ಕಾರ್ಕಳ| ಪತಿಗೆ ವಿಷ ಉಣಿಸಿ, ಉಸಿರುಗಟ್ಟಿಸಿ ಕೊಲೆ: ಆರೋಪಿ ಪತ್ನಿ, ಪ್ರಿಯಕರನ ಬಂಧನ

Update: 2024-10-25 17:18 GMT

ಪ್ರತಿಮಾ - ದಿಲೀಪ್

ಕಾರ್ಕಳ: ಪ್ರಿಯಕರನ ಜೊತೆ ಸೇರಿ ತನ್ನ ಪತಿಯನ್ನೇ ಪತ್ನಿ ವಿಷ ಉಣಿಸಿ ಉಸಿರು ಗಟ್ಟಿಸಿ ಕೊಲೆಗೈದಿದ್ದಾಳೆ ಎನ್ನಲಾದ ಘಟನೆ ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆ ಎಂಬಲ್ಲಿ ನಡೆದಿದೆ. ಈ ಸಂಬಂಧ ಆರೋಪಿ ಪತ್ನಿ ಮತ್ತು ಆಕೆಯ ಪ್ರಿಯಕರ ನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಯಾದವರನ್ನು ಅಜೆಕಾರು ನಿವಾಸಿ ಸಂಜೀವ ಪೂಜಾರಿ ಎಂಬವ ಮಗ ಬಾಲಕೃಷ್ಣ ಪೂಜಾರಿ (44) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಮೃತರ ಪತ್ನಿ ಪ್ರತಿಮಾ (36) ಮತ್ತು ಆಕೆಯ ಪ್ರಿಯಕರ ಕಾರ್ಕಳದ ದಿಲೀಪ್ ಹೆಗ್ಡೆ(28) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲಕೃಷ್ಣ ಕಾರ್ಕಳದ ನಿಟ್ಟೆ ಕಾಲೇಜಿನ ಕ್ಯಾಂಟೀನಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರತಿಮಾ ಅಜೆಕಾರಿನಲ್ಲಿ ಬ್ಯೂಟಿ ಪಾರ್ಲರ್ ಹೊಂದಿದ್ದಳು. ಮೇಕಪ್ ಆರ್ಟಿಸ್ಟ್ ಆಗಿದ್ದ ಆಕೆ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮೂಲಕ ಪ್ರಸಿದ್ಧಿ ಪಡೆದಿದ್ದಳು. ಇದರಿಂದ ಆಕೆಗೆ ಕಾರ್ಕಳದ ಹೋಟೆಲೊಂದರ ಮಾಲಕನ ಪುತ್ರ ದಿಲೀಪ್ ಹೆಗ್ಡೆಯ ಪರಿಚಯವಾಗಿತ್ತು.

ಊಟದಲ್ಲಿ ವಿಷ ಬೆರಕೆ: ಇದರಿಂದ ಇವರ ಮಧ್ಯೆ ಸ್ನೇಹ ಬೆಳೆದು, ಅನೈತಿಕ ಸಂಬಂಧಕ್ಕೆ ಕಾರಣವಾಯಿತು. ಇವರಿಬ್ಬರ ಸ್ನೇಹಕ್ಕೆ ಪತಿ ಬಾಲಕೃಷ್ಣ ಅಡ್ಡಿ ಬರಬಹುದೆಂದು ಅವರನ್ನು ಕೊಲೆ ಮಾಡಲು ಇವರು ಸಂಚು ರೂಪಿಸಿದರು. ಅವರ ಸಂಚಿನಂತೆ ದಿಲೀಪ್ ಹೆಗ್ಡೆ, ಪ್ರತಿಮಾಳಿಗೆ ವಿಷ ಪದಾರ್ಥವನ್ನು ತಂದು ಪ್ರತಿದಿನ ಕೊಡುತ್ತಿದ್ದು, ಅದನ್ನು ಆಕೆ ಬಾಲಕೃಷ್ಣರಿಗೆ ಊಟದಲ್ಲಿ ಸೇರಿಸಿ ಕೊಡುತ್ತಿದ್ದಳು.

