ನೇಜಾರು ತಾಯಿ ಮಕ್ಕಳ ಕಗ್ಗೊಲೆ ಪ್ರಕರಣ: ಮಾ.13ರಂದು ಆರೋಪಿ ವಿರುದ್ಧ ಆಪಾದನೆ ವಾಚಿಸುವ ಪ್ರಕ್ರಿಯೆ

Update: 2024-03-07 10:41 GMT

ಉಡುಪಿ, ಮಾ.7: ನೇಜಾರುವಿನಲ್ಲಿ ನಡೆದ ತಾಯಿ ಮತ್ತು ಮೂವರು ಮಕ್ಕಳ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಎರಡನೇ ಹೆಚ್ಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಇಂದು ಆಪಾದನೆ ಪೂರ್ವ ವಿಚಾರಣೆ ನಡೆದಿದ್ದು, ಆರೋಪಿ ಮೇಲೆ ಆಪಾದನೆ ವಾಚಿಸುವ ಪ್ರಕ್ರಿಯೆಯನ್ನು ಮಾ.13ಕ್ಕೆ ನಿಗದಿಪಡಿಸಿ ನ್ಯಾಯಾಲಯ ಆದೇಶ ನೀಡಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೆ ನೇರವಾಗಿ ಜೈಲಿನಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವ ಪ್ರಸಾದ್ ಆಳ್ವ ನೇಮಕಾತಿ ಪತ್ರದೊಂದಿಗೆ ಹಾಜರಾತಿ ಪ್ರಮಾಣಪತ್ರ(ಮೆಮೊ ಫೆಟರೇಷನ್) ವನ್ನು ನ್ಯಾಯಾಲಯಕ್ಕ ಸಲ್ಲಿಸಿದರು. ಆರೋಪಿ ಪರವಾಗಿ ವಕೀಲ ರಾಜೇಶ್ ನ್ಯಾಯಾಲಯದಲ್ಲಿ ವಕಾಲತ್ತು ಹಾಕಿದರು.

ಆಪಾದನೆ(ಚಾರ್ಜ್) ಪೂರ್ವ ವಿಚಾರಣೆ ನಡೆಸಿದ ನ್ಯಾಯಾಧೀಶ ದಿನೇಶ್ ಹೆಗ್ಡೆ, ಈ ಪ್ರಕರಣದಲ್ಲಿ ಆರೋಪಿ ವಿರುದ್ಧ ಆಪಾದನೆ ವಾಚಿಸಲು ಬೇಕಾದ ಸಾಕ್ಷ್ಯಾಧಾರಗಳಿವೆ ಎಂದು ತೀರ್ಮಾನಿಸಿ ಮಾ.13ರಂದು ಚಾರ್ಜ್ ದಿನ ನಿಗದಿಪಡಿಸಿ ಆದೇಶಿಸಿದರು. ಅಂದು ಬೆಂಗಳೂರು ಜೈಲಿನಲ್ಲಿರುವ ಆರೋಪಿಯನ್ನು ಉಡುಪಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನಿರ್ದೇಶನ ನೀಡಿದರು.

ಆ ದಿನ ಆರೋಪಿ ತನ್ನ ಮೇಲೆ ಹೊರಿಸಲಾದ ಆರೋಪಗಳನ್ನು ನಿರಾಕರಿಸಿದರೆ ಮುಂದೆ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಅದಕ್ಕೆ ದಿನ ನಿಗದಿ ಡಿಸಿ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಆರಂಭಿಸಲಿದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News