ಜಗತ್ತಿನ ತುತ್ತತುದಿಗೆ ಬೈಕ್ ಪ್ರಯಾಣ: ಕುಂದಾಪುರ ಮೂಲದ ತಾಯಿ-ಮಗಳ ಸಾಹಸ ಯಾತ್ರೆ
ಉಡುಪಿ, ಸೆ.20: ಕಳೆದ ಬಾರಿ ಜಗತ್ತಿನ ಎರಡನೇ ಎತ್ತರದ ಪ್ರದೇಶ ಖರ್ದುಂಗ್ಲಾ ಪಾಸ್‌ಗೆ ಬೈಕ್ ಮೂಲಕ ತೆರಳಿ ಸುದ್ದಿ ಮಾಡಿದ್ದ ಕುಂದಾಪುರ ಮೂಲದ ವಿಲ್ಮಾ ಕ್ರಾಸ್ತಾ ಕರ್ವಾಲೋ(55), ಈ ಬಾರಿ ತನ್ನ ಮಗಳ ಜೊತೆ ಜಗತ್ತಿನ ಅತಿ ಎತ್ತರದ ಪ್ರದೇಶ ಉಮ್ಲಿಂಗ್ಲಾ ಪಾಸ್‌ಗೆ ಹೋಗುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಸಮುದ್ರಮಟ್ಟಕ್ಕಿಂತ ಸುಮಾರು 19024 ಅಡಿ ಎತ್ತರದ ಈ ಪ್ರದೇಶ ಇಂಡೋ ಚೈನಾ ಗಡಿಗೆ ತಾಗಿಕೊಂಡಿದೆ. ಬೆಟ್ಟಗುಡ್ಡಗಳಿಂದ ತುಂಬಿರುವ ಲಡಾಕ್ ಪ್ರಾಂತ್ಯದ ಈ ಪ್ರದೇಶಕ್ಕೆ ಸಾಹಸಿ ರೈಡರ್‌ಗಳಿಗೆ ಮಾತ್ರ ತಲುಪಲು ಸಾಧ್ಯ. ಇವರು ತಮ್ಮ ಮಗಳು ಚೆರಿಶ್ ಕರ್ವಾಲೋ ಜೊತೆ ಹಲವು ಸವಾಲು ಗಳನ್ನು ಮೆಟ್ಟಿ ನಿಂತು ಈ ಯಾತ್ರೆಯನ್ನು ಬೈಕ್ ಮೂಲಕ ಯಶಸ್ವಿಯಾಗಿ ಪೂರೈಸಿದ್ದಾರೆ.
ಯೋಗ, ಪ್ರಾಣಾಯಾಮ, ಧ್ಯಾನ ಮತ್ತಿತರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ಇವರು, ವೃತ್ತಿಯಲ್ಲಿ ಕಾರ್ಪೊರೇಟರ್ ಟ್ರೈನರ್. ಸದ್ಯ ಇವರು ಕುಟುಂಬದ ಜೊತೆಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ‘ಮೂರನೇ ಬಾರಿ ಇಲ್ಲಿಗೆ ಬೈಕ್ ರೈಡ್ ಮಾಡಿದ್ದೇನೆ. ಈ ಬಾರಿ ತನ್ನ ಮಗಳಿಂದಾಗಿ ಈ ಸಾಹಸಯಾತ್ರೆ ಸಾಧ್ಯವಾಗಿದೆ. ಭವಿಷ್ಯದಲ್ಲಿ ಇನ್ನಷ್ಟು ಸಾಹಸ ಯಾತ್ರೆಗಳ ಮೂಲಕ ಸ್ಪೂರ್ತಿ ನೀಡುವ ಆಸೆ ಹೊಂದಿದ್ದೇನೆ ಎಂದು ವಿಲ್ಮಾ ತಿಳಿಸಿದ್ದಾರೆ.