ತುಮಕೂರು ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ

Update: 2024-04-03 13:38 GMT

ತುಮಕೂರು : ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಅವರು ಬುಧವಾರ ನಗರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‍ನ ಕಾರ್ಯಕರ್ತರು, ಬೆಂಬಲಿಗರದೊಂದಿಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ನಗರದ ಬಿ.ಎಚ್.ರಸ್ತೆಯ ವಿನಾಯಕ ನಗರದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಹಾಗೂ ಬಿಜೆಪಿ, ಜೆಡಿಎಸ್ ನಾಯಕರು, ನಂತರ ಎರಡೂ ಪಕ್ಷಗಳ ಸಹಸ್ರಾರು ಸಂಖ್ಯೆಯ ಬೆಂಬಲಿಗರ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆ ಉದ್ದಕ್ಕೂ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ತಮ್ಮ ಪಕ್ಷಗಳ ಬಾವುಟ ಪ್ರದರ್ಶಿಸಿ ಸಂಭ್ರಮಿಸಿದರು. ಮೋದಿ, ಮೋದಿ ಮತ್ತೊಮ್ಮೆ ಮೋದಿ, ಜೈಶ್ರೀರಾಮ್ ಘೋಷಣೆಗಳೊಂದಿಗೆ ಬಿ.ಎಚ್.ರಸ್ತೆಯ ಗಣಪತಿ(ಅರ್ಧನಾರೀಶ್ವರ)ದೇವಾಲಯದಿಂದ ಮೆರವಣಿಗೆ ಲಕ್ಕಪ್ಪ ಸರ್ಕಲ್,ಟೌನ್‍ಹಾಲ್ ಸರ್ಕಲ್, ಎಂ.ಜಿ.ರಸ್ತೆ,ಗುಂಚಿ ಚೌಕ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೂ ತೆರಳಿ ನಾಮಪತ್ರ ಸಲ್ಲಿಸಿದರು.

ಮೆರವಣಿಗೆಯಲ್ಲಿ ಬಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಸೋಮಣ್ಣನವರ ನಾಮಪತ್ರ ಸಲ್ಲಿಕೆಗೆ ಎರಡೂ ಪಕ್ಷಗಳ ಇಷ್ಟೊಂದು ಜನ ಸೇರಿರುವುದು ದೊಡ್ಡ ದಾಖಲೆ. ಇದು ಸೋಮಣ್ಣ ಅವರ ಗೆಲುವಿನ ಮುನ್ಸೂಚನೆ, ಸೋಮಣ್ಣ ಎರಡು ಲಕ್ಷ ಮತಗಳ ಅಂತರದಿಂದ ಚುನಾವಣೆಯಲ್ಲಿ ಜಯಗಳಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು. 

ಪ್ರಧಾನಿ ನರೇಂದ್ರ ಮೋದಿಯವರು ರೈತರಿಗೆ ನೀಡುವ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೀಡುವ ಆರು ಸಾವಿರ ರೂ.ಗಳ ಜೊತೆಗೆ ನಾವು ಮುಖ್ಯಮಂತ್ರಿಯಾಗಿದ್ದಾಗ ನಾಲ್ಕು ಸಾವಿರ ರೂ. ಸೇರಿಸಿ ಹತ್ತು ಸಾವಿರ ರೂ.ಗಳನ್ನು ರೈತರ ಬ್ಯಾಂಕ್ ಅಕೌಂಟಿಗೆ ಹಾಕುತ್ತಿದ್ದೆವು. ಸಿದ್ದರಾಮಯ್ಯ ಸರಕಾರ ಆ ಹಣ ನಿಲ್ಲಿಸಿ, ರೈತರಿಗೆ ಅನ್ಯಾಯ ಮಾಡಿದೆ. ಬಿಜೆಪಿ ಸರಕಾರವಿದ್ದಾಗ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮಿ ಯೋಜನೆಯಿಂದ ಕೋಟ್ಯಾಂತರ ಮಹಿಳೆಯರಿಗೆ ಅನುಕೂಲ ವಾಗುತ್ತಿತ್ತು. ಆ ಯೋಜನೆಯನ್ನು ಏಕೆ ಸ್ಥಗಿತಗೊಳಿಸಿದ್ದೀರಿ ಎಂದು ಯಡಿಯೂರಪ್ಪ ಕಾಂಗ್ರೆಸ್ ಸರಕಾರವನ್ನು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ವಿ.ಸೋಮಣ್ಣ ಅವರಿಗೆ ತುಮಕೂರು ಕ್ಷೇತ್ರದ ಎರಡೂ ಪಕ್ಷದ ಜನ ಅಭೂತಪೂರ್ವವಾಗಿ ಬೆಂಬಲ ನೀಡಿದ್ದೀರಿ, ಇಷ್ಟು ಜನ ಸೇರಿರುವುದು ಐತಿಹಾಸಿಕ ದಾಖಲೆ. ರಾಜ್ಯದ ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಗೆ ಜನ ಬೇಸತ್ತಿದ್ದಾರೆ. ಕಾಂಗ್ರೆಸ್ ಸರಕಾರದವರು ಪದೇ ಪದೇ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಿವುದು ಬಿಟ್ಟರೆ ಜನರ ಸಂಕಷ್ಟ ನಿವಾರಣೆಗೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಬರದಿಂದ ರೈತರು, ಜನ ತತ್ತರಿಸಿ ಹೋಗಿದ್ದಾರೆ ಅವರ ನೆರವಿಗೆ ಸರಕಾರ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ದೇಶದ ಇವತ್ತಿನ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶ ಮುನ್ನಡೆಸಲು ಯೋಗ್ಯ ನಾಯಕ ಬೇಕು. ಭವಿಷ್ಯದ ಜನರಿಗೆ ಕನಸಿನ ಭಾರತ ನಿರ್ಮಾಣ ಮಾಡಬೇಕು ಎಂಬ ದೂರಾಲೋಚನೆಯಿಂದ ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಹಲವಾರು ನಾಯಕರು ಮೋದಿರವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಚಿಂತನೆ ಮಾಡಿ ಈ ಚುನಾವಣೆಗೆ ಸಜ್ಜಾಗಿದ್ದಾರೆ. ಇದೇ ಉದ್ದೇಶದಿಂದ ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಈ ಚುನಾವಣೆಯ ಗೆಲುವಿನೊಂದಿಗೆ ರಾಜ್ಯದಲೂ ಹೊಸ ಶಕೆ ಆರಂಭವಾಗಲಿದೆ. ಇದೇ ಏಪ್ರಿಲ್ ತಿಂಗಳ 26ರಂದು ನಡೆಯುವ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಆಶೀರ್ವಾದ ಮಾಡಿ ತಮಗೆ ಮತ ನೀಡುವಂತೆ ಮನವಿ ಮಾಡಿದರು.

ನಾಮಪತ್ರ ಸಲ್ಲಿಕೆಗೆ ಬಾರದ ಜೆ.ಸಿ.ಮಾಧುಸ್ವಾಮಿ

ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಟಿಕೇಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂದಾನ ನಡೆಸಿದ್ದರೂ ನಾಮಪತ್ರ ಸಲ್ಲಿಕೆಗೆ ಬರುತ್ತಾರೋ, ಇಲ್ಲವೋ ಎಂಬ ಗೊಂದಲ ಪಕ್ಷದ ಮುಖಂಡರಲ್ಲಿ ಮನೆ ಮಾಡಿತ್ತು. ಇದಕ್ಕೆ ಇಂಬು ಕೊಡುವಂತೆ ಇಂದು ಹಿರಿಯ ನಾಯಕರೆಲ್ಲಾ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದರೂ ಜೆ.ಸಿ.ಮಾಧುಸ್ವಾಮಿ ಮಾತ್ರ ಗೈರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News