ವಾರದೊಳಗೆ ಪಹಣಿ -ಆಧಾರ್ ಜೋಡಣೆಗೆ ಸರಕಾರದ ನಿರ್ದೇಶನ: ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ

Update: 2024-09-01 12:39 GMT

ಉಡುಪಿ, ಸೆ.1: ರೈತರು ತಮ್ಮ ಜಮೀನಿನ ಪಹಣಿಯನ್ನು ಆಧಾರ್‌ಗೆ ಲಿಂಕ್ ಮಾಡುವ ಕಾರ್ಯವು ಪ್ರಸ್ತುತ ಪ್ರಗತಿ ಯಲ್ಲಿದ್ದು, ಜಿಲ್ಲೆಯ ಕೆಲವೊಂದು ನಾಗರಿಕರು ಆಧಾರ್ ಲಿಂಕ್ ಮಾಡಲು ಹಿಂಜರಿಯುತ್ತಿರುವುದರಿಂದ ಈವರೆಗೆ ಶೇ.65ರಷ್ಟು ಮಾತ್ರ ಪ್ರಗತಿ ಆಗಿದೆ. ಆದುದರಿಂದ ಮುಂದಿನ ವಾರದೊಳಗೆ ಜಿಲ್ಲೆಯಲ್ಲಿ ಬಾಕಿ ಇರುವ ಭೂಮಾಲೀಕರ ಜಮೀನಿನ ಪಹಣಿಯನ್ನು ಆಧಾರ್‌ಗೆ ಲಿಂಕ್ ಮಾಡುವ ಬಗ್ಗೆ ಸರಕಾರ ನಿರ್ದೇಶನ ನೀಡಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ತಿಳಿಸಿದ್ದಾರೆ.

ರೈತರಿಗೆ ನಿಗಧಿತ ಸಮಯದಲ್ಲಿ ಸರಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಾಗೂ ಅಕ್ರಮ ಖಾತಾ ಬದಲಾವಣೆ ಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಆಧಾರ್ ಜೋಡಣೆಯು ಅವಶ್ಯಕವಾಗಿರುವುದರಿಂದ ಜಿಲ್ಲೆಯ ರೈತರು ಮೂರು ದಿನ ದೊಳಗಾಗಿ ಪಹಣಿ, ಆಧಾರ್ ದಾಖಲಾತಿಗಳೊಂದಿಗೆ ಹಾಗೂ ಆಧಾರ್ ಜೋಡಣೆಯಾಗಿರುವ ಮೊಬೈಲ್ ನೊಂದಿಗೆ ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಯವರನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿ ಕೊಳ್ಳಬಹುದಾಗಿದೆ.

ಜಿಲ್ಲೆಯಲ್ಲಿ ಜಮೀನು ಹೊಂದಿ ಬೇರೆ ರಾಜ್ಯ ಹಾಗೂ ವಿದೇಶದಲ್ಲಿ ವಾಸವಿದ್ದ ಭೂಮಾಲೀಕರು ಅವರ ಕುಟುಂಬಸ್ಥರು/ಸಂಬಂಧಿಕರು ಜಿಲ್ಲೆಯಲ್ಲಿದ್ದಲ್ಲಿ ಅವರಿಂದ ಮಾಹಿತಿಯನ್ನು ಪಡೆದು ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಿ ಪಹಣಿಗೆ ಆಧಾರ್ ಜೋಡಣೆ ಮಾಡಿಸಬೇಕು. ಈ ಕಾರ್ಯವು ಗ್ರಾಮ ಆಡಳಿತ ಅಧಿಕಾರಿಗಳ ಮುಖಾಂತರವೇ ಆಗುತ್ತಿದ್ದು ಸೈಬರ್, ಗ್ರಾಮ ಒನ್ ಸೆಂಟರ್ ಇತ್ಯಾದಿ ಕಡೆಗಳಲ್ಲಿ ಮಾಡಲು ಅವಕಾಶ ಇರುವುದಿಲ್ಲ.

ಈವರೆಗೆ ಆಧಾರ್ ಜೋಡಣೆ ಮಾಡದೇ ಇರುವ ಭೂಮಾಲೀಕರು ಮುಂದಿನ ದಿನಗಳಲ್ಲಿ ಸರಕಾರದ ಸವಲತ್ತುಗಳಿಂದ ವಂಚಿತರಾಗುವ ಸಂಭವ ಇರುವುದರಿಂದ ಆಧಾರ್ ಜೋಡಣೆ ಮಾಡದೇ ಇರುವ ಭೂಮಾಲೀಕರು ತಕ್ಷಣವೇ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಿ ಪಹಣಿಗೆ ಆಧಾರ್ ಜೋಡಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿ ಕಾರಿ ಡಾ.ಕೆ.ವಿದ್ಯಾ ಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News