ಕೊರಗ ಕಾಲನಿಯಲ್ಲಿ 2.5 ಕೋಟಿ ರೂ. ವೆಚ್ಚದ 14 ಮನೆಗಳಿಗೆ ಶಿಲಾನ್ಯಾಸ

Update: 2025-04-07 21:17 IST
ಕೊರಗ ಕಾಲನಿಯಲ್ಲಿ 2.5 ಕೋಟಿ ರೂ. ವೆಚ್ಚದ 14 ಮನೆಗಳಿಗೆ ಶಿಲಾನ್ಯಾಸ
  • whatsapp icon

ಕುಂದಾಪುರ, ಎ.7: ಉಳ್ಳೂರು ಕೊರಗ ಕಾಲನಿಯಲ್ಲಿ ಡಾ.ಎಚ್.ಎಸ್.ಶೆಟ್ಟಿ ನೇತೃತ್ವದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮೂಲಕ 2.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 14 ಮನೆಗಳಿಗೆ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸೋಮವಾರ ಶಿಲಾನ್ಯಾಸ ನೆರವೇರಿಸಿದರು.

ಬಳಿಕ ಮಾತನಾಡಿದ ಸ್ವಾಮೀಜಿ, ಬಡ, ನಿರ್ಗತಿಕ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಇಚ್ಛಾಶಕ್ತಿಯನ್ನು ಪ್ರತಿಯೊಬ್ಬರು ಹೊಂದಿದರೆ ಊರು ಸಮೃದ್ಧವಾಗುತ್ತದೆ. ಗುಡಿ-ಗೋಪುರಗಳಲ್ಲಿ ಭಗವಂತನನ್ನು ಕಾಣುವ ನಾವು ಬಡವನ ಅಂತರಾಳದ ನೋವನ್ನು ಅರಿಯುವ ಮನಸ್ಥಿತಿ ಬೆಳೆಸಿಕೊಳ್ಳ ಬೇಕಾಗಿದೆ. ಕಷ್ಟದಲ್ಲಿರು ವರಿಗೆ ಸ್ಪಂದಿಸುವ ಉದಾರತೆ ಬೆಳೆಸಿಕೊಂಡು ಸಮಾಜದಲ್ಲಿ ಜಲರಾಶಿಯಂತೆ ಬದುಕಬೇಕು ಎಂದರು.

ಕೊರಗಾಭಿವೃದ್ಧಿ ಸಂಸ್ಥೆಗಳು ಕರ್ನಾಟಕ ಮತ್ತು ಕೇರಳದ ಅಧ್ಯಕ್ಷೆ ಸುಶೀಲಾ ನಾಡ ಮಾತನಾಡಿ, ಅಸ್ಪ್ರಶ್ಯರಲ್ಲಿ ಅಸ್ಪ್ರಶ್ಯರಾಗಿರುವ ಕೊರಗ ಸಮುದಾಯದವರನ್ನು ಸಮಾಜ ಮನುಷ್ಯರೆಂದು ಪರಿಗಣಿಸು ವವರೆಗೆ ಅಸ್ಪ್ರಶ್ಯತೆ ತೊಲಗುವುದಿಲ್ಲ. ಮನೆಗೆ ತಳಪಾಯ ಹಾಕಲು ಆಗದ ಪರಿಸ್ಥಿತಿಯಲ್ಲಿರುವ ಕೊರಗ ಸಮುದಾಯದವರಿಗೆ ಸುಸಜ್ಜಿತ ಮನೆ ನಿರ್ಮಿಸಿಕೊಡುವ ಮೂಲಕ ಅವರ ಬದುಕು ಕಟ್ಟಿಕೊಳ್ಳಲು ಸಹಕಾರ ನೀಡುತ್ತಿರುವುದು ಮಾದರಿ ಕಾರ್ಯ ಎಂದು ತಿಳಿಸಿದರು.

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಎಚ್.ಎಸ್. ಶೆಟ್ಟಿ ಮಾತನಾಡಿ, ಕೊರಗ ಸಮುದಾಯ ಸಮಾಜದಲ್ಲಿ ಮುಂದೆ ಬರಬೇಕು ಎಂಬುದು ಈ ಗೃಹ ನಿರ್ಮಾಣದ ಉದ್ದೇಶವಾಗಿದೆ. ಈಗಾಗಾಲೇ ಜನ್ನಾಡಿಯಲ್ಲಿ 14 ಮನೆಗಳು ನಿರ್ಮಿಸಿಕೊಟ್ಟಿದ್ದು ಎರಡನೇ ಹಂತದಲ್ಲಿ ಉಳ್ಳೂರು ಕೊರಗ ಕಾಲನಿಯಲ್ಲಿ 14 ಮನೆಗಳನ್ನು 2.5 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ನಮ್ಮ ಟ್ರಸ್ಟ್ ನಡೆಸುವ ಕಾರ್ಯದಲ್ಲಿ ಯಾವುದೇ ಮದ್ಯವರ್ತಿಗಳು, ಹಸ್ತಕ್ಷೇಪವಿಲ್ಲದೆ ಫಲಾನುಭವಿಗಳಿಗೆ ನೇರವಾಗಿ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರುಳಿ ಕಡೆಕಾರ್ ಮಾತನಾಡಿದರು. ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು. ಈ ಸಂದರ್ಭ ಉಳ್ಳೂರು-4 ಗ್ರಾ.ಪಂ ಅಧ್ಯಕ್ಷೆ ಕುಸುಮಾ ಶೆಟ್ಟಿ, ಟ್ರಸ್ಟ್ ಉಪಾಧ್ಯಕ್ಷ ಹಾಲಾಡಿ ನಾಗರಾಜ ಶೆಟ್ಟಿ, ಪ್ರಮುಖರಾದ ಸಂಪಿಗೇಡಿ ಸಂಜೀವ ಶೆಟ್ಟಿ, ಟ್ರಸ್ಟ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ದಾಮೋದರ ಶರ್ಮಾ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News