ಕಟ್ಟಡ ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ ನಾಲ್ಕನೆ ದಿನಕ್ಕೆ: ಅ.3ರಂದು ಉಡುಪಿ ಬಂದ್‌ಗೆ ನಿರ್ಧಾರ

Update: 2023-09-29 15:48 GMT

ಉಡುಪಿ, ಸೆ.29: ಪರವಾನಿಗೆ ರಹಿತ ಕಟ್ಟಡ ಸಾಮಾಗ್ರಿ ಸಾಗಾಟ ವಾಹನಗಳನ್ನು ಮುಟ್ಟುಗೋಲು ಹಾಕಿ ದಂಡ ವಿಧಿಸಿ ಪ್ರಕರಣ ದಾಖಲಿಸುತ್ತಿ ರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಟ್ಟಡ ಸಾಮಗ್ರಿ ಸಾಗಾಟ ಲಾರಿ, ಟೆಂಪೋ ಮಾಲಕರ ಸಂಘಟನೆಗಳ ನೇತೃತ್ವದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಅನಿರ್ಧಿಷ್ಠಾವಧಿ ಮುಷ್ಕರವು ಶುಕ್ರವಾರವೂ ಮುಂದು ವರೆದಿದ್ದು, ನಾಲ್ಕನೆ ದಿನಕ್ಕೆ ಕಾಲಿರಿಸಿದೆ.

ಇಂದು ಕೂಡ ಕಟ್ಟಡ ಸಾಮಗ್ರಿ ಸಾಗಾಟವನ್ನು ಸ್ಥಗಿತಗೊಳಿಸಿ ನೂರಾರು ಸಂಖ್ಯೆಯ ಲಾರಿ ಹಾಗೂ ಟೆಂಪೋವನ್ನು ಉದ್ಯಾವರ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿ, ಕುಂದಾಪುರ ಕೋಟೇಶ್ವರ, ಹೆಮ್ಮಾಡಿ, ಕಾರ್ಕಳದ ರಸ್ತೆ ಬದಿಯಲ್ಲೂ ಸರತಿ ಸಾಲಿನಲ್ಲಿ ನಿಲ್ಲಿಸಲಾಗಿದೆ. ಈ ಸಂಬಂಧ ಪದಾಧಿಕಾರಿಗಳು ಉಡುಪಿಯಲ್ಲಿ ಸಭೆ ಕೂಡ ನಡೆಸಿದ್ದಾರೆ.

‘ಸೆ.30ರಂದು ನಡೆಸಲು ಉದ್ದೇಶಿಸಿರುವ ಜಿಲ್ಲಾಧಿಕಾರಿ ಕಚೇರಿವರೆಗಿನ ಕಾಲ್ನಡಿಗೆ ಜಾಥವನ್ನು ರದ್ದುಗೊಳಿಸಿ, ಅ.3ರಂದು ಉಡುಪಿ ಜಿಲ್ಲೆ ಬಂದ್ ನಡೆಸಲು ನಿರ್ಧರಿಸಲಾಗಿದೆ. ಈ ಕುರಿತು ಇಂದಿನ ಸಭೆಯಲ್ಲಿ ಪದಾಧಿಕಾರಿಗಳು ತೀರ್ಮಾನ ತೆಗೆದುಕೊಂಡಿದ್ದಾರೆ’ ಎಂದು ಒಕ್ಕೂಟದ ಪ್ರಮುಖ ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.

ಸಿಎಂ ಬಳಿ ನಿಯೋಗ: ಕುಂದಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಲಾರಿ ಹಾಗೂ ಗೂಡ್ಸ್ ವಾಹನಗಳ ಮಾಲಕರ ಹಾಗೂ ಚಾಲಕರ ಮುಷ್ಕರ ಸ್ಥಳಕ್ಕೆ ಶುಕ್ರವಾರ ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಭೇಟಿ ನೀಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಗಳ ಗಮನಕ್ಕೆ ತರಲಾಗಿದೆ. ನಿಯಮಾವಳಿ ಕಟ್ಟುನಿಟ್ಟಿನ ಅನುಷ್ಠಾನದಿಂದ ಜಿಲ್ಲೆಯ ಸಾಮಾನ್ಯ ಜನರಿಗೆ ಉಂಟಾಗುತ್ತಿ ರುವ ತೊಂದರೆಯನ್ನು ಗಮನಕ್ಕೆ ತಂದು, ಎಲ್ಲರಿಗೂ ಅನುಕೂಲವಾಗುವ ಪರಿಹಾರ ಸೂತ್ರವನ್ನು ರೂಪಿಸಲು ಕೋರಲಾ ಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಸಮಸ್ಯೆಯ ಗಂಭೀರತೆಯನ್ನು ತಿಳಿಸಲಾಗಿದೆ. ನಮ್ಮ ನಿಯೋಗ ನೇತೃತ್ವದಲ್ಲಿ ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಜಿಲ್ಲೆಯಲ್ಲಿನ ಪ್ರಸ್ತುತ ಸಮಸ್ಯೆಯನ್ನು ಗಮನಕ್ಕೆ ತಂದು ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯ ಪ್ರಮುಖರಾದ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ರಾಜು ಕುಲಾಲ್, ಸತೀಶ್ ದೇವಾಡಿಗ ಗುಡ್ಡೇಮನೆ, ಗೋಪಾಲ ನಾಯ್ಕ, ರಾಘ ವೇಂದ್ರ ಶೆಟ್ಟಿ ಮುಳ್ಳಿಕಟ್ಟೆ, ವಿನ್ಸೆಂಟ್ ಬಗ್ವಾಡಿ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News