ಕಾಪು ಲೀಲಾಧರ ಶೆಟ್ಟಿ ಪುತ್ರಿಯ ಅಪಹರಣ ಪ್ರಕರಣ: ನಾಲ್ವರ ಬಂಧನ
ಕಾಪು, ಡಿ.18: ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ ಅವರ ಸಾಕು ಪುತ್ರಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯನ್ನು ರವಿವಾರ ರಕ್ಷಿಸಿರುವ ಕಾಪು ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬಾಲಕಿಯ ಸ್ನೇಹಿತ ತಮಿಳುನಾಡು ಮೂಲದ ಶಿರ್ವ ನಿವಾಸಿ ಗೀರಿಶ್(19) ಮತ್ತು ಅಪಹರುಸಲು ಸಹಕರಿಸಿದ ಗಿರೀಶ್ ಸಂಬಂಧಿ ರೂಪೇಶ್(21), ಸ್ನೇಹಿತರಾದ ಪಾದೆಬೆಟ್ಟುವಿನ ಜಯಂತ್ ಆಚಾರ್ಯ(23) ಹಾಗೂ ಮಜೂರು ನಿವಾಸಿ ಮುಹಮ್ಮದ್ ಅಝೀಜ್(21) ಎಂದು ಗುರುತಿಸಲಾಗಿದೆ.
ಕಾಪು ಲೀಲಾಧರ ಶೆಟ್ಟಿ ದಂಪತಿ 16 ವರ್ಷಗಳ ಹಿಂದೆ ಹೆಣ್ಣು ಮಗುವನ್ನು ದತ್ತು ಪಡೆದಿದ್ದರು. 17ರ ಹರೆಯದ ಆಕೆ ಡಿ.11ರಂದು ಮನೆಯಿಂದ ನಾಪತ್ತೆ ಯಾಗಿದ್ದರು. ಆಕೆಯನ್ನು ಗಿರೀಶ್ ಪುಸಲಾಯಿಸಿ ಕರೆದುಕೊಂಡು ಹೋಗಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು. ಅದರಂತೆ ಕಾರ್ಯಾಚರಣೆ ನಡೆಸಿದ ಕಾಪು ಪೊಲೀಸರು ಆರೋಪಿಗಳನ್ನು ಕಾಸರಗೋಡಿನ ಕುಂಬ್ಳೆ ಎಂಬಲ್ಲಿರುವ ಸಂಬಧಿಕರ ಮನೆಯಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಗಿರೀಶ್ ಡಿ.11ರಂದು ರಾತ್ರಿ ಲೀಲಾಧರ ಶೆಟ್ಟಿಯ ದತ್ತು ಪುತ್ರಿಯನ್ನು ಆಕೆಯ ಮನೆಯಿಂದ ತನ್ನ ಸ್ಕೂಟರ್‌ನಲ್ಲಿ ಕರೆದೊಯ್ದಿದ್ದು, ಪಡುಬಿದ್ರೆ ಸಮೀಪ ಹೋಗು ವಾಗ ಸ್ಕೂಟರ್ ಹಾಳಾಯಿತ್ತೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತ ತನ್ನ ಸಂಬಂಧಿ ರೂಪೇಶ್‌ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದನು. ಅದರಂತೆ ರೂಪೇಶ್ ತನ್ನ ಸ್ಕೂಟರ್‌ನಲ್ಲಿ ಗೆಳೆಯ ಮುಹಮ್ಮದ್ ಅಝೀಝ್‌ನನ್ನು ಕರೆದು ಕೊಂಡು ಪಡುಬಿದ್ರಿಗೆ ತೆರಳಿದ್ದನು.
ಅಲ್ಲಿ ಸ್ಕೂಟರ್ ಬದಲಾಯಿಸಿಕೊಂಡು ರೂಪೇಶ್‌ನ ಸ್ಕೂಟರ್‌ನಲ್ಲಿ ಗಿರೀಶ್ ಮತ್ತು ಬಾಲಕಿ ಕುಂಬ್ಳೆಗೆ ತೆರಳುತ್ತಾರೆ. ರೂಪೇಶ್ ಮತ್ತು ಅಝೀಝ್ ಪಡುಬಿದ್ರಿ ಬೀಚ್‌ನಲ್ಲಿಯೇ ರಾತ್ರಿ ಕಳೆಯುತ್ತಾರೆ. ಮರುದಿನ ಬೆಳಗ್ಗೆ ಇವರಿಬ್ಬರು ಗೆಳೆಯ ಜಯಂತ್ ಆಚಾರ್ಯಗೆ ಕರೆ ಮಾಡಿ ಆತನನ್ನು ಕೂಡ ಪಡುಬಿದ್ರಿಗೆ ಕರೆಸಿಕೊಳ್ಳುತ್ತಾರೆ. ಅಲ್ಲಿಂದ ಮೂವರು ಒಟ್ಟಿಗೆ ಕುಂಬ್ಳೆಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತ ಮಗಳು ನಾಪತ್ತೆಯಾಗಿರುವ ಚಿಂತೆಯಲ್ಲಿ ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ ಸಮಾಜಕ್ಕೆ ಹೆದರಿಕೊಂಡು, ಮರ್ಯಾದೆಗೆ ಅಂಜಿ ಡೆತ್‌ನೋಟು ಬರೆದಿಟ್ಟು ಮನೆಯ ಮಲಗುವ ಕೋಣೆಯಲ್ಲಿ ಡಿ.12ರಂದು ರಾತ್ರಿ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ., ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಎಸ್.ಟಿ., ಕಾರ್ಕಳ ಡಿವೈಎಸ್ಪಿಅರವಿಂದ ಕಲಗುಜ್ಜಿ ಇವರ ಮಾರ್ಗದರ್ಶನದಲ್ಲಿ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಜಯಶ್ರೀ ಮಾನೆ ನೇತೃತ್ವದಲ್ಲಿ ಕಾಪು ಎಸ್ಸೈ ಅಬ್ದುಲ್ ಖಾದರ್ ಮತ್ತವರ ತಂಡ ಈ ಕಾರ್ಯ ಚರಣೆ ನಡೆಸಿದೆ.
ನಾಲ್ವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲು
ಅಪ್ರಾಪ್ತೆ ವಯಸ್ಸಿನ ಬಾಲಕಿಯನ್ನು ಅಪಹರಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿ ಗಿರೀಶ್ ವಿರುದ್ದ ಪೋಕ್ಸೊ, ಅತ್ಯಾಚಾರ ಹಾಗೂ ಅಪಹರಣ ಪ್ರಕರಣಗಳನ್ನು ಕಾಪು ಪೊಲೀಸರು ದಾಖಲಿಸಿದ್ದಾರೆ.
ಅದೇ ರೀತಿ ಗಿರೀಶ್‌ಗೆ ಸಹಕರಿಸಿದ ಆರೋಪದಲ್ಲಿ ಇತರ ಮೂವರ ವಿರುದ್ದ ಕೂಡ ಪೋಕ್ಸೊ ಪ್ರಕರಣವನ್ನು ದಾಖಲಿಸಲಾ ಗಿದೆ. ನಾಲ್ವರು ಆರೋಪಿಗಳನ್ನು ಉಡುಪಿಯ ವಿಶೇಷ ಪೋಕ್ಸೊ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾ ಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಗರ್ಭಿಣಿಯಾಗಿರುವ ಬಾಲಕಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ, ಬಳಿಕ ಸಮಾಲೋಚನೆ ನಡೆಸಿ ಪುನರ್‌ವಸತಿ ಕಲ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.