ಕುಂದಾಪುರ ರೈಲು ನಿಲ್ದಾಣದಲ್ಲಿ ಪ್ರಿಪೇಯ್ಡ್ ಆಟೋ ರಿಕ್ಷಾ ಸೇವೆಗೆ ಚಾಲನೆ

Update: 2023-10-09 15:26 GMT

ಕುಂದಾಪುರ, ಅ.9: ಮೂಡ್ಲಕಟ್ಟೆಯಲ್ಲಿರುವ ಕುಂದಾಪುರ ರೈಲು ನಿಲ್ದಾಣದಲ್ಲಿ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಪ್ರಿಪೇಯ್ಡ್ ಆಟೋ ರಿಕ್ಷಾ ಸೇವೆಗೆ ಸೋಮವಾರ ಚಾಲನೆ ನೀಡಲಾಯಿತು.

ಕೌಂಟರನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ವಿವಿಧೆಡೆ ನಗರ ವ್ಯಾಪ್ತಿಯ ನಿಲ್ದಾಣಗಳಲ್ಲಿ ಇರುವ ಪ್ರಿಪೇಯ್ಡ್ ಸೇವೆಯನ್ನು ಕುಂದಾಪುರದಲ್ಲಿ ಅಳವಡಿಸಿರುವ ಮೂಲಕ ಪಾರದರ್ಶಕ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಇತ್ತೀಚೆಗೆ ರಿಕ್ಷಾ ಚಾಲಕರಿಗೆ ನೂರಾರು ಸಮಸ್ಯೆಗಳಿವೆ. ಅದರ ನಡುವೆಯೂ ಪ್ರಿಪೇಯ್ಡ್ ಕೌಂಟರ್ ವ್ಯವಸ್ಥೆಗೆ ಮುಂದಾಗಿರುವುದು ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದರು.

ಕೊಂಕಣ್ ರೈಲ್ವೆಯ ಹಿರಿಯ ಅಧಿಕಾರಿ ಡಿ.ಡಿ.ಮೀನಾ ಮಾತನಾಡಿ, ದೂರದ ಊರುಗಳಿಂದ ಬರುವ ರೈಲು ಪ್ರಯಾಣಿಕರಿಗೆ ಇದೊಂದು ವ್ಯವಸ್ಥಿತ ಸಂಚಾರ ವ್ಯವಸ್ಥೆಯಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಕುಂದಾಪುರ ರೈಲು ಪ್ರಯಾಣಿಕರ ಸಮಿತಿಯ ಅಧ್ಯಕ್ಷ ಗಣೇಶ ಪುತ್ರನ್ ಮಾತನಾಡಿದರು. ಕೊಂಕಣ್ ರೈಲ್ವೆಯ ಅಧಿಕಾರಿ ಸತ್ಯನಾರಾಯಣ ಭಟ್, ಕೌಂಟರ್ನ ಉಸ್ತುವಾರಿ ವಹಿಸಿರುವ ಧರ್ಮಪ್ರಕಾಶ್, ರೈಲು ಹಿತರಕ್ಷಣಾ ಸಮಿತಿಯ ಗೌತಮ್ ಶೆಟ್ಟಿ, ಕೆಂಚನೂರು ಸೋಮಶೇಖರ್ ಶೆಟ್ಟಿ, ವಿವೇಕ್ ನಾಯಕ್, ಪ್ರವೀಣ್ ಕುಮಾರ್, ಉದಯ ಭಂಡಾರ್ಕಾರ್, ನಾಗರಾಜ ಆಚಾರ್ಯ, ಪದ್ಮನಾಭ ಶೆಣೈ, ಸಂತೋಷ್ ಮೂಡ್ಲಕಟ್ಟೆ, ಗ್ರಾ.ಪಂ. ಸದಸ್ಯ ಅಭಿಜಿತ್ ಕೊಠಾರಿ, ನಿವೃತ್ತ ಅಧಿಕಾರಿ ಚಿದಂಬರ ಉಡುಪ, ರಿಕ್ಷಾ ಚಾಲಕರು ಉಪಸ್ಥಿತರಿದ್ದರು.

ಆರ್.ಟಿ.ಒ ನಿಗದಿ ಪಡಿಸಿದ ಬಾಡಿಗೆ ದರ

ಮೂಡ್ಲಕಟ್ಟೆಯ ರೈಲು ನಿಲ್ದಾಣದಿಂದ ಕುಂದಾಪುರ ನಗರಕ್ಕೆ 5 ಕಿ.ಮೀ. ದೂರವಿದ್ದು, ಸೂಕ್ತ ಬಸ್ ವ್ಯವಸ್ಥೆಯಿಲ್ಲದೆ, ರಿಕ್ಷಾ ಅಥವಾ ಟ್ಯಾಕ್ಸಿ ಮೂಲಕ ದುಬಾರಿ ಬೆಲೆ ಕೊಟ್ಟು ತೆರಳಬೇಕಾಗಿತ್ತು. ಅದಕ್ಕಾಗಿ ಪ್ರಯಾಣಿಕರು ಹಾಗೂ ಕುಂದಾಪುರದ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಬೇಡಿಕೆಯಂತೆ ಕೊಂಕಣ್ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ ಮುಂದಾಳತ್ವ ದಲ್ಲಿ ಈ ಪ್ರಿಪೇಯ್ಡ್ ಆಟೋ ರಿಕ್ಷಾ ಕೌಂಟರನ್ನು ಆರಂಭಿಸಲಾಗಿದೆ.

ರೈಲು ನಿಲ್ದಾಣದ ಸಮೀಪ ಪ್ರಿಪೇಯ್ಡ್ ಕೌಂಟರ್ ತೆರೆಯಲಾಗಿದ್ದು, ಸದ