ಆಹಾರದಲ್ಲಿ ಸ್ವಲ್ಪ ಸ್ವಲ್ಪವೇ ವಿಷವುಣಿಸಿ, ಅವರ ಆರೋಗ್ಯ ಕೆಡುವಂತೆ ನೋಡಿಕೊಂಡಳು. ಹೀಗೆ ಬಾಲಕೃಷ್ಣ ಕ್ರಮೇಣ ಅನಾರೋಗ್ಯಕ್ಕೆ ತುತ್ತಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಕಾರ್ಕಳ, ಮಣಿಪಾಲ, ಮಂಗಳೂರು ವೆನ್ಲಾಕ್ ಮತ್ತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಗುಣಮುಖರಾಗದೇ ಇರುವುದರಿಂದ ಅವರನ್ನು ಅ.19ರಂದು ರಾತ್ರಿ ಮನೆಗೆ ಕರೆದುಕೊಂಡು ಬರಲಾಗಿತ್ತು.

ಸಂಶಯಾಸ್ಪದ ಸಾವು: ಅ.20ರಂದು ನಸುಕಿನ ವೇಳೆ ಸುಮಾರು 3:30 ಗಂಟೆಗೆ ಮನೆಯಲ್ಲಿ ಬೊಬ್ಬೆ ಕೇಳಿದ ತಕ್ಷಣ ಸಂಜೀವ ಪೂಜಾರಿ, ಹೋಗಿ ನೋಡಿದಾಗ ಮಗ ಬಾಲಕೃಷ್ಣ ಮಾತನಾಡದೇ ಇರುವುದು ಕಂಡುಬಂತು.

ಬೆಳಿಗ್ಗೆ 8 ಗಂಟೆಗೆ ಅಜೆಕಾರಿನ ಸರಕಾರಿ ಆಸ್ಪತ್ರೆಯ ವೈದ್ಯರನ್ನು ಕರೆಸಿ ಪರೀಕ್ಷಿಸಿದಾಗ ಬಾಲಕೃಷ್ಣ ಮೃತಪಟ್ಟಿರುವುದು ದೃಢಪಟ್ಟಿತು ಎನ್ನಲಾಗಿದೆ. ಬಾಲಕೃಷ್ಣ ಒಮ್ಮೇಲೆ ಅನಾರೋಗ್ಯದಿಂದ ಮೃತಪಟ್ಟಿರುವ ಕಾರಣ ಮೃತರ ಮರಣದಲ್ಲಿ ನಿಖರವಾದ ಕಾರಣದ ಬಗ್ಗೆ ಸಂಶಯ ಇರುವುದಾಗಿ ತಂದೆ ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬೆಡ್‌ಶೀಟ್‌ನಿಂದ ಕೊಲೆ: ತನಿಖೆ ನಡೆಸಿದ ಪೊಲೀಸರು, ಪ್ರತಿಮಾಳನ್ನು ವಿಚಾರಣೆಗೆ ಒಳಪಡಿಸಿದರು. ಆಗ ಆಕೆ ದಿಲೀಪ್ ಹೆಗ್ಡೆ ಜೊತೆ ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂತು.

ಅ.20ರಂದು ಪ್ರತಿಮಾ, ದಿಲೀಪ್ ಹೆಗ್ಡೆಯನ್ನು ಮನೆಗೆ ಬರಲು ಹೇಳಿದ್ದು, ಅದರಂತೆ ದಿಲೀಪ್ ನಸುಕಿನ ವೇಳೆ 1:30ರ ಸುಮಾರಿಗೆ ಪ್ರತಿಮಾಳ ಮನೆಗೆ ಬಂದನು. ದಿಲೀಪ್ ಹೆಗ್ಡೆ ಮತ್ತು ಪ್ರತೀಮಾ ಇಬ್ಬರೂ ಸೇರಿ ಮನೆಯಲ್ಲಿಯೇ ಇದ್ದ ಬೆಡ್ ಶೀಟ್‌ನ್ನು ಬಾಲಕೃಷ್ಣ ಅವರ ಮುಖಕ್ಕೆ ಒತ್ತಿ ಹಿಡಿದು ಕೊಲೆ ಮಾಡಿದರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ.

