ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ಜಾರಿ: ನೆರವಿಗಾಗಿ ಸಹಾಯವಾಣಿ ಕೇಂದ್ರ

Update: 2024-10-25 15:27 GMT

ಉಡುಪಿ, ಅ.25: ಪೋಷಕರು ಮತ್ತು ಹಿರಿಯ ನಾಗರಿಕರಿಗೆ ಅವರ ಜೀವನ ನಿರ್ವಹಣೆ ಮತ್ತು ಯೋಗಕ್ಷೇಮಕ್ಕೆ ಇನ್ನೂ ಹೆಚ್ಚಿನ ಪರಿಣಾಮಕಾರಿ ಅವಕಾಶ ಒದಗಿಸುವ ಉದ್ದೇಶದಿಂದ ಕೇಂದ್ರ ಸರಕಾರ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ-2007ನ್ನು ಜಾರಿ ಗೊಳಿಸಿದ್ದು, 2008ರ ಎ.1ರಿಂದ ರಾಜ್ಯದಲ್ಲಿ ಅದನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಸಮಾಜದಲ್ಲಿ ಕಿರಿಯರಿಂದ ಸಮಸ್ಯೆಗೆ ಸಿಲುಕಿದ ಹಿರಿಯ ನಾಗರಿಕರ ರಕ್ಷಣೆಗಾಗಿ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯಲ್ಲಿನ ಅವಕಾಶದಂತೆ ಪ್ರತಿ ಕಂದಾಯ ಉಪವಿಭಾಗದಲ್ಲಿ ಒಂದು ‘ನಿರ್ವಹಣಾ ನ್ಯಾಯಮಂಡಳಿ’ಯನ್ನು ಸ್ಥಾಪಿಸಲಾಗಿದ್ದು, ಈ ನ್ಯಾಯಮಂಡಳಿಗಳಲ್ಲಿ ಜೀವನ ನಿರ್ವಹಣೆಗಾಗಿ ತೊಂದರೆಗೊಳಗಾದ ಹಿರಿಯರು ಜೀವನಾಂಶವನ್ನು ಪಡೆಯಬಹುದಾಗಿದೆ.

ದೇಶದಲ್ಲಿ ವೃದ್ದರ ಸಂಖ್ಯೆ ಹೆಚ್ಚುತ್ತಿರುವ ಜೊತೆಗೆ ಕೂಡಿ ಬಾಳುವುದನ್ನು ಕಲಿಸುವ ಅವಿಭಕ್ತ ಕುಟುಂಬಗಳು ವಿಭಜಿಸಿ ವಿಭಕ್ತ ಕುಟುಂಬ ಹೆಚ್ಚುತ್ತಿ ರುವುದರಿಂದ, ಸಾಂಸ್ಕೃತಿಕ ಮೌಲ್ಯಗಳು ಕುಸಿದು ಹಿರಿಯರ ಬಗ್ಗೆ ಅಗೌರವ, ನಿರ್ಲಕ್ಷ್ಯ ಹೆಚ್ಚುತ್ತಿದೆ. ವೃದ್ಧರ ಮೇಲೆ ಅಪರಾಧ ಮತ್ತು ದೌರ್ಜನ್ಯ ನಡೆಯುತ್ತಿದ್ದು, ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವುದರಿಂದ ಹಿರಿಯರು ಆಶ್ರಮ ಸೇರಿಕೊಳ್ಳುವ ಪರಿಸ್ಥಿತಿ ಒದಗಿಬಂದಿದೆ.

ಆರ್ಥಿಕ ಅಭದ್ರತೆ, ಗಗನಕ್ಕೇರುತ್ತಿರುವ ನಿತ್ಯ ವಸ್ತುಗಳ ಬೆಲೆಗಳು ಮತ್ತು ಆರೋಗ್ಯ ವೆಚ್ಚ ಇವೆಲ್ಲ ಹಿರಿಯರನ್ನು ಕಾಡುತ್ತಿ ರುವ ನಿತ್ಯ ಸಮಸ್ಯೆಗಳಾಗಿದ್ದು, ಪೋಷಕರ ಮತ್ತು ಹಿರಿಯರ ಪಾಲನೆ ಪೋಷಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ತಪ್ಪಿದಲ್ಲಿ ಹಿರಿಯ ನಾಗರಿಕರ ಕಾಯ್ದೆ ಅನ್ವಯ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ.

ಸಹಾಯವಾಣಿ ಕೇಂದ್ರ: ನೊಂದ, ಶೋಷಿತ ಹಾಗೂ ದೌರ್ಜನ್ಯಕ್ಕೊಳಗಾದ ಹಿರಿಯ ನಾಗರಿಕರಿಗಾಗಿ ರಾಜ್ಯ ಸರಕಾರ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವನ್ನು 2014-15ನೇ ಸಾಲಿನಲ್ಲಿ ಪ್ರಾರಂಭಿಸಿದ್ದು, ಸಹಾಯವಾಣಿ ಕೇಂದ್ರವು ಆಪ್ತ ಸಮಾಲೋಚನೆ, ಪೊಲೀಸ್ ನೆರವು, ಪುನರ್ವಸತಿ, ಕಾನೂನು ನೆರವು, ವೈದ್ಯಕೀಯ ನೆರವನ್ನು ನೀಡುತ್ತದೆ.

1,174 ದೂರು ದಾಖಲು: ಉಡುಪಿ ಜಿಲ್ಲಾ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಈವರೆಗೆ ಮಾಹಿತಿ ಕೋರಿ 2,329 ಮಂದಿ ನೇರ ಭೇಟಿ ನೀಡಿದ್ದು, ದೂರವಾಣಿ ಮೂಲಕ 19,701 ಕರೆ ಸ್ವೀಕೃತವಾಗಿದೆ. ಕೇಂದ್ರದಲ್ಲಿ 1,174 ದೂರುಗಳು ದಾಖಲಾಗಿದ್ದು, 1,169 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಕೇಂದ್ರದಲ್ಲಿ 3,393 ವಿವಿಧ ರೀತಿಯ ಸೇವೆಗಳ ನ್ನು (ಕಾನೂನು ಸಲಹೆ, ಪೊಲೀಸ್ ನೆರವು, ಸಮಾಲೋಚನೆ, ಮನೆ ಭೇಟಿ ಇತ್ಯಾದಿ) ಒದಗಿಸಲಾಗುತ್ತಿದೆ. ಸಹಾಯವಾಣಿ ಕೇಂದ್ರದ ಕುರಿತು 265 ಮಾಹಿತಿ ಶಿಬಿರಗಳನ್ನು ಜಿಲ್ಲೆಯಲ್ಲಿ ನಡೆಸಲಾಗಿದೆ.

ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ, ಬನ್ನಂಜೆ, ಉಡುಪಿ ಜಿಲ್ಲೆ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಹಿರಿಯ ನಾಗರಿಕರ ರಕ್ಷಣೆಗಾಗಿ 24*7 ಕರ್ತವ್ಯ ನಿರ್ವಹಿಸುತ್ತಿದೆ.

ಹಿರಿಯ ನಾಗರಿಕರು ಮಾಹಿತಿ ಪಡೆಯಲು, ದೂರುಗಳನ್ನು ದಾಖಲಿಸಲು ಹಾಗೂ ಯಾವುದೇ ಸಮಸ್ಯೆಗಳಿದ್ದಲ್ಲಿ ಹಿರಿಯ ನಾಗರಿಕರ ಸಹಾಯವಾಣಿ ಟೋಲ್ ಫ್ರೀ ನಂ:1090 ಅಥವಾ ದೂರವಾಣಿ ಸಂಖ್ಯೆ: 0820- 2526394 ಮೂಲಕ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News