ಬ್ರಹ್ಮಾವರ: 1.5 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣಕ್ಕೆ ತಾಂತ್ರಿಕ ಸಮಿತಿ ಶಿಫಾರಸ್ಸು; ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಅಸ್ತು

ಬ್ರಹ್ಮಾವರ, ಎ.7: ಅಪಘಾತ ವಲಯವೆಂದು ಗುರುತಿಸಲ್ಪಟ್ಟು ಬಹಳಷ್ಟು ಮಾರಕ ಅಪಘಾತ, ಸಾವು-ನೋವುಗಳಿಗಾಗಿ ಸಾರ್ವಜನಿಕರ ಬೃಹತ್ ಪ್ರತಿಭಟನೆಗೆ ಕಾರಣವಾಗಿರುವ ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆಕಾಶವಾಣಿ ವೃತ್ತದ ಸಮೀಪದಿಂದ ಎಸ್‌ಎಂಎಸ್ ಜೂನಿಯರ್ ಕಾಲೇಜಿನ ಬಳಿ ಇರುವ ಶನಾಯ್ ಸಭಾಂಗಣದವರೆಗೆ ಸುಮಾರು ಒಂದೂವರೆ ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣವೂ ಸೇರಿದಂತೆ ವಿವಿಧ ಪರಿಹಾರ ಕ್ರಮಗಳನ್ನು ಜಿಲ್ಲಾಧಿಕಾರಿಗಳು ನೇಮಿಸಿರುವ ತಾಂತ್ರಿಕ ಸಮಿತಿ ಶಿಫಾರಸ್ಸು ಮಾಡಿದ್ದು, ಸಮಿತಿ ಈಗಾಗಲೇ ತನ್ನ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದೆ ಎಂದು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿರುವ ಬ್ರಹ್ಮಾವರದ ತಹಶೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆ ತಿಳಿಸಿದ್ದಾರೆ.
ಸಮಿತಿ ಸಭೆಯ ವಿವರ ಹಾಗೂ ಸಲ್ಲಿಸಿರುವ ವರದಿಯ ಅಂಶಗಳ ಕುರಿತು ಅವರು ‘ವಾರ್ತಾಭಾರತಿ’ ಯೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ವರದಿಯ ಕುರಿತಂತೆ ನಾಳೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಅವರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂಬಂಧಿತ ಎಲ್ಲಾ ಅಧಿಕಾರಿಗಳ ಮತ್ತೊಂದು ಸಭೆ ಕರೆದಿದ್ದು, ಅಲ್ಲಿ ಈ ಬಗ್ಗೆ ಚರ್ಚೆ ನಡೆದು ಸಂಬಂಧಿತರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು.
ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಮಂಗಳೂರಿನ ಯೋಜನಾ ನಿರ್ದೇಶಕರು, ಉಡುಪಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಹಾಗೂ ರಾಷ್ಟ್ರೀಯ ಹೆದ್ದಾರಿ-66ರ ಇಂಜಿನಿಯರ್‌ಗಳು ಇದ್ದ ಸಮಿತಿಯ ಸಭೆಯಲ್ಲಿ ಸಾರ್ವಜನಿಕರ ಬೇಡಿಕೆಯಂತೆ ಫ್ಲೈಓವರ್ ಅಥವಾ ಅಂಡರ್‌ಪಾಸ್ ನಿರ್ಮಾಣದ ಕುರಿತು ಚರ್ಚೆ ನಡೆ ಯಿತು. ಸದ್ಯ ಆಕಾಶವಾಣಿ ಸರ್ಕಲ್ ಬಳಿ(ಧರ್ಮಾವರಂ)ಯಿಂದ ಶನಾಯ್ ಸಭಾಂಗಣ ದವರೆಗೆ ಫ್ಲೈಓವರ್ ನಿರ್ಮಾಣಕ್ಕೆ (ಸುಮಾರು 35ರಿಂದ 40ಕೋಟಿ ರೂ.ವೆಚ್ಚದಲ್ಲಿ) ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ ಎಂದರು.
ಈ ಬಗ್ಗೆ ವಿವರವಾದ ಸಾಧ್ಯತಾ ವರದಿಯನ್ನು ತಯಾರಿಸಿದ ಬಳಿಕ ಅಂತಿಮ ನಿರ್ಧಾರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆಗೆದುಕೊಳ್ಳಲಿದೆ. ಇದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಎನ್‌ಎಚ್‌ಎನ ಯೋಜನಾ ನಿರ್ದೇಶಕ ಜಾವೇದ್ ಅಜ್ಮ ಅವರು ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಶ್ರೀಕಾಂತ್ ಹೆಗ್ಡೆ ವಿವರಿಸಿದರು.
ಸರ್ವಿಸ್ ರಸ್ತೆ, ಬ್ಯಾರಿಕೇಡ್ ನಿರ್ಮಾಣ: ತಕ್ಷಣಕ್ಕೆ ಮಹೇಶ್ ಆಸ್ಪತ್ರೆಯಿಂದ ಶನಾಯ್ ಸಭಾಂಗಣ ದವರೆಗೆ ಎರಡೂ ಕಡೆಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಸಭೆಯಲ್ಲಿ ನಿರ್ಧಾರವಾಗಿದೆ. ಇದಕ್ಕೆ ಬೇಕಾದ ಅನುದಾನ ಹೆದ್ದಾರಿ ಪ್ರಾಧಿಕಾರದಲ್ಲಿ ಇದ್ದು, ಅದನ್ನು ಬಳಸಿಕೊಂಡು ಸರ್ವಿಸ್ ರಸ್ತೆಯನ್ನು ಕೂಡಲೇ ನಿರ್ಮಿಸಲು ನಿರ್ಧರಿಸಲಾಗಿದೆ ಎಂದೂ ಅವರು ಹೇಳಿದರು.
ಈ ಪರಿಸರದಲ್ಲಿ ಹಲವು ಶಾಲಾ-ಕಾಲೇಜುಗಳು ಇರುವುದರಿಂದ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮಹೇಶ್ ಆಸ್ಪತ್ರೆಯಿಂದ ಶನಾಯ್ ಸಭಾಂಗಣದವರೆಗೆ ಹೆದ್ದಾರಿಯ ಉದ್ದಕ್ಕೂ ಎರಡೂ ಕಡೆಗಳಲ್ಲಿ ತಡೆಬೇಲಿಗಳನ್ನು (ಬ್ಯಾರಿಕೇಡ್) ನಿರ್ಮಿಸಲು ಸಹ ನಿರ್ಧರಿಸಲಾಗಿದೆ. ಇದರಿಂದ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಹಠಾತ್ತನೆ ನುಗ್ಗಿ ಬರುವ ಸಾಧ್ಯತೆ ಇಲ್ಲವಾಗುತ್ತದೆ ಎಂದರು.
ಅಲ್ಲದೇ ಮಹೇಶ್ ಆಸ್ಪತ್ರೆ ಎದುರು ಫುಟ್‌ಓವರ್ ಬ್ರಿಜ್ ನಿರ್ಮಾಣಕ್ಕೂ ಶಿಫಾರಸ್ಸು ಮಾಡಲಾಗಿದೆ. ಇದನ್ನು ಜನರು ಮಾತ್ರವಲ್ಲದೇ, ಸೈಕಲ್ ಹಾಗೂ ದ್ವಿಚಕ್ರ ವಾಹನಗಳು ಸಂಚಾರಕ್ಕೆ ಬಳಸಲು ಸಾಧ್ಯವಾಗುವಂತೆ ರೂಪಿಸಲಾ ಗುವುದು ಎಂದು ಎನ್‌ಎಚ್ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಇದರೊಂದಿಗೆ ಆಕಾಶವಾಣಿ ಸರ್ಕಲ್ ಹಾಗೂ ಮಹೇಶ್ ಆಸ್ಪತ್ರೆ ಎದುರು ಟ್ರಾಫಿಕ್ ಸಿಗ್ನಲ್ ಅಳವಡಿಸಲು ಸಹ ಚಿಂತನೆ ನಡೆಸಲಾಗಿದೆ. ಸಮಿತಿಯಲ್ಲಿ ತೆಗೆದುಕೊಂಡ ಇನ್ನೊಂದು ಪ್ರಮುಖ ನಿರ್ಧಾರವೆಂದರೆ ಆಕಾಶವಾಣಿಯಿಂದ ಎಸ್‌ಎಂಎಸ್ ಕಾಲೇಜು ವರೆಗೆ ವಾಹನಗಳಿಗೆ ವೇಗದ ಮಿತಿಯನ್ನು ಅಳವಡಿಸಲು ಸಹ ನಿರ್ಧರಿಸಲಾಗಿದೆ. ಈ ಪರಿಧಿಯಲ್ಲಿ ವಾಹನಗಳ ಗರಿಷ್ಠ ವೇಗದ ಮಿತಿಯನ್ನು 40ಕಿ.ಮೀ.ಗೆ ನಿಯಂತ್ರಿಸಲಾಗುವುದು ಎಂದೂ ಬ್ರಹ್ಮಾವರ ತಹಶೀಲ್ದಾರರು ತಿಳಿಸಿದರು.
ಸಭೆಯಲ್ಲಿ ಡಿವೈಎಸ್ಪಿ ಪ್ರಭು ಟಿ., ಸರ್ಕಲ್ ಇನ್‌ಸ್ಪೆಕ್ಟರ್ ದಿವಾಕರ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