ಅದರಂತೆ ಈ ಪ್ರಕರಣವು ಅಸ್ವಾಭಾವಿಕ ಮರಣದಿಂದ ಕೊಲೆ ಪ್ರಕರಣಕ್ಕೆ ತಿರುವು ಪಡೆದುಕೊಂಡಿದ್ದು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯ ಎಸ್ಸೈಗಳಾದ ರವಿ ಬಿ.ಕೆ. ಹಾಗೂ ಶುಭಕರ ನೇತೃತ್ವದಲ್ಲಿ ಸಿಬ್ಬಂದಿ ನಾಗೇಶ್, ಸತೀಶ್, ಪ್ರದೀಪ್, ಅಶೋಕ, ಪ್ರವೀಣ, ಧಜಂಜಯ, ಸುನೀಲ್, ನಾಗರಾಜ, ಶಶಿ, ಪ್ರಶಾಂತ, ವಿಶ್ವನಾಥ ಅವರ ತಂಡ ದಿಲಿಪ್ ಹೆಗ್ಡೆಯನ್ನು ಕಾರ್ಕಳದಲ್ಲಿ ಮತ್ತು ಮೃತ ಬಾಲಕೃಷ್ಣನ ಪತ್ನಿ ಪ್ರತೀಮಾಳನ್ನು ಮನೆಯಲ್ಲಿ ಅ.25ರಂದು ವಶಕ್ಕೆ ಪಡೆದುಕೊಂಡು ಬಳಿಕ ಬಂಧಿಸಿತು.

ಪ್ರತಿಮಾಳ ಸಹೋದರನಿಂದಲೇ ಪ್ರಕರಣ ಬೆಳಕಿಗೆ

ಅ.20ರಂದು ಮೃತಪಟ್ಟ ಬಾಲಕೃಷ್ಣ ಪೂಜಾರಿ ಅಂತ್ಯಸಂಸ್ಕಾರವನ್ನು ಕುಟುಂಬಸ್ಥರು ಸೇರಿ ನೆರವೇರಿಸಿದ್ದರು. ಬಳಿಕ ಅನುಮಾನಗೊಂಡ ಪ್ರತಿಮಾಳ ಸಹೋದರ ಆಕೆಯಿಂದ ಕೊಲೆ ವಿಚಾರವನ್ನು ಬಾಯಿ ಬಿಡಿಸಿದ್ದನು. ಆಕೆ ತನ್ನ ಸಹೋದರನ ಜೊತೆ ತಪ್ಪೊಪ್ಪಿಕೊಳ್ಳುವ ಆಡಿಯೋ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಪ್ರತಿಮಾ ಹಾಗೂ ದಿಲೀಪ್ ಹೆಗ್ಡೆ ಮಧ್ಯೆ ಸ್ನೇಹ ಬೆಳೆದು ಅವರಿಬ್ಬರು ಜೊತೆಗೆ ಓಡಾಡಿಕೊಂಡಿದ್ದರು. ಈ ವಿಚಾರ ತಿಳಿದು ಗಂಡ ಹೆಂಡತಿಗೆ ಜಗಳ ಆಗಿದೆ. ಆ ವಿಚಾರ ಪೊಲೀಸ್ ಠಾಣೆಯವರೆಗೂ ತಲುಪಿ, ಎರಡು ಕುಟುಂಬದ ಪಂಚಾಯಿತಿ ನಡೆಸಿ ಮುಚ್ಚಳಿಕೆ ಬರೆಸಲಾಗಿತ್ತು. ಆ ನಂತರವೇ ಇವರಿಬ್ಬರು ಈ ಕೊಲೆಗೆ ಸಂಚು ರೂಪಿಸಿದ್ದರು.

