ಉಡುಪಿ ಜಿಲ್ಲೆಯಲ್ಲಿ ವಿಕಲಚೇತನರ ಸಮಗ್ರ ಸರ್ವೆ: ಸಚಿವೆ ಕರಂದ್ಲಾಜೆ

Update: 2023-09-24 12:35 GMT

ಉಡುಪಿ: ಉಡುಪಿ ಜಿಲ್ಲೆಯಲ್ಲಿ ತಳಮಟ್ಟದ ಅಧಿಕಾರಿಗಳ ಕೊರತೆಯ ಪರಿಣಾಮ ವಿಕಲಚೇತನರ ಕುರಿತು ಸಮಗ್ರ ಸರ್ವೆ ನಡೆಸುವಲ್ಲಿ ವಿಫಲರಾಗಿದ್ದೇವೆ. ಇದರಿಂದ ಸಾಕಷ್ಟು ಮಂದಿ ಫಲಾನುಭವಿಗಳು ಸೌಲಭ್ಯ ಗಳಿಂದ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ವಿಕಲಚೇತನರು ಮತ್ತು ಹಿರಿಯ ನಾಗರಿಕರ ಕುರಿತು ವ್ಯವಸ್ಥಿತವಾಗಿ ಸಮಗ್ರ ಸರ್ವೆ ನಡೆಸಿ, ಸೌಲಭ್ಯಗಳನ್ನು ನೀಡಬೇಕಾದ ಅಗತ್ಯವಿದೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಸಹಯೋಗದಲ್ಲಿ ರವಿವಾರ ಮಣಿಪಾಲದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾದ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಗ್ರಾಮೀಣ ಪ್ರದೇಶಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ವಿಕಲಚೇತನರು ಇನ್ನೂ ಇದ್ದಾರೆ. ಆದರೆ ಇಲಾಖೆ ಅಧಿಕಾರಿಗಳ ಕೊರತೆ ಕಾರಣದಿಂದ ಸರ್ವೆ ಮಾಡಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಪಂ ಪಿಡಿಓ ಕಾರ್ಯದರ್ಶಿಗಳ ಮೂಲಕ ಮನೆ ಮನೆ ಸರ್ವೆ ನಡೆಸುವ ಕಾರ್ಯ ಮಾಡಬೇಕಾಗಿದೆ. ವಿಕಲ ಚೇತನರ ಬಗ್ಗೆ ಮಾಹಿತಿ ಸಂಗ್ರಹಿಸಿ ಕೇಂದ್ರಕ್ಕೆ ಪ್ರಸ್ತಾಪ ಕಳುಹಿಸಿದರೆ ಎಲ್ಲರಿಗೂ ಉಚಿತವಾಗಿ ಪರಿಕರಗಳನ್ನು ನೀಡಬಹುದಾಗಿದೆ. ಕೇಂದ್ರ ಸಮಾಜ ಕಲ್ಯಾಣ ಇಲಾಖೆಯಲ್ಲಿ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದರು.

ಕಾರ್ಮಿಕ ಇಲಾಖೆ ಹಾಗೂ ಇಎಸ್‌ಐ ಸೌಲಭ್ಯ ಸಿಗಬೇಕಾದರೆ ಕಾರ್ಮಿಕರ ಬಗ್ಗೆ ಸರ್ವೆ ಆಗಬೇಕು. ಆದರೆ ನಮ್ಮಲ್ಲಿ ಆ ರೀತಿಯ ಯಾವುದೇ ಸರ್ವೆ ಆಗಿಲ್ಲ. ಆದುದರಿಂದ ಈವರೆಗೆ ಉಡುಪಿ ಜಿಲ್ಲೆ ಇಎಸ್‌ಐ ಆಸ್ಪತ್ರೆ ಮಂಜೂರಾಗಿರಲಿಲ್ಲ. ಇದೀಗ ಕಾನೂನು ಸರಳೀಕರಣಗೊಂಡಿರುವುದರಿಂದ ಜಿಲ್ಲೆಗೆ ಇಎಸ್‌ಐ ಆಸ್ಪತ್ರೆ ಮಂಜೂರಾಗಿದ್ದು, ಇದಕ್ಕೆ ವಾರಂಬಳ್ಳಿ ಯಲ್ಲಿ ಸ್ಥಳ ಗುರುತಿಸಲಾಗಿದೆ. ಇಲ್ಲಿ ಶೀಘ್ರವೇ ಶಂಕುಸ್ಥಾಪನೆ ಕಾರ್ಯ ನಡೆಸಲಾಗುವುದೆಂದು ಅವರು ತಿಳಿಸಿದರು.

ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಆರ್.ಹೆಬ್ಬಾಳ್ಕರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾಜಿಕ ನ್ಯಾಯದ ಅಡಿಯಲ್ಲಿ, ಪ್ರತಿಯೊಬ್ಬ ನಾಗರಿಕರಿಗೂ ಅನುಕೂಲವಾಗುವಂತೆ ಪ್ರತಿ ವರ್ಷ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಅಧಿಕಾರಿಗಳು ಜವಾಬ್ದಾರಿ ಯುತವಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ, ವಿಕಲಚೇತನರು ಮತ್ತು ಹಿರಿಯ ನಾಗರೀಕರು ಸೇರಿದಂತೆ ಪ್ರತಿಯೊಬ್ಬರಿಗೂ ಯೋಜನೆಗಳನ್ನು ತಲಪಿಸುವ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲೆಯ 495 ಫಲಾನುಭವಿಗಳಿಗೆ 48.50ಲಕ್ಷ ರೂ. ಮೊತ್ತದ 2496 ವಿವಿಧ ಸಾಧನ ಪರಿಕರಗಳನ್ನು ವಿತರಿಸಲಾಯಿತು. ಶಾಸಕರಾದ ಯಶ್‌ಪಾಲ್ ಸುವರ್ಣ, ಗುರುರಾಜ ಶೆಟ್ಟಿ ಗಂಟಿಹೊಳೆ, ಗುರ್ಮೆ ಸುರೇಶ್ ಶೆಟ್ಟಿ, ಜಿ.ಪಂ. ಸಿಇಒ ಪ್ರಸನ್ನ ಎಚ್., ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಶ್ಯಾಮಲಾ, ಜಿಲ್ಲಾ ನಿರೂಪಣಾಧಿಕಾರಿ ಕೃಷ್ಣಪ್ಪ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರಾಮದಾಸ್ ಮೊದಲಾದವರು ಉಪಸ್ಥಿತರಿದ್ದರು.

ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಗಿರಿರಾಜ್ ಪ್ರಸಾದ್ ಮೀನಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲಿಂಕೋ ಸಂಸ್ಥೆಯ ಅಶೋಕ್ ಪಾಲ್ ಸ್ವಾಗತಿಸಿದರು. ಶಿಶು ಅಭಿವೃದ್ದಿ ಯೋಜನಾಧಿಕಾರಿ ವೀಣಾ ವಿವೇಕಾನಂದ ಕಾರ್ಯಕ್ರಮ ನಿರೂಪಿಸಿದರು.

3000 ವಿಕಲಚೇತನರಿಗೆ ತ್ರಿಚಕ್ರ ಸ್ಕೂಟರ್: ಹೆಬ್ಬಾಳ್ಕರ್

ರಾಜ್ಯದಲ್ಲಿರುವ ವಿಕಲಚೇತನರಲ್ಲಿ 6800 ಜನರಿಗೆ ವಿವಿಧ ದೈನಂದಿನ ಚಟುವಟಿಕೆಗಳನ್ನು ಕೈಗೊಳ್ಳಲು ತ್ರಿಚಕ್ರ ಸ್ಕೂಟರ್ ಅವಶ್ಯಕತೆ ಇದ್ದು, ಈ ವರ್ಷ ಮೊದಲ ಹಂತದಲ್ಲಿ 30 ಕೋಟಿ ರೂ. ವೆಚ್ಚದಲ್ಲಿ 3000 ಹಾಗೂ ಎರಡನೇ ಹಂತದಲ್ಲಿ ಮುಂದಿನ ವರ್ಷ 3500 ಮಂದಿ ವಿಕಲಚೇತನರಿಗೆ ಸ್ಕೂಟರ್ ವಿತರಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಸಾರ್ವಜನಿಕರ ಕುಂದು ಕೊರತೆ ಆಲಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಅದೇ ರೀತಿ ಉಡುಪಿ ಜಿಲ್ಲೆಯಲ್ಲಿ ಪ್ರತಿ ತಿಂಗಳ 25ರಂದು ಜನತಾ ದರ್ಶನದ ಮೂಲಕ ಸಾರ್ವ ಜನಿಕರ ಅಹವಾಲು ಗಳನ್ನು ಸ್ವೀಕಾರ ಮಾಡಲಾಗುವುದು. ಸಾರ್ವಜನಿಕರು ತಮ್ಮ ಕುಂದಕೊರತೆಗಳನ್ನು ಜನತಾದರ್ಶನದ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News