ಕೃತಕ ನೆರೆ ಸೃಷ್ಟಿಗೆ ಹೊಳೆ ಹೂಳೆತ್ತುವುದೇ ಶಾಶ್ವತ ಪರಿಹಾರ: ಶಾಸಕ ಕಿರಣ್ ಕುಮಾರ್‌ ಕೊಡ್ಗಿ

Update: 2024-08-20 14:34 GMT

ಕುಂದಾಪುರ,ಆ.20: ಕುಂದಾಪುರ ಹಾಗೂ ಬ್ರಹ್ಮಾವರ ತಾಲೂಕಿನ ಅನೇಕ ಕಡೆಗಳಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಕೃತಕ ನೆರೆಗೆ ಹೊಳೆ ಹೂಳಿನ ಸಮಸ್ಯೆಯೇ ಕಾರಣ. ಇದರಿಂದ ರೈತರ ಭತ್ತದ ಕೃಷಿ ಕೊಳೆಯುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ವಾಗಿ ಹೊಳೆಯ ಹೂಳೆತ್ತಬೇಕು ಎಂಬ ಬೇಡಿಕೆಯಂತೆ ಕುಂದಾಪುರ ಶಾಸಕ ಕಿರಣ್ ಕುಮಾರ್‌ ಕೊಡ್ಗಿ ಮಂಗಳವಾರ ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

ಮುಂದಿನ ಮಾರ್ಚ್ ತಿಂಗಳಲ್ಲಿ ಹೂಳೆತ್ತುವ ಪ್ರಕ್ರಿಯೆ ನಡೆಯಬೇಕು ಎಂಬ ನಿರ್ಧಾರದಿಂದ ಸಿದ್ಧತೆಗಳು ಆರಂಭವಾಗಿದ್ದು, ಆಯಾ ಪಂಚಾಯತ್ ಗಳು ಇದರ ಜವಾಬ್ದಾರಿ ವಹಿಸಿಕೊಳ್ಳಬೇಕು. ಕಂದಾಯ ಇಲಾಖೆ ಜತೆಗೂಡಿ ಗಡಿಗುರುತು ಮಾಡಿ ನದಿ ದಂಡೆಯ ಜಾಗದ ಮಾಲಕರ ವಿವರ ಸಂಗ್ರಹಿಸಬೇಕು ಎಂದವರು ನುಡಿದರು.

ತಾ.ಪಂ., ನರೇಗಾ, ಸಣ್ಣ ನೀರಾವರಿ, ಅರಣ್ಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಾರಾಹಿ ನೀರಾವರಿ ನಿಗಮದವರು ಈ ಕೆಲಸದಲ್ಲಿ ಜತೆಗೂಡಬೇಕು ಎಂದು ಎಲ್ಲ ಇಲಾಖೆಯವರನ್ನು ಕರೆಸಲಾಗಿದೆ. ಹೂಳು ತೆಗೆಯುವ ಸಲು ವಾಗಿ ವಾರಾಹಿ ನೀರು ವಿಳಂಬ ಮಾಡಬೇಕಾದ ಸಂದರ್ಭ ಬಂದಲ್ಲಿ ರೈತರ ಸಭೆ ಕರೆದು ಸಲಹೆ ಪಡೆಯಬೇಕು ಎಂದರು.

ಒಂದು ತಿಂಗಳಿನ ಒಳಗೆ ಕಾಮಗಾರಿ ಪೂರ್ಣವಾಗಬೇಕು. ಇನ್ನು 6 ತಿಂಗಳು ಕಡತ ಸಿದ್ಧತೆಗಾಗಿ ಇದೆ. ಹೂಳಿನ ಜತೆ ಮರಳು ದೊರೆತರೆ ಗಣಿ ಇಲಾಖೆ ಅನುಮತಿಯೊಂದಿಗೆ ಪಂಚಾಯತ್ ಮಾರಾಟ ಮಾಡಿ ಆದಾಯ ಗಳಿಸಬಹುದು ಎಂದು ಶಾಸಕ ಕೊಡ್ಗಿ ಹೇಳಿದರು.

ವಾರಾಹಿ ಕಾಲುವೆ ಮೂಲಕ ಬರುವ ಮಳೆಗಾಲದ ನೀರನ್ನು ಸಹಜ ಒಡ್ಡುಗಳ ಮೂಲಕ ನದಿ ಸೇರುವಂತೆ ಮಾಡಬಹುದೇ ಎಂದು ಪರಿಶೀಲಿಸಿ ಎಂದು ವಾರಾಹಿ ನಿಗಮದವರಿಗೆ, ನದಿ ದಂಡೆಯ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕುರಿತು ಪರಿಶೀಲಿಸಿ ಎಂದು ಅರಣ್ಯ ಇಲಾಖೆಗೆ ಸೂಚನೆ ನೀಡಿದರು.13 ಪಂಚಾಯತ್‌ಗಳಿಗೆ ಮರಳು ತೆಗೆಯಲು ಈಗಾಗಲೇ ಅನುಮತಿ ನೀಡಲಾಗಿದೆ ಎಂದು ಗಣಿ ಇಲಾಖೆ ಅಧಿಕಾರಿ ತಿಳಿಸಿದರು.

