ಬ್ರಹ್ಮಾವರ ಕೃಷಿಮೇಳ; ಹೊಸ ಭತ್ತದ ತಳಿಗಳ ಬಿಡುಗಡೆ

Update: 2024-10-25 15:58 GMT

ಉಡುಪಿ, ಅ.25: ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಡಿಪ್ಲೋಮಾ ಕಾಲೇಜುಗಳು ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಾಳೆಯಿಂದ ಎರಡು ದಿನಗಳ ಕಾಲ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸುವ ಕೃಷಿ ಮೇಳ-2024ರಲ್ಲಿ ಹೊಸದಾಗಿ ಕೆಲವು ಭತ್ತದ ತಳಿಗಳನ್ನು ಪರಿಚಯಿಸಲಾ ಗುತ್ತಿದೆ ಎಂದು ಸಹ ಸಂಶೋಧನಾ ನಿರ್ದೇಶಕ ಡಾ.ಧನಂಜಯ ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಮೇಳದಲ್ಲಿ ಕೃಷಿಕರಿಗಾಗಿ ನಮ್ಮ ಕೇಂದ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾಗಿರುವ ಭತ್ತದ ತಳಿಗಳಾದ ಸಹ್ಯಾದ್ರಿ, ಬ್ರಹ್ಮ, ಸಹ್ಯಾದ್ರಿ ಪಂಚಮುಖಿ, ಕಜೆ 25-9 ಅಲ್ಲದೇ ಕೇಂದ್ರದಲ್ಲಿ ಪ್ರಯೋಗದಲ್ಲಿರುವ ಇತರ ತಳಿಗಳನ್ನು ಪರಿಚಯಿಸಲಾಗುವುದು ಎಂದರು.

ಅಲ್ಲದೇ ಕಾಡುಪ್ರಾಣಿಗಳ ಹಾವಳಿ ಕುರಿತು ಮಾಲಕರನ್ನು ಎಚ್ಚರಿಸುವ ಸ್ವಯಂ ಚಾಲಿತ ವ್ಯವಸ್ಥೆ ಅಲ್ಲದೇ ವಿವಿಧ ಕೃಷಿ ಯಂತ್ರೋಪಕರಮಗಳನ್ನು ಸಹ ರೈತರಿಗೆ ಪರಿಚಯಿಸಲಾಗುವುದು. ಇದರೊಂದಿಗೆ ಕೃಷಿಯಲ್ಲಿ ಡ್ರೋನ್ ಬಳಕೆಯ ಕುರಿತಂತೆ ಪ್ರಾತ್ಯಕ್ಷಿಕೆಯನ್ನೂ ನೀಡಲಾಗುವುದು ಎಂದರು.

ಕೃಷಿ ಮೇಳವನ್ನು ಬೆಳಗ್ಗೆ 10:30ಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಉದ್ಘಾಟಿಸಲಿದ್ದಾರೆ. ಕೃಷಿ ವಸ್ತು ಪ್ರದರ್ಶನ ವನ್ನು ಕೋಟದ ಉದ್ಯಮಿ ಆನಂದ ಸಿ.ಕುಂದರ್ ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ವಿವಿಯ ಕುಲಪತಿಗಳಾದ ಡಾ.ಆರ್.ಸಿ. ಜಗದೀಶ್ ಸೇರಿ ವಿವಿಧ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ಎರಡು ದಿನಗಳಲ್ಲಿ ವಿವಿಧ ವಿಷಯಗಳ ಕುರಿತು ವಿಚಾರಗೋಷ್ಠಿ, ಸಂವಾದ, ಚರ್ಚೆಗಳನ್ನು ಸಹ ಆಯೋಜಿಸಲಾಗಿದೆ. ಮೇಳದಲ್ಲಿ ಈ ವರ್ಷ ಸುಮಾರು 200ಕ್ಕೂ ಅಧಿಕ ಮಳಿಗೆಗಳು ಇರಲಿದ್ದು, ಕರಾವಳಿ ಹಾಗೂ ಹೊರ ಜಿಲ್ಲೆಗಳಿಂದ 2 ಲಕ್ಷಕ್ಕೂ ಅಧಿಕ ರೈತರು, ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಾವರ ಕೃಷಿ ಡಿಪ್ಲೋಮಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಲಕ್ಷ್ಮಣ, ಹಿರಿಯ ಕ್ಷೇತ್ರ ಅಧೀಕ್ಷಕರಾದ ಡಾ.ಶಂಕರ್ ಹಾಗೂ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಪ್ರಧಾನ ಸಂಶೋಧಕರಾದ ಡಾ.ಕೆ.ವಿ.ಸುಧೀರ್ ಕಾಮತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News