ಆಶಾ ಕಾರ್ಯಕರ್ತೆಯರ ಸೇವೆಗೆ ಸರಕಾರ ಪ್ರತಿಫಲ ನೀಡಿಲ್ಲ: ನಾಗಲಕ್ಷ್ಮೀ
ಉಡುಪಿ, ಸೆ.1: ರಾಜ್ಯದಲ್ಲಿ ಕಳೆದ 15 ವರ್ಷಗಳಿಂದ ಶಿಶು ಮರಣ ತಾಯಿ ಮರಣ ಕಡಿಮೆಯಾಗಲು ಆರೋಗ್ಯ ಸೂಚಿ ಮಾಪಕಗಳು ಹೆಚ್ಚಿಸಲು ಆಶಾ ಕಾರ್ಯಕರ್ತೆಯರ ಸೇವೆ ಪ್ರಮುಖ. ಆದರೆ ಸರಕಾರ ಪ್ರತಿಫಲ ನೀಡದೆ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ಇದಕ್ಕೆ ಸಂಘಟಿತ ನಿರಂತರ ಒಗ್ಗಟ್ಟಿನ ಹೋರಾಟ ಒಂದೇ ಪರಿಹಾರ ಆಗಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಕಡಿಯಾಳಿ ಮಹಿಷ ಮರ್ದಿನಿ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಉಡುಪಿ ಜಿಲ್ಲಾ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆಯ ರಾಜ್ಯ ಮಟ್ಟದ ಪ್ರಥಮ ಸಮ್ಮೇಳನವು ಸೆ.13, 14ರಂದು ಕಲಬುರ್ಗಿಯಲ್ಲಿ ಸಂಘಟಿಸಲಾಗಿದೆ. ರಾಜ್ಯದ 31 ಜಿಲ್ಲೆಗಳ ಆಶಾ ಕಾರ್ಯಕರ್ತೆಯರು ಈ ಸಮ್ಮೇಳನದಲ್ಲಿ ಭಾಗವಹಿಸಬೇಕು. ಈ ಸಮ್ಮೇಳನದಲ್ಲಿ ಸರಕಾರಕ್ಕೆ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದರು.
ಆಶಾ ಕಾರ್ಯಕರ್ತೆಯರು ತಳಮಟ್ಟದಲ್ಲಿ ಆರೋಗ್ಯ ಸೇವೆಯನ್ನು ಮತ್ತು ಆರೋಗ್ಯದ ಆರಿವನ್ನು, ಸಾಮಾನ್ಯ ಜನಗಳಿಗೆ ನೀಡುತ್ತ ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಕರೋನಾ ಸಂದರ್ಭದಲ್ಲಿ ಇವರ ಸೇವೆಯನ್ನು ಮೆಚ್ಚಿ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ನಾಯಕರೆಂದು ಬಿರುದನ್ನು ನೀಡಿದೆ ಎಂದು ಅವರು ತಿಳಿಸಿದರು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ.ಭಟ್ ಭಟ್ ಮಾತನಾಡಿ, ಆಶಾ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಅಲ್ಲಿಯವರೆಗೆ ಅವರನ್ನು ಕಾರ್ಮಿಕರು ಎಂದು ಪರಿಗ ಣಿಸಿ ಎಲ್ಲಾ ಶಾಸನಬದ್ಧ ಹಕ್ಕುಗಳನ್ನು ನೀಡಬೇಕು. ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು. ಕಾರ್ಮಿಕರ ಮೇಲೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಒಗ್ಗಟ್ಟಿನ ಹೋರಾಟ ಕಟ್ಟಬೇಕು ಎಂದು ಹೇಳಿದರು.
ಜಿಲ್ಲಾ ಸಂಚಾಲಕಿ ಹರಿಣಿ ಮಾತನಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲಾ ದುಡಿಯುವ ವಿಭಾಗದ ಜನತೆ ಅನ್ಯಾಯಗಳಿಗೆ ಒಳಗಾಗಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯಗಳು ಅವ್ಯಾಹತವಾಗಿ ನಡೆಯುತ್ತಿದ್ದು, ದುಡಿಯುವ ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಿನ ಹೋರಾಟ ಮಾಡಬೇಕಾಗಿದೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಮುಖ್ಯ ಗೊತ್ತುವಳಿ, ಸಂಘಟನಾತ್ಮಕ ಗೊತ್ತುವಳಿ ಮತ್ತು ಕಲ್ಕತ್ತಾ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಗೊತ್ತುವಳಿ ಮಂಡಿಸಲಾಯಿತು. ಅಗಲಿದ ಆಶಾ ಕಾರ್ಯಕರ್ತೆಯರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸ ಲಾಯಿತು. ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಗಡದ್, ಡಿಪಿಎಂಓ ಗಿರೀಶ್ ಶುಭ ಹಾರೈಸಿದರು.
ಈ ಸಮ್ಮೇಳನದಲ್ಲಿ ನೂತನ ಉಡುಪಿ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಸಲಹೆಗಾರರಾಗಿ ಹರಿಣಿ, ಗೌರವಾಧ್ಯಕ್ಷರಾಗಿ ಶೋಭಾ ಅಜೇಕರ್, ಶಾಂಭವಿ ಕುಲಾಲ್, ಮೆಬೆಲ್, ಸಾಧು, ಅಧ್ಯಕ್ಷರಾಗಿ ಸುಹಾಸಿನಿ, ಉಪಾಧ್ಯಕ್ಷ ರಾಗಿ ಯಶೋಧ, ಭಾರತಿ, ವಿನೋದ, ಹಿರಿಯಕ್ಕ, ಕಾರ್ಯದರ್ಶಿ ಯಾಗಿ ಉಮಾ, ಸಹ ಕಾರ್ಯದರ್ಶಿಯಾಗಿ ಪ್ರಮಿಳಾ, ಶಾರದಾ ಹಾಗೂ 20 ಮಂದಿ ಆಶಾ ಜಿಲ್ಲಾ ಮುಖಂಡರನ್ನು ಕಾರ್ಯಕಾರಿ ಸಮಿತಿಯ ಸದಸ್ಯರು ಗಳನ್ನಾಗಿ ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.