ಮಳೆ ಕೊರತೆಯಿಂದ ಒಣಗುತ್ತಿರುವ ಭತ್ತದ ಬೆಳೆ: ರೈತರಿಗೆ ಕೃಷಿ ಇಲಾಖೆ ಸೂಚನೆ

Update: 2023-09-04 13:49 GMT

ಉಡುಪಿ, ಸೆ.4: ಕಾರ್ಕಳ ತಾಲೂಕಿನ ಅಜೆಕಾರು ವ್ಯಾಪ್ತಿಯ ರೈತರಿಂದ ಭತ್ತದ ಸಸಿಗಳ ಒಣಗುವಿಕೆಯ ಕುರಿತು ಸಮಸ್ಯೆ ವರದಿಯಾದ ಹಿನ್ನೆಲೆಯಲ್ಲಿ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಸಿಬ್ಬಂದಿಗಳು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲೆಯಲ್ಲಿ ತಡವಾಗಿ ಪ್ರಾರಂಭಗೊಂಡ ಮಳೆ ಹಾಗೂ ಆಗಸ್ಟ್ ತಿಂಗಳಿನಲ್ಲಿ ಮಳೆಯಾಗದೇ ಇರುವುದರಿಂದ ಪ್ರಮುಖ ವಾಗಿ ಭತ್ತದ ಬೆಳೆ ಸೋತು ಸೊರಗುತ್ತಿರುತ್ತದೆ. ಗದ್ದೆಗಳಲ್ಲಿ ನೀರಿಲ್ಲದ ಕಾರಣ ಕಳೆಗಳು ಹಾಗೂ ನೀರಿನ ಸಮಸ್ಯೆ ಯಿಂದಾಗಿ ಮೇಲು ಗೊಬ್ಬರ ಕೊಡಲು ಸಾಧ್ಯವಾಗದೇ ಇದ್ದುದರಿಂದ ಪೋಷಕಾಂಶಗಳ ಕೊರತೆ ಕಾಣುತ್ತಿದೆ.

ಮುಖ್ಯವಾಗಿ ಪೋಟಾಷ್ ಕೊರತೆಯಿಂದಾಗಿ ಭತ್ತದ ಎಲೆಗಳು ಕೆಂಪು ಬಣ್ಣಕ್ಕೆ ತಿರುಗಿ ಹೆಚ್ಚು ತೆಂಡೆಗಳು ಒಡೆಯದೇ ಒಣಗುವ ಸ್ಥಿತಿಯಲ್ಲಿರುತ್ತದೆ. ಹಡಿಲು ಭೂಮಿಯಲ್ಲಿರುವ ಸಹ್ಯಾದ್ರಿ ಬ್ರಹ್ಮ ತಳಿಯಲ್ಲಿ ಭತ್ತದ ಎಲೆಗಳು ಕೆಂಪಾಗುತ್ತಿರುವುದು ಹೆಚ್ಚಾಗಿ ಕಂಡುಬಂದಿದ್ದು, ಯಾವುದೇ ಕೀಟ ರೋಗದ ಭಾದೆ ಇರುವುದಿಲ್ಲ ಎಂಬ ಅಂಶಗಳನ್ನು ಗಮನಿಸಲಾಗಿದೆ.

ಆದುದರಿಂದ ನೀರೊದಗಿಸುವ ಸಾಧ್ಯತೆಯಿರುವ ಕಡೆಗಳಲ್ಲಿ ಮಳೆಗಾಗಿ ಕಾಯದೇ ಕೂಡಲೇ ನೀರು ಒದಗಿಸಬೇಕು. ಭೂಮಿಯ ಫಲವತ್ತತೆ ಪರೀಕ್ಷೆ ಪ್ರತಿ ಮೂರು ವರ್ಷಕ್ಕೊಮ್ಮೆಯಾದರು ಮಾಡಿಸಬೇಕು. ನೀರು ಒದಗಿಸಿದ ಗದ್ದೆಗಳಿಗೆ ಯೂರಿಯಾ 30 ಕೆ.ಜಿ ಹಾಗೂ ಎಂ.ಒ.ಪಿ 15 ಕಿ.ಗ್ರಾಂ ಪ್ರತಿ ಎಕರೆಗೆ ಮೇಲು ಗೊಬ್ಬರವಾಗಿ ನೀಡಬೇಕು.

ಅಲ್ಲದೇ ಗದ್ದೆಗಳಲ್ಲಿ ಕಳೆ ನಿಯಂತ್ರಣ ಮಾಡುವ ಮೂಲಕ ವೈಜ್ಞಾನಿಕ ಸಲಹೆಗಳನ್ನು ಅನುಸರಿಸುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಜಿಲ್ಲೆಯ ರೈತರಿಗೆ ಸಲಹೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News