ಯಡಾಡಿ ಮತ್ಯಾಡಿಯಿಂದ ಬಾರ್ಕೂರುವರೆಗೆ ಹಿರೆಹೊಳೆಗೆ, ಹೊಂಬಾಡಿ ಮಂಬಾಡಿಯಿಂದ ಗಿಳಿಯಾರವರೆಗೆ ಕಿರಿ ಹೊಳೆಗೆ, ಕಾರ್ಕಡ ನಾಗರಮಠ ದಿಂದ ಉಳ್ತೂರುವರೆಗೆ ಉಪ್ಲಾಡಿ ಹೊಳೆಗೆ ಒಟ್ಟು 3.50ಕಿ.ಮೀ. ಹೊಳೆದಂಡೆ ರಚನೆ, ಹೂಳೆತ್ತಲು 21 ಕೋ.ರೂ. ಅಂದಾಜುಪಟ್ಟಿ ತಯಾರಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯವರು ತಿಳಿಸಿದರು.

ವಾರಾಹಿ ನೀರು ನಿಲ್ಲಿಸಿದರೆ ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆ ಎಂದು ಕಾಳಾವರ ರಾಮಚಂದ್ರ ನಾವಡ ಹೇಳಿದರೆ, ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ ಹೂಳೆತ್ತಿ ಅಲ್ಲೇ ಹಾಕಿದರೆ ಪ್ರಯೋಜನ ಇಲ್ಲ. ತೋಟ, ಮನೆಗಳ ರಕ್ಷಣೆ ಕೆಲಸ ಮೊದಲಾಗಲಿ ಎಂದರು. ಬೇಳೂರು, ಗಿಳಿಯಾರ್ ಪಂಚಾಯತ್ ಪ್ರತಿನಿಧಿಗಳು ಮಾತನಾಡಿದರು.

ನೆರೆಪೀಡಿತ ಪ್ರದೇಶಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಕಾರಿ ಪ್ರತೀಕ್ ಬಾಯಲ್ ಭೇಟಿ ನೀಡಿ ನರೇಗಾ ಮೂಲಕ ಸಾಧ್ಯವಾದಷ್ಟು ಕಾಮಗಾರಿ ನಡೆಸಲು ಸೂಚನೆ ನೀಡಿದ್ದಾಗಿ ಕುಂದಾಪುರ ತಾಪಂನ ಕಾರ್ಯನಿರ್ವಹಣಾಕಾರಿ ಶಶಿಧರ ಕೆ.ಜಿ. ತಿಳಿಸಿದರು.

ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗಡೆ, ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಕಾರಿ ಇಬ್ರಾಹಿಂಪುರ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ, ಕಾಳಾವರ, ಕೆದೂರು, ಬೇಳೂರು, ತೆಕ್ಕಟ್ಟೆ, ಕೋಟ, ಬಾರ್ಕೂರು ಮತ್ತು ವಡ್ಡರ್ಸೆ ಗ್ರಾಮ ಪಂಚಾಯತ್‌ಗಳ ಪ್ರತಿನಿಧಿಗಳು, ಗ್ರಾಪಂಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತೋಟಗಾರಿಕೆ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ವಲಯ ಅರಣ್ಯಾಧಿಕಾರಿ, ವಾರಾಹಿ ನಿಗಮದವರು ಉಪಸ್ಥಿತರಿದ್ದರು.

ನೆರೆಗೆ ನದಿಯ ಹೂಳೇ ಕಾರಣ

ಕಾಳಾವರ, ಕೆದೂರು, ಬೇಳೂರು, ತೆಕ್ಕಟ್ಟೆ, ಕೋಟ, ಬಾರ್ಕೂರು ಮತ್ತು ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹರಿಯುವ ನದಿಗಳಲ್ಲಿ ತುಂಬಿರುವ ಹೂಳುಗಳಿಂದ ಕೃತಕ ನೆರೆ ಉಂಟಾಗುತ್ತಿದೆ. ತೆಕ್ಕಟ್ಟೆ ಮಲ್ಯಾಡಿಯಿಂದ ಚಿತ್ರಪಾಡಿಯ ತನಕ ಹರಿಯುವ ಸೊಲಡ್ಪು ನದಿಯಲ್ಲಿ ತುಂಬಿರುವ ಹೂಳಿನಿಂದಾಗಿ ನದಿಯಲ್ಲಿ ನೀರಿನ ಸರಾಗ ಹರಿಯುವಿಕೆಗೆ ತೊಂದರೆ ಯುಂಟಾಗಿ ಪ್ರತಿ ಮಳೆಗಾಲದ ವೇಳೆಯಲ್ಲಿಯೂ ಕೃತಕ ನೆರೆಯುಂಟಾಗಿ ಪರಿಸರದ ಕೃಷಿ ಗದ್ದೆಗಳಿಗೆ ಹಾನಿಯುಂಟಾ ಗುತ್ತಿದೆ ಎಂದು ಇತ್ತೀಚೆಗೆ ಪರಿಸರದ ಗ್ರಾಮಸ್ಥರು ಧರಣಿ ಪ್ರತಿಭಟನೆ ನಡೆಸಿದ್ದರು.

ಇತ್ತೀಚೆಗೆ ಜೋರಾಗಿ ಸುರಿದ ಮಳೆಯಿಂದಾಗಿ ಗಿಳಿಯಾರು, ಬೇಳೂರು ಪರಿಸರದಲ್ಲಿ ಕೃಷಿ ಗದ್ದೆಗಳಲ್ಲಿ ಕೃತಕ ನೀರು ತುಂಬಿ ನೂರಾರು ಎಕರೆ ಕೃಷಿ ಭೂಮಿಗಳಿಗೆ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಇಂದಿನ ಸಭೆಯನ್ನು ಕರೆಯಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News