ವರ್ಷದ ಹಿಂದೆ ಮನೆ ಕಟ್ಟಿದ್ದರು

ಬಾಲಕೃಷ್ಣ ಹಾಗೂ ಪ್ರತಿಮಾ ಅವರಿಗೆ 17 ವರ್ಷಗಳ ಹಿಂದೆ ಮದುವೆ ಆಗಿತ್ತು. ಇವರಿಗೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿ ಇದ್ದಾರೆ. ಬಾಲಕೃಷ್ಣ ಮುಂಬೈನಲ್ಲಿ ಬೇರೆಯವರ ಹೋಟೆಲ್‌ನಲ್ಲಿ ಮೆನೇಜರ್ ಆಗಿ ದುಡಿಯುತ್ತಿ ದ್ದರು. 2020ರಲ್ಲಿ ಕೋವಿಡ್ ನಂತರ ಬಾಲಕೃಷ್ಣ ಪೂಜಾರಿ ಕುಟುಂಬ, ಮುಂಬೈನಿಂದ ಅಜೆಕಾರಿಗೆ ಶಿಫ್ಟ್ ಆಗಿತ್ತು.

ಬಳಿಕ ಅವರು ನಿಟ್ಟೆಯ ಕಾಲೇಜ್‌ನಲ್ಲಿ ಸಣ್ಣ ಕ್ಯಾಂಟೀನ್ ಆರಂಭಿಸಿದರು. ಪ್ರತಿಮಾಗೆ ತನ್ನ ಮನೆಯಿಂದ 2 ಕಿ.ಮೀ. ದೂರದಲ್ಲಿರುವ ಅಜೆಕಾರು ಪೇಟೆಯಲ್ಲಿ ಬ್ಯೂಟಿ ಪಾರ್ಲರ್ ತೆರೆದುಕೊಟ್ಟರು. ಮದುವೆ ಮನೆಗಳಿಗೆ ಹೋಗಿ ನವ ಜೋಡಿಗಳ ಅಲಂಕಾರ ಮಾಡುತ್ತಿದ್ದರು. ಅದರೊಂದಿಗೆ ರಿಲ್ಸ್ ಮಾಡುತ್ತಿದ್ದರು. ಅದರಲ್ಲಿ ಗಂಡನನ್ನು ಕೂಡ ತೊಡಗಿಸಿ ಕೊಂಡಿದ್ದಳು.

ಮೂಲ ಮನೆಗೆ ಬದಲಾಗಿ, ತಂದೆಯ ಮನೆಯ ಪಕ್ಕದಲ್ಲಿ ಹೊಸ ಮನೆ ಕಟ್ಟಿಸಿದರು. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಹೊಸ ಮನೆಯ ಗೃಹಪ್ರವೇಶ ಆಗಿತ್ತು ಎಂದು ತಿಳಿದುಬಂದಿದೆ.

ದಿಲೀಪ್ ಹೆಗ್ಡೆ ಪೊಲೀಸ್ ಕಸ್ಟಡಿಗೆ: ಎಸ್ಪಿ

ಪತಿಯನ್ನು ವಿಷ ಉಣಿಸಿ, ಬಳಿಕ ಬೆಡ್‌ಶೀಟ್ ಒತ್ತಿ ಇಟ್ಟು ಉಸಿರು ಗಟ್ಟಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೃತರ ಪತ್ನಿ ಪ್ರತಿಮಾ ಹಾಗೂ ದಿಲೀಪ್ ಹೆಗ್ಡೆ ಎಂಬಾತನನ್ನು ಬಂಧಿಸಲಾಗಿದೆ ಎಂದು ಉಡುಪಿ ಎಸ್ಪಿ ಡಾ.ಕೆ.ಅರುಣ್ ತಿಳಿಸಿದ್ದಾರೆ.

ಇವರಿಬ್ಬರನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರತಿಮಾಳಿಗೆ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಹೆಚ್ಚಿನ ತನಿಖೆಗಾಗಿ ದಿಲೀಪ್ ಹೆಗ್ಡೆಯನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News