ಉಡುಪಿ ಮಸೀದಿಯಿಂದ 18 ಮಂದಿಗೆ 8.5ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ

Update: 2024-10-25 14:58 GMT

ಉಡುಪಿ, ಅ.25: ಉಡುಪಿ ಜಾಮೀಯ ಮಸೀದಿ ವತಿಯಿಂದ ಉಡುಪಿ ತಾಲೂಕು ಹಾಗೂ ಸುತ್ತಮುತ್ತಲಿನ ಪರಿಸರದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಶುಕ್ರವಾರ ಮಸೀದಿಯ ಸಭಾಂಗಣದಲ್ಲಿ ಜರಗಿತು.

ಪ್ಯಾರಮೆಡಿಕಲ್ ಎಲ್‌ಎಲ್‌ಬಿ ಸೇರಿದಂತೆ ಉನ್ನತ ಶಿಕ್ಷಣ ಕಲಿಯುತ್ತಿರುವ 2023-24ನೇ ಸಾಲಿನ ಇದೀಗ ಎರಡನೇ ವರ್ಷದ 11 ಹಾಗೂ 2024- 25ನೇ ಸಾಲಿನ ಪ್ರಥಮ ವರ್ಷದ ಏಳು ಸೇರಿದಂತೆ ಒಟ್ಟು 18 ವಿದ್ಯಾರ್ಥಿಗಳಿಗೆ ಒಟ್ಟು 8.5ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಮುಹಮ್ಮದ್ ಸುಹಾನ್ ಮಾತನಾಡಿ, ಶಿಕ್ಷಣವು ವಿದ್ಯಾರ್ಥಿಗಳ ಭವಿಷ್ಯವನ್ನು ಗಟ್ಟಿ ಹಾಗೂ ಸದೃಢಗೊಳಿಸುತ್ತದೆ. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಮೂಲಕ ಮಾದರಿಯಾಗಬೇಕು. ಮೊಬೈಲ್ ದುಶ್ಚಟಕ್ಕೆ ಒಳಾಗಗದೆ ಶಿಕ್ಷಣದತ್ತ ಹೆಚ್ಚಿನ ಗಮನ ನೀಡಬೇಕು ಎಂದು ಸಲಹೆ ನೀಡಿದರು.

ಹೂಡೆ ಸಾಲಿಹಾತ್ ಅರೇಬಿಕ್ ಕಾಲೇಜಿನ ಪ್ರಾಂಶುಪಾಲೆ ಕುಲ್ಸುಮ್ ಅಬೂಬಕ್ಕರ್ ಮಾತನಾಡಿದರು. ಮಸೀದಿಯ ಅಧ್ಯಕ್ಷ ರಿಯಾಝ್ ಅಹ್ಮದ್, ಉಪಾಧ್ಯಕ್ಷ ವಿ.ಎಸ್.ಉಮರ್, ಪ್ರಧಾನ ಕಾರ್ಯದರ್ಶಿ ಖಾಲಿದ್ ಅಬ್ದುಲ್ ಅಝೀಝ್ ಉಪಸ್ಥಿತ ರಿದ್ದರು. ಕೋಶಾಧಿಕಾರಿ ಶಾಹಿದ್ ಅಲಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News