ಇಂದ್ರಾಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಡಿಸೆಂಬರ್ ಒಳಗೆ ಮುಗಿಸಿ: ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಉಡುಪಿ ಜಿಲ್ಲಾಧಿಕಾರಿ

Update: 2023-10-18 15:41 GMT

ಉಡುಪಿ, ಅ.18: ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಇಂದ್ರಾಳಿ ರೈಲ್ವೆ ಮೇಲು ಸೇತುವೆ ಮೇಲಿನ ರಸ್ತೆ ಆಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ಡಿಸೆಂಬರ್ ಒಳಗೆ ಪೂರ್ಣಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊ ಡಬೇಕು. ಈ ಬಗ್ಗೆ ರೈಲ್ವೇ ಇಲಾಖೆಯ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಇಂದ್ರಾಳಿ ರೈಲ್ವೆ ಮೇಲ್ಸೇತುವೆಯ ಎರಡೂ ಭಾಗದ 100ಮಿ. ವ್ಯಾಪ್ತಿಯಲ್ಲಿ ಯಾವುದೇ ಬಸ್‌ಗಳು ನಿಲ್ಲಿಸದಂತೆ ಕ್ರಮ ವಹಿಸಬೇಕು. ಬಸ್‌ಗಳ ನಿಲುಗಡೆಯಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಯಾಗುವುದರ ಜೊತೆಗೆ ರಸ್ತೆ ಅಪಘಾತಗಳು ನಡೆಯುವ ಸಾಧ್ಯತೆಗಳಿವೆ ಎಂದವರು ಹೇಳಿದರು.

ಜಿಲ್ಲೆಯಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಅಪಘಾತ ವಲಯದ ‘ಬ್ಲ್ಯಾಕ್ ಸ್ಪಾಟ್’ಗಳನ್ನು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗೆ ಸಂಬಂದಿಸಿದ ಅಧಿಕಾರಿಗಳು ತತ್‌ಕ್ಷಣದಲ್ಲಿಯೇ ಈ ಸ್ಥಳಗಳಲ್ಲಿ ಸುರಕ್ಷತಾ ಸೌಕರ್ಯಗಳ ಕಾರ್ಯಗಳನ್ನು ವೈಜ್ಞಾನಿಕವಾಗಿ ಕೈಗೊಂಡು ಅಪಘಾತಗಳನ್ನು ತಪ್ಪಿಸಲು ಮುಂದಾಗಬೇಕು ಎಂದರು.

ಪ್ರತಿಯೊಬ್ಬ ನಾಗರಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದಲ್ಲಿ ರಸ್ತೆ ಅಪಘಾತ ಪ್ರಕರಣಗಳನ್ನು ಕಡಿಮೆ ಮಾಡಲು ಸಾಧ್ಯ ವಿದೆ ಎಂದು ಜಿಲ್ಲಾಧಿಕಾರಿ ನುಡಿದರು.

ಜಿಲ್ಲೆಯಲ್ಲಿ ಸಾರ್ವಜನಿಕರ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅಗತ್ಯವಿರುವ ರಸ್ತೆ ಸುಧಾರಣೆಗೆ ಮೂಲಭೂತ ಕಾಮಗಾರಿಗಳನ್ನು ಕೈಗೊಂಡು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಅಪಘಾತ ಪ್ರಮಾಣವನ್ನು ಶೂನ್ಯಕ್ಕೆ ಸಾಧ್ಯವಾಗದಿದ್ದರೂ ಅತ್ಯಂತ ಕಡಿಮೆಗೊಳಿಸಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ರಸ್ತೆಯ ಬದಿಯ ಖಾಲಿ ಸ್ಥಳಗಳಲ್ಲಿ ಗಿಡ ಮರಗಳನ್ನು ನೆಡಲು ಮಾರ್ಗಸೂಚಿಗಳನ್ನು ರೂಪಿಸಿ, ಗಿಡ ಮರಗಳನ್ನು ನೆಡ ಬೇಕು ಎಂದ ಅವರು, ರಸ್ತೆಯ ಇಕ್ಕೆಲಗಳಲ್ಲಿರುವ ಅಪಾಯಕಾರಿ ಮರ ಹಾಗೂ ಮರದ ರೆಂಬೆಗಳನ್ನು ತೆರವುಗೊಳಿಸ ಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್, ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್, ಪೌರಾಯುಕ್ತ ರಾಯಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ದಿನೇಶ್ ಕೆ.ಎನ್, ರಾಷ್ಟ್ರೀಯ ಹೆದ್ದಾರಿ ಅಭಿಯಂತರ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News