ಅ.28: ಸಂಗೀತ ಸಭಾದಿಂದ ಹಿಂದೂಸ್ತಾನಿ ಸಂಗೀತ

Update: 2024-10-25 15:55 GMT

ಉಡುಪಿ, ಅ.25: ವಿವಿಧ ಶಾಸ್ತ್ರೀಯ ಕಲಾಪ್ರಕಾರಗಳಿಗೆ ಉತ್ತೇಜನ ನೀಡುತ್ತಾ ಬಂದಿರುವ ಉಡುಪಿಯ ಸಂಗೀತ ಸಭಾ ಇದೇ ಅ.28ರಂದು ಸೋಮವಾರ ಸಂಜೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಸಂಗೀತ ಸಭಾದ ಅಧ್ಯಕ್ಷ ಹಾಗೂ ತಬ್ಲಾ ವಾದಕ ಟಿ.ರಂಗ ಪೈ ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1962ರಲ್ಲಿ ವಿಜಯನಾಥ ಶೆಣೈ ಅವರಿಂದ ಸ್ಥಾಪನೆ ಗೊಂಡ ಸಂಗೀತ ಸಭಾ, ಉಡುಪಿಯ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಲಾಪ್ರಿಯರಿಗೆ ದೇಶ-ವಿದೇಶಗಳ ಖ್ಯಾತನಾಮ ಹಾಗೂ ಜನಪ್ರಿಯ ಕಲಾವಿದರ ಪ್ರತಿಭೆಯನ್ನು ಪರಿಚಯಿಸಿದೆ ಎಂದರು.

ಈ ಬಾರಿ ಪದ್ಮಭೂಷಣ ಪುರಸ್ಕೃತ ದಿ.ಪಂಡಿತ್ ರಾಜನ್ ಮಿಶ್ರಾ ಅವರ ಸಂಸ್ಮರಣಾರ್ಥ ಅ.28ರ ಸಂಜೆ 5:30ರಿಂದ ಅವರ ಪ್ರತಿಭಾನ್ವಿತ ಪುತ್ರರಾದ ಪಂಡಿತ್ ರಿತೇಶ್ ಮಿಶ್ರ ಹಾಗೂ ಪಂಡಿತ್ ರಜನೀಶ್ ಮಿಶ್ರರಿಂದ ಹಿಂದೂಸ್ತಾನಿ ಹಾಡು ಗಾರಿಕೆಯನ್ನು ಆಯೋಜಿಸಲಾಗಿದೆ. ಇದರೊಂದಿಗೆ ಧಾರವಾಡದ ಉಸ್ತಾದ್ ರಫೀಕ್‌ಖಾನ್‌ರಿಂದ ಸಿತಾರ ವಾದನ ಕಚೇರಿಯೂ ನಡೆಯಲಿದೆ. ತಬ್ಲಾದಲ್ಲಿ ಧಾರವಾಡದ ಹೇಮಂತ್ ಜೋಷಿ ಹಾಗೂ ಹಾರ್ಮೋನಿಯಂನಲ್ಲಿ ಉಡುಪಿಯ ಪ್ರಸಾದ್ ಕಾಮತ್ ಸಹಕರಿಸಲಿದ್ದಾರೆ ಎಂದರು.

ಈ ಕಾರ್ಯಕ್ರಮಕ್ಕೆ ಸಂಗೀತ ಪ್ರಿಯರು ಹಾಗೂ ಕಲಾ ಪ್ರಿಯರಿಗೆ ಮುಕ್ತ ಪ್ರವೇಶವಿದ್ದು, ಕರಾವಳಿಯ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರೋತ್ಸಾಹಿಸುವಂತೆ ಅವರು ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಗೀತ ಸಭಾದ ಸಂದ್ಯಾ ಕಾಮತ್ ಹಾಗೂ ಅಜಿತ್ ಪೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News