ಕಾರ್ಕಳ: ಸಿಮೆಂಟ್ ಡೀಲರ್‌ಶಿಪ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ
ಕಾರ್ಕಳ, ಸೆ.14: ಎಸಿಸಿ ಸಿಮೆಂಟ್ ಡೀಲರ್ ಶಿಪ್ ಕೊಡಿಸುವುದಾಗಿ ನಂಬಿಸಿ ಉದ್ಯಮಿಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ ಎಸಗಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಎಂಬಲ್ಲಿ ಹಾರ್ಡ್‌ವೇರ್ ವ್ಯವಹಾರ ನಡೆಸುತ್ತಿದ್ದ ಶರತ್ ಆಚಾರ್ಯ, ಎಸಿಸಿ ಸಿಮೆಂಟ್ ಡೀಲರ್‌ಶಿಪ್ ಪಡೆಯಲು ಗೂಗಲ್‌ನಲ್ಲಿ ಹುಡುಕಾಡಿದ್ದು, ವೆಬ್‌ಸೈಟಿನಲ್ಲಿ ದೊರೆತ ಮೊಬೈಲ್ ಸಂಖ್ಯೆಗೆ ಸೆ.3ರಂದು ಕರೆ ಮಾಡಿ ಮಾತನಾಡಿದ್ದರು.
ಆರೋಪಿ ತಿಳಿಸಿರುವಂತೆ ಶರತ್ ಆಚಾರ್ಯ, ಸೆ.5ರಂದು ಡೀಲರ್ ಶಿಪ್ ಮತ್ತು ರಿಜಿಸ್ಟ್ರೇಷನ್ ಶುಲ್ಕ 1,25,000ರೂ. ಹಣವನ್ನು ಆರೋಪಿಯ ಖಾತೆಗೆ ಪಾವತಿಸಿದ್ದರು. ನಂತರ ಆತನು ತಿಳಿಸಿದಂತೆ 1000 ಚೀಲ ಸಿಮೆಂಟ್ ಆರ್ಡರ್ ಮಾಡಲು 3,36,000ರೂ. ಪಾವತಿಸಲು ತಿಳಿಸಿದಂತೆ ಹಣ ಪಾವತಿಸಲು ಪ್ರಯತ್ನಿಸಿದ್ದು, ತಾಂತ್ರಿಕ ತೊಂದರೆಯಿಂದ ಹಣ ಪಾವತಿ ಆಗಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಮೂಲಕ ಆರೋಪಿ ಎಸಿಸಿ ಸಿಮೆಂಟ್ ಡೀಲರ್ ಶಿಪ್ ಕೊಡಿಸುವುದಾಗಿ ನಂಬಿಸಿ ಹಣವನ್ನು ಪಡೆದು ಮೋಸ ಮಾಡಿರುವುದಾಗಿ ದೂರಲಾಗಿದೆ.