ಕಾರ್ಕಳ ತಾಲೂಕಿನ ಒಬ್ಬರಲ್ಲಿ ಕಾಲರಾ ರೋಗ ಪತ್ತೆ

Update: 2024-09-06 12:20 GMT

ಉಡುಪಿ/ಕಾರ್ಕಳ, ಸೆ.6: ಕಾರ್ಕಳ ತಾಲೂಕಿನ ಈದು ಗ್ರಾಮದ 36 ವರ್ಷ ಪ್ರಾಯದ ಪುರುಷರೊಬ್ಬರಲ್ಲಿ ಕಾಲರಾ ರೋಗ ಪತ್ತೆಯಾಗಿದೆ. ಅವರೀಗ ಉಡುಪಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತಿದ್ದು, ಗುಣಮುಖರಾಗುತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಐ.ಪಿ.ಗಡಾದ್ ತಿಳಿಸಿದ್ದಾರೆ.

ಮಂಗಳೂರಿನ ನಿರ್ಮಾಣ ಸಂಸ್ಥೆಯೊಂದರಲ್ಲಿ ಲಾರಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ 36 ವರ್ಷ ಪ್ರಾಯದ ಇವರಲ್ಲಿ ರವಿವಾರ ಜ್ವರ ಕಾಣಿಸಿಕೊಂಡಿದ್ದು, ಸೋಮವಾರ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಅವರ ರಕ್ತ ಪರೀಕ್ಷೆ ನಡೆಸಿದ್ದು, ಬುಧವಾರ ಕಾಲರಾವೆಂಬುದು ದೃಢಪಟ್ಟಿತ್ತು. ಇದೀಗ ಅವರಿಗೆ ಅಲ್ಲೇ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ರೋಗಿ ಲಾರಿ ಚಾಲಕರಾಗಿರುವುದರಿಂದ ಹೊರಗೆಲ್ಲಾ ತಿನ್ನುವ ಅಭ್ಯಾಸವಿದ್ದು, ಎಲ್ಲಿಂದ ಈ ರೋಗ ಬಂದಿರಬಹುದು ಎಂಬುದು ಸದ್ಯಕ್ಕೆ ಖಚಿತವಾಗಿಲ್ಲ. ಈದು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಯಾರಲ್ಲೂ ಈ ರೋಗದ ಲಕ್ಷಣ ಕಂಡುಬಂದಿಲ್ಲ. ಸದ್ಯ ಒಬ್ಬರಲ್ಲಿ ಮಾತ್ರ ಈ ರೋಗ ಕಾಣಿಸಿಕೊಂಡಿದೆ ಎಂದು ಅವರು ಸ್ಪಷ್ಟ ಪಡಿಸಿದರು.

ಜಿಲ್ಲೆಯ ಪ್ರಬಾರ ಸರ್ವೇಕ್ಷಣಾಧಿಕಾರಿ ಡಾ.ಪ್ರಶಾಂತ್ ಭಟ್ ಅವರನ್ನು ಈ ಬಗ್ಗೆ ವಿಚಾರಿಸಿದಾಗ, ಈವರೆಗೆ ಕೇವಲ ಒಬ್ಬರಲ್ಲಿ ಮಾತ್ರ ರೋಗ ಪತ್ತೆಯಾಗಿದೆ. ರೋಗದ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ. ಈದು ಪರಿಸರದಲ್ಲೂ ಈವರೆಗೆ ಯಾರಲ್ಲೂ ಪತ್ತೆಯಾಗಿಲ್ಲ. ಹೆಚ್ಚಿನ ತನಿಖೆ ನಡೆಸುತಿದ್ದೇವೆ ಎಂದರು.

ಆರೋಗ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಜಿಲ್ಲಾ ಆರೋಗ್ಯ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು ಈದು ವಿಗೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದ್ದು, ಪರಿಸರದ ಇನ್ನೂ 2-3 ಮಂದಿಯಲ್ಲಿ ರೋಗದ ಲಕ್ಷಣ ಕಾಣಿಸಿಕೊಂಡಿದೆ ಎಂದು ಹೇಳಲಾಗುತಿದ್ದರೂ, ಇಲಾಖೆ ಮೂಲಗಳು ಇದನ್ನು ಖಚಿತಪಡಿಸುತ್ತಿಲ್ಲ.

ಹವಾಮಾನ ವೈಪರಿತ್ಯ, ಶುಚಿತ್ವದ ಕೊರತೆ ಹಾಗೂ ಕಲುಷಿತ ನೀರು ಸೇವನೆಯಿಂದ ಕಾಲರಾ ರೋಗ ಬರುವ ಸಾಧ್ಯತೆ ಇದ್ದು, ಕುದಿಸಿದ ಬಿಸಿ ನೀರನ್ನೇ ಕುಡಿಯಲು ಬಳಸುವಂತೆ, ಬಿಸಿ ಬಿಸಿ ಆಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡುತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News