ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ 14 ಕೋಟಿ ರೂ. ‘ಗುಜರಿ’ ಹಗರಣ: 45ನೇ ದಿನ ಪೂರ್ಣಗೊಳಿಸಿದ ರೈತ ಸಂಘದ ಧರಣಿ

ಬ್ರಹ್ಮಾವರ, ಎ.7: ಬ್ರಹ್ಮಾವರದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯ ‘ಗುಜರಿ’ ಮಾರಾಟದಲ್ಲಿ ನಡೆದಿರುವ 14 ಕೋಟಿ ರೂ.ಗಳಿಗೂ ಅಧಿಕ ಅವ್ಯವಹಾರ ಹಾಗೂ ಇದರ ತನಿಖೆಯಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿಯನ್ನು ವಿರೋಧಿಸಿ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ನಡೆದಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಇಂದು 45ನೇ ದಿನವನ್ನು ಪೂರ್ಣಗೊಳಿ ಸಿದ್ದು, ಧರಣಿ ನಡೆಯುತ್ತಿರುವ ಸ್ಥಳಕ್ಕೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಇಂದು ಭೇಟಿ ನೀಡಿದ್ದು, ಸರಕಾರ ಹಾಗೂ ಸಂಬಂಧಿತ ಸಚಿವರೊಂದಿಗೆ ಈ ಬಗ್ಗೆ ಮಾತನಾಡುವ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್‌ನ ಮಾಜಿ ಸಭಾಪತಿ ಹಾಗೂ ಜಿಲ್ಲಾ ರೈತರ ಸಂಘದ ಅಧ್ಯಕ್ಷ ಪ್ರತಾಪ್‌ಚಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ರೈತ ಸಂಘಗಳು, ಸಂಘಸಂಸ್ಥೆಗಳು, ಸಹಕಾರಿ ಸಂಘಗಳ ಪದಾಧಿಕಾರಿಗಳು ಕಳೆದ 45 ದಿನಗಳಿಂದ ಸುಡುವ ಬಿಸಿಲಿನ ಝಳವನ್ನು ಲೆಕ್ಕಿಸದೇ ಧರಣಿ ಕುಳಿತಿದ್ದ ಸ್ಥಳಕ್ಕೆ ಬಂದ ಖಾದರ್, ಸುಮಾರು ಅರ್ಧಗಂಟೆ ಕಾಲ ಅವರೊಂದಿಗೆ ಕಳೆದರು.
ಈ ಸಂದರ್ಭದಲ್ಲಿ ಧರಣಿ ನಿರತ ರೈತರು ನೀಡಿದ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಖಾದರ್, ರೈತರಿಗೆ ಸೇರಿದ ಸಾರ್ವಜನಿಕ ಆಸ್ತಿಯನ್ನು ಮಾರಿ ಹಣವನ್ನು ಲೂಟಿ ಮಾಡಿರುವುದು ಅಕ್ಷಮ್ಯ ಅಪರಾಧ. ರೈತ ಸಂಘ ಎಲ್ಲಾ ದಾಖಲೆಗಳೊಂದಿಗೆ, ನ್ಯಾಯಯುತವಾಗಿ ನಡೆಸುತ್ತಿರುವ ಈ ಧರಣಿ ಪ್ರತಿಭಟನೆಗೆ ರಾಜ್ಯ ಸರಕಾರ ಖಂಡಿತ ನ್ಯಾಯ ಒದಗಿಸುತ್ತದೆ ಎಂಬ ಭರವಸೆ ಇದೆ ಎಂದರು.
ಎಲ್ಲೆ ಆದರೂ ಸರಕಾರಿ ಸಂಸ್ಥೆಯಲ್ಲಿ ಹಗರಣ, ಭ್ರಷ್ಟಾಚಾರವಾದರೆ ಅದನ್ನು ವಿರೋಧಿಸಿ ಧರಣಿ ನಡೆ ಸುವ ಮೂಲಕ ನೀವು ರಾಜ್ಯಕ್ಕೆ ಮಾದರಿಯಾಗಿದ್ದೀರಿ. ಇದು ಜನರ, ರೈತರ ಹಾಗೂ ಸರಕಾರದ ಪರವಾಗಿ ನಡೆಯುತ್ತಿರುವ ಧರಣಿಯಾಗಿದೆ. ಖಂಡಿತ ನಿಮ್ಮ ಬೇಡಿಕೆಗಳ ಕುರಿತು ಸರಕಾರದ ಬಳಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯ ಸಹಕಾರಿ ಇಲಾಖಾ ಸಚಿವರೊಂದಿಗೆ ಈ ಸಂಬಂಧ ಮಾತನಾಡಿ, ರೈತ ಸಂಘದ ಬೇಡಿಕೆಯಂತೆ ಮೂವರು ಸರಕಾರಿ ಅಧಿಕಾರಿಗಳೂ ಸೇರಿದಂತೆ ಎಲ್ಲಾ ತಪ್ಪಿತಸ್ಥರ ವಿರುದ್ಧ ಶೀಘ್ರವೇ ಮೊಕದ್ದಮೆ ಹೂಡಲು ಅನುಮತಿ ನೀಡುವಂತೆ ಸೂಚಿಸುತ್ತೇನೆ. ಈ ಹಗರಣದಲ್ಲಿ ಭಾಗಿಯಾದ ಯಾರನ್ನೂ ರಕ್ಷಿಸುವು ದಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸಾರ್ವಜನಿಕರ ಹಣ ನುಂಗಿದವರಿಗೆ ಶಿಕ್ಷೆಯಾಗಲೇಬೇಕು. ನಾನು ನನ್ನಿಂದ ಸಾದ್ಯವಿರುವ ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸರಕಾರದ ಮೇಲೆ ನಂಬಿಕೆ ಇರುವುದರಿಂದ 45 ದಿನಗಳಿಂದ ನಡೆಸಿಕೊಂಡು ಬರುತ್ತಿರುವ ಧರಣಿ ಯನ್ನು ಕೈಬಿಡುವಂತೆ ನಾನು ಹಿರಿಯರಾದ ಪ್ರತಾಪ್ ಚಂದ್ರ ಶೆಟ್ಟಿ ಅವರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದ ಖಾದರ್, ಸಚಿವರೂ ಸೇರಿದಂತೆ ಸಂಬಂಧಿತರೊಂದಿಗೆ ನಾನು ತಕ್ಷಣವೇ ಮಾತನಾಡುತ್ತೇನೆ ಎಂದೂ ಹೇಳಿದರು.
ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ಎಂ.ಎ. ಗಫೂರ್, ಬಿ.ಭುಜಂಗಶೆಟ್ಟಿ, ಪ್ರಸಾದ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮುನಿಯಾಲು ಉದಯ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಮೈರ್ಮಾಡಿ ಸುಧಾಕರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಫೆ.22ರಿಂದ ಕಾರ್ಖಾನೆ ಎದುರು ಭ್ರಷ್ಟಾಚಾರವನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕ್ರಮಕ್ಕೆ ಆಗ್ರಹಿಸಿ ನಡೆದಿರುವ 45ನೇ ದಿದ ಧರಣಿಯ ಮುಂದಾಳತ್ವವನ್ನು ರೈತ ಸಂಘದ ಹೈಕಾಡಿ, ಕಾವ್ರಾಡಿ, ಕೆದೂರು, ಅಮಾಸೆಬೈಲು ಹಾಗೂ ವಕ್ವಾಡಿ ವಲಯ ವಹಿಸಿದ್ದವು. ಧರಣಿಯಲ್ಲಿ ರೈತ ಮುಖಂಡರಾದ ಶರತ್ ಶೆಟ್ಟಿ ಗುಲ್ವಾಡಿ, ಸದಾನಂದ ಶೆಟ್ಟಿ ಕೆದೂರು, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಸತೀಶ್ ಕಿಣಿ ಬೆಳ್ವೆ, ದಿನೇಶ್ ಹೆಗ್ಡೆ, ಉಮೇಶ ಶೆಟ್ಟಿ,ಸದಾನಂದ ಶೆಟ್ಟಿ ಹಂದಾಡಿ, ಭಾಸ್ಕರ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು.
ಸರಕಾರ ಸ್ಪಂಧಿಸಿ ತನಿಖೆಗೆ ಅನುಮತಿ ನೀಡಲಿ
ಈ ಬಗ್ಗೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರತಾಪ್‌ಚಂದ್ರ ಶೆಟ್ಟಿ ಅವರ ಪ್ರತಿಕ್ರಿಯೆ ಕೇಳಿದಾಗ, ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಧರಣಿ ಸ್ಥಳಕ್ಕೆ ಬಂದು ನಮ್ಮ ನ್ಯಾಯಯುತ ಬೇಡಿಕೆಗಳ ಕುರಿತು ಸರಕಾರ ಹಾಗೂ ಸಂಬಂಧಿತ ಸಚಿವರೊಂದಿಗೆ ಮಾತನಾಡುವ ಭರವಸೆ ನೀಡಿರುವುದು ನಮಗೆ ಹೆಚ್ಚಿನ ಬಲ ತಂದಿದೆ. ಸರಕಾರ ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸ್ಪಂಧಿಸಿ ತಪ್ಪು ಮಾಡಿರುವುದು ದಾಖಲೆ ಗಳ ಮೂಲಕ ಸಾಬೀತಾಗಿರುವವರ ವಿರುದ್ಧ ಮೊಕದ್ದಮೆ ಹೂಡಿ ತನಿಖೆಗೆ ಅವಕಾಶ ನೀಡಲಿದೆ ಎಂಬ ವಿಶ್ವಾಸವಿದೆ.
ನಮ್ಮ ಧರಣಿಯಲ್ಲಿ ಯಾವುದೇ ದುರುದ್ದೇಶವಿಲ್ಲ. ಸರಕಾರ ನಮ್ಮ ಬೇಡಿಕೆ ಗಳಿಗೆ ಸ್ಪಂಧಿಸಿ ಸಮಸ್ಯೆ ಬಗೆಹರಿಸಲಿ ನಾವು ಧರಣಿ ನಿಲ್ಲಿಸುತ್ತೇವೆ ಎಂದರು.

