ರಕ್ತದಾನ ಶಿಬಿರ ಸಂಪನ್ನ: ಅಂಗಾಂಗ ದಾನದ ಬಗ್ಗೆ ಜಾಗೃತಿ
ಶಿರ್ವ, ಅ.2: ಬಂಟಕಲ್ಲು ನಾಗರಿಕ ಸೇವಾ ಸಮಿತಿ ಆಶ್ರಯದಲ್ಲಿ ಇತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಗಾಂಧೀ ಜಯಂತಿ ಪ್ರಯುಕ್ತ ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತನಿಧಿ ತಂಡದ ಸಹಕಾರದೊಂದಿಗೆ ರಕ್ತದಾನ ಶಿಬಿರ ಶಿರ್ವ ರೋಟರಿ ಸಭಾಭವನದಲ್ಲಿ ಸೋಮವಾರ ನಡೆಯಿತು.
ಶಿಬಿರವನ್ನು ಶಿರ್ವ ಗ್ರಾಪಂ ಅಧ್ಯಕ್ಷೆ ಸವಿತಾ ರಾಜೇಶ್ ಉದ್ಘಾಟಿಸಿ ಶುಭ ಹಾರೈಸಿದರು. ಗ್ರಾಪಂ ಉಪಾಧ್ಯಕ್ಷ ವಿಲ್ಸನ್ ರೊಡ್ರಿಗಸ್, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲಿಯಾನ್ ಮಾತನಾಡಿದರು. ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ದೀಪಿಕಾ ನಾಯಕ್ ಅಂಗಾಂಗದಾನದ ಪ್ರತಿಜ್ಞಾವಿಧಿ ನೆರವೇರಿಸಿದರು.
ಆರೋಗ್ಯ ಅಧಿಕಾರಿ ವೈಷ್ಣವಿ ಅಂಗಾಂಗದಾನದ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ಭಾಗವಹಿಸಿದ 15 ಆಸಕ್ತ ಅಭ್ಯರ್ಥಿಗಳು ಅಂಗಾಂಗ ದಾನದ ನೋಂದಣಿ ಮಾಡಿದರು. ಸಮಿತಿ ಅಧ್ಯಕ್ಷ ಕೆ.ಆರ್.ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ರಕ್ತನಿಧಿ ವೈದ್ಯಾಧಿಕಾರಿ ಡಾ.ಮಾನ್ವಿ ಮಾರ್ಗದರ್ಶನದಲ್ಲಿ 86 ಆರೋಗ್ಯ ವಂತರು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಅಂಬುಲೆನ್ಸ್ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವೀರೇಂದ್ರ ಪಾಟ್ಕರ್ ಕೋಡುಗುಡ್ಡೆ, ಹರೀಶ್ ಹೇರೂರು, ವಿನ್ಸೆಂಟ್ ಪಲ್ಕೆ, ಉಮೇಶ ರಾವ್ ಇವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಶಿರ್ವದ ಅಧ್ಯಕ್ಷ ಮೊಹಮ್ಮದ್ ಫಾರೂಖ್, ರಾಜಾಪುರ ಸಾರಸ್ವತ ಯುವವೃಂದ ಅಧ್ಯಕ್ಷ ರಾಘವೇಂದ್ರ ನಾಯಕ್ ಪಾಲಮೆ, ಬಂಟಕಲ್ಲು ಲಯನ್ಸ್ ಕ್ಲಬ್ ಜಾಸ್ಮಿನ್ ಅಧ್ಯಕ್ಷೆ ಪ್ರಮೀಳಾ ಲೋಬೊ, ಬಂಟಕಲ್ಲು ಸಾರ್ವಜನಿಕ ಋಗಣೇಶೋತ್ಸವ ಸಮಿತಿ ಉಪಾಧ್ಯಕ್ಷ ಹರೀಶ್ ಹೇರೂರು, ಲಯನ್ಸ್ ಕ್ಲಬ್ ಅಧ್ಯಕ್ಷ ಜೋಸಿಲ್ ನೊರೋನ್ಹಾ, ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಉಮೇಶ್ ರಾವ್, ಸ್ವಾಸ್ಥ್ಯ ಆಯೋಗ್ ಪಾಂಬೂರು ಚರ್ಚ್ ನಿರ್ದೇಶಕಿ ಪ್ರಸಿಲ್ಲಾ ನೊರೋನ್ಹಾ ಉಪಸ್ಥಿತರಿದ್ದರು.