ಉಡುಪಿ: ಡಿ.1ರಂದು ‘ಲೊಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್-2024’

Update: 2024-10-25 15:21 GMT

ಉಡುಪಿ, ಅ.25: ಶತಮಾನವನ್ನು ಪೂರ್ಣಗೊಳಿಸಿ ಮುನ್ನಡೆಯುತ್ತಿರುವ ಉಡುಪಿಯ ಲೊಂಬಾರ್ಡ್ ಆಸ್ಪತ್ರೆ (ಮಿಷನ್ ಆಸ್ಪತ್ರೆ)ಯ 101ನೇ ವಾರ್ಷಿಕೋತ್ಸವ ಹಾಗೂ ಉಡುಪಿ ರನ್ನರ್ ಕ್ಲಬ್‌ನ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಡಿ.1ರಂದು ‘ಲೊಂಬಾರ್ಡ್ ಆಸ್ಪತ್ರೆ ಉಡುಪಿ ಮ್ಯಾರಥಾನ್-2024’ನ್ನು ಆಯೋಜಿಸಲಾಗುತ್ತಿದೆ ಎಂದು ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಸುಶೀಲ್ ಜತ್ತನ್ನ ಹೇಳಿದ್ದಾರೆ.

ಉಡುಪಿಯ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಜನತೆಯ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡುವ ಧ್ಯೇಯದೊಂದಿಗೆ ಈ ಮ್ಯಾರಥಾನ್‌ನ್ನು ಉಡುಪಿ ರನ್ನರ್ ಕ್ಲಬ್‌ನ ಸಹಯೋಗದೊಂದಿಗೆ ಡಿ.1ರಂದು ಮಲ್ಪೆಯಲ್ಲಿ ಆಯೋಜಿಸಲಾಗುವುದು ಎಂದರು.

ಈ ಮ್ಯಾರಥಾನ್ ಮಲ್ಪೆಯ ಸೀ-ವಾಕ್‌ನಿಂದ ಬೆಳಗ್ಗೆ 5 ಗಂಟೆಗೆ ಪ್ರಾರಂಭಗೊಳ್ಳಲಿದೆ. ಸೀ-ವಾಕ್‌ನಿಂದ ಪಡುಕೆರೆ ಮಾರ್ಗವಾಗಿ ಉದ್ಯಾವರ-ಮಟ್ಟು ತನಕ ತಲುಪಿ ಬಳಿಕ ಅಲ್ಲಿಂದ ಹಿಂದಿರುಗಿ ಸೀ-ವಾಕ್ ನಲ್ಲೇ ಸಮಾಪನಗೊಳ್ಳಲಿದೆ ಎಂದು ಡಾ.ಜತ್ತನ್ನ ವಿವರಿಸಿದರು.

ಮ್ಯಾರಥಾನ್ ಸ್ಪರ್ಧೆಯ ಬಗ್ಗೆ ವಿವರಗಳನ್ನು ನೀಡಿದ ಉಡುಪಿ ರನ್ನರ್ ಕ್ಲಬ್‌ನ ಕಾರ್ಯದರ್ಶಿ ದಿವಾಕರ ಗಣಪತಿ ನಾಯಕ್, ಒಟ್ಟು ಮೂರು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದೆ.18ರಿಂದ 35 ವರ್ಷ, 36ರಿಂದ 50ವರ್ಷ ಹಾಗೂ 51ರಿಂದ ಮೇಲ್ಪಟ್ಟವರಿಗೆ ಪ್ರತ್ಯೇಕ ಸ್ಪರ್ಧೆಗಳಿರುತ್ತವೆ ಎಂದರು.

ಪುರುಷರು ಹಾಗೂ ಮಹಿಳೆಯರಿಗಾಗಿ 21ಕಿ.ಮೀ.ಗಳ ಹಾಫ್ ಮ್ಯಾರಥಾನ್ ನಡೆಯಲಿದೆ. ಅಲ್ಲದೇ 10ಕಿ.ಮೀ., 5ಕಿ.ಮೀ. ಸ್ಪರ್ಧೆಯೂ ಇರಲಿದೆ.ಜಿಲ್ಲೆಯ 18 ವರ್ಷದೊಳಗಿನ ವಿದ್ಯಾರ್ಥಿಗಳಿಗೆ 5ಕಿ.ಮೀ, 14 ವರ್ಷದೊಳಗಿನ ವಿದ್ಯಾರ್ಥಿಗಳಿಗೆ 3 ಕಿ.ಮೀ. ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ಇದರೊಂದಿಗೆ ಓಪನ್ ವಿಭಾಗದಲ್ಲಿ 3ಕಿ.ಮೀ.ಗಳ ‘ಫನ್ ರನ್’(ಖುಷಿ ಓಟ) ಕೂಡಾ ನಡೆಯಲಿದೆ. ಪ್ರತಿ ವಿಭಾಗದಲ್ಲಿ ಐವರು ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತದೆ. ಅಲ್ಲದೇ ಅತೀಹೆಚ್ಚು ಸಂಖ್ಯೆ ಯಲ್ಲಿ ಭಾಗವಹಿಸಿದ ಶಾಲೆಗೆ ಮತ್ತು ಅತೀ ಹೆಚ್ಚು ಪಾಯಿಂಟ್ ಸಂಗ್ರಹಿಸಿದ ಶಾಲೆಗೆ ತಂಡ ಪ್ರಶಸ್ತಿ ನೀಡಲಾಗುತ್ತದೆ ಎಂದು ದಿವಾಕರ್ ತಿಳಿಸಿದರು.

1500 ಮಂದಿ ನೊಂದಣಿ ನಿರೀಕ್ಷೆ: ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು1,500ಕ್ಕೂ ಅಧಿಕ ಕ್ರೀಡಾಪಟು ಗಳು ಭಾಗವಹಿಸುವ ನಿರೀಕ್ಷೆ ಇದೆ. ಸ್ಪರ್ಧೆಗೆ ಹೆಸರು ನೊಂದಣಿ ಪ್ರಕ್ರಿಯೆ ಈಗಾಗಲೇ ಪ್ರಾರಂಭ ಗೊಂಡಿದ್ದು, ನ.21 ಹೆಸರು ನೊಂದಣಿಗೆ ಕೊನೆಯ ದಿನವಾಗಿದೆ. ಸ್ಪರ್ಧೆಯ ನಿಯಮ ಹಾಗೂ ನೊಂದಾವಣಿ ವಿವರಗಳಿಗೆ:+91 9844741471, +91 9886245661, +91 8105535847 ಈ ಮೊಬೈಲ್‌ಗಳನ್ನು ಸಂಪರ್ಕಿಸಬ ಹುದು ಎಂದು ಅವರು ತಿಳಿಸಿದರು.

ಪ್ರೋಮೋ ರನ್: ವಿಶ್ವ ಮಧುಮೇಹ ದಿನದ ಅಂಗವಾಗಿ ಲೊಂಬಾರ್ಡ್ ಆಸ್ಪತ್ರೆ ಮಿಷನ ಕಾಂಪೌಂಡಿನಿಂದ ಉಡುಪಿ ನಗರದ ಸುತ್ತ ಮ್ಯಾರಥಾನ್ ಪೂರ್ವಭಾವಿ ಓಟ ‘ಪ್ರೋಮೋ ರನ್’ನವೆಂಬರ್ 24ರ ರವಿವಾರದಂದು ನಡೆಯಲಿದೆ ಎಂದು ಡಾ.ಸುಶೀಲ್ ಜತ್ತನ್ನ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಡುಪಿ ರನ್ನರ್ ಕ್ಲಬ್‌ನ ಅಧ್ಯಕ್ಷ ಡಾ.ತಿಲಕ್ ಚಂದ್ರ ಪೈ, ಉಪಾಧ್ಯಕ್ಷ ಎಚ್.ಉದಯಕುಮಾರ್ ಶೆಟ್ಟಿ, ಖಜಾಂಚಿ ಸತೀಶ್ ಸಾಲ್ಯಾನ್ ಮಲ್ಪೆ ಹಾಗೂ ಮಿಷನ್ ಆಸ್ಪತ್ರೆಯ ಆಡಳಿತಾಧಿಕಾರಿ ದೀನಾ ಪ್ರಭಾವತಿ ಅವರು ಉಪಸ್ಥಿತರಿದ್ದರು.




 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News