ಉಡುಪಿಗೆ ಸರಕಾರಿ ಮೆಡಿಕಲ್ ಕಾಲೇಜು ಬೇಕೆ ಹೊರತು ಪಿಪಿಪಿ ಮಾದರಿ ಬೇಡ: ಸಿಪಿಐಎಂ

Update: 2024-10-25 14:53 GMT

ಉಡುಪಿ, ಅ.25: ಉಡುಪಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಬೇಕೆ ಹೊರತು ಪಿಪಿಪಿ ಮಾದರಿ ಬೇಡ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಆಗ್ರಹಿಸಿದ್ದಾರೆ.

ಹಲವಾರು ವರ್ಷಗಳಿಂದ ಉಡುಪಿ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಬೇಕೆಂದು ಒತ್ತಾಯ ಮಾಡುತ್ತ ಬರಲಾಗುತ್ತಿದ್ದು, ಇದೀಗ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ, ಸರಕಾರಿ ಮೆಡಿಕಲ್ ಕಾಲೇಜುಗಳು ಇಲ್ಲದ 11 ಜಿಲ್ಲೆಗಳಲ್ಲಿ ಪಿ.ಪಿ.ಪಿ. ಮಾದರಿಯಲ್ಲಿ ಮೆಡಿಕಲ್ ಕಾಲೇಜು ಆರಂಭಿಸುವು ದಾಗಿ ಹೇಳಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಪಿಪಿಪಿ ಮಾದರಿಯ ಕಾಲೇಜನ್ನು ಉಡುಪಿಯ ಜನತೆ ಒಪ್ಪುವುದಿಲ್ಲ.

ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಸರಕಾರದ ಹೂಡಿಕೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕಡಿಮೆ ಪ್ರಮಾಣದಲ್ಲಿದೆ. ಖಾಸಗಿ ವೈದ್ಯಕೀಯ ಕಾಲೇಜು ಎಂಬುದು ಉಳ್ಳವರಿಗೆ ಮಾತ್ರ ಎಂಬಂತಾಗಿದೆ. ಪಿಪಿಪಿ ಎಂದರೆ ಸರಕಾರದಿಂದ ನೆಲ, ಜಲ, ವಿದ್ಯುತ್ ಪಡೆದು ಖಾಸಗಿಯವರು ನಡೆಸುವ ಉದ್ಯಮ ಎಂಬಂತಾಗಿದೆ.

ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಿದ್ದಲ್ಲಿ ಜಿಲ್ಲೆಯ ಅರ್ಹ ಬಡ, ಮಧ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುತ್ತದೆ. ಈಗಾಗಲೇ ಉಡುಪಿಯ ಮಕ್ಕಳ ಮತ್ತು ಮಹಿಳಾ ಸರಕಾರಿ ಆಸ್ಪತ್ರೆಯನ್ನು ಪಿಪಿಪಿ ಮಾದರಿಯಲ್ಲಿ ಬಿ.ಆರ್. ಶೆಟ್ಟಿಯವರ ಸಂಸ್ಥೆಗೆ ನೀಡಿ ಏನಾಗಿದೆ ಎಂದು ಸರಕಾರಕ್ಕೆ ಗೊತ್ತಿದೆ. ಈಗ ಪುನ: ಸರಕಾರವೇ ನಡೆಸುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News