ಸಮಾಜ ಸೇವೆಗೆ ಮತ್ತೊಂದು ಹೆಸರು ಆಸ್ಕರ್ ಫೆರ್ನಾಂಡಿಸ್: ಎಂ.ಎ.ಗಪೂರ್
ಉಡುಪಿ, ಸೆ.14: ಕೇಂದ್ರ ರಾಜ್ಯದಲ್ಲಿ ನಿಸ್ವಾರ್ಥ ರಾಜಕಾರಣ ಮಾಡಿರುವ ಕೇಂದ್ರದ ಮಾಜಿ ಸಚಿವ ದಿವಂಗತ ಆಸ್ಕರ್ ಫೆರ್ನಾಂಡಿಸ್ ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರಣಕರ್ತರು. ಯಾವುದೇ ಪ್ರಚಾರ ಬಯಸದ ಆಸ್ಕರ್ ಫೆರ್ನಾಂಡಿಸ್ ಸಮಾಜ ಸೇವೆಗೆ ಮತ್ತೊಂದು ಹೆಸರಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಪೂರ್ ಹೇಳಿದ್ದಾರೆ.
ದಿವಂಗತ ಆಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗ ಮತ್ತು ಮಾನವ ಬಂಧುತ್ವ ವೇದಿಕೆ ಉಡುಪಿ ಜಿಲ್ಲಾ ಸಂಚಲನ ಸಮಿತಿಯ ನೇತೃತ್ವದಲ್ಲಿ ದಿವಂಗತ ಆಸ್ಕರ್ ಫೆರ್ನಾಂಡಿಸ್ ಅವರ ದ್ವಿತೀಯ ಪುಣ್ಯತಿಥಿಯ ಸ್ಮರಣಾರ್ಥ ಉದ್ಯಾವರ ಸಂಪಿಗೆನಗರದ ’ಸ್ನೇಹಲಯ’ದಲ್ಲಿ ದಿನಸಿ ವಸ್ತುಗಳ ಹಸ್ತಾಂತರ ಕಾರ್ಯಕ್ರಮ ದಲ್ಲಿ ಅವರು ನುಡಿ ನಮನ ಸಲ್ಲಿಸಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಮಾತನಾಡಿದರು. ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ರಾಜ್ಯ ಸಮಿತಿ ಸದಸ್ಯ ರೊನಾಲ್ಡ್ ಮನೋಹರ್ ಕರ್ಕಡ, ಕಡೆಕಾರು ಗ್ರಾಪಂ ಉಪಾಧ್ಯಕ್ಷ ನವೀನ್ ಶೆಟ್ಟಿ, ಮಂಜೀತ್ ನಾಗರಾಜ್, ಮಹಮ್ಮದ್ ಶೀಶ್, ಜೂಲಿಯನ್ ದಾಂತಿ, ಚಾಲ್ಸ್ ಅಂಬ್ಲರ್, ರಿಯಾಜ್ ಪಳ್ಳಿ, ಸುಹೇಲ್ ಅಬ್ಬಾಸ್, ಪ್ರೇಮ್ ಮಿನೆಜಸ್, ಸಿಸ್ಟರ್ ಲೀನಾ ಮತ್ತಿತರರು ಉಪಸ್ಥಿತರಿದ್ದರು. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.