಹುಲ್‌ ಹಿಂದಿ ಭಾಷೆಯಲ್ಲಿ ಮಾಡಿದ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಕೂಡ ಈ ವೀಡಿಯೋ ಟ್ವೀಟ್‌ ಮಾಡಿ ಆಡಳಿತ ಬಿಜೆಪಿಯನ್ನು ಮತ್ತು ಪ್ರಧಾನಿಯನ್ನು ಟೀಕಿಸಿದ್ದಾರೆ.

ಆಡಳಿತ ಪಕ್ಷದ ಸದಸ್ಯರು ಕ್ಷುಲ್ಲಕ ವಿಚಾರಗಳ ಕುರಿತಂತೆ ಸಂಸತ್ತಿನಲ್ಲಿ ಬೊಬ್ಬೆ ಹೊಡೆಯುತ್ತಾರೆ ಮತ್ತು ಪ್ರಧಾನಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

“ಸುದ್ದಿ ವಾಹಿನಿಗಳು ಸರ್ಕಾರದ ಮಖವಾಣಿಗಳಾಗಿವೆ ಮತ್ತು ಜನರ ಸಮಸ್ಯೆಗಳಿಂದ ದೂರ ಇವೆ. ಇವುಗಳ ನಡುವೆ ಜನಸಾಮಾನ್ಯರ ನೋವು ಯಾರಿಗೂ ಅರ್ಥವಾಗುತ್ತಿಲ್ಲ,” ಎಂದು ಅವರು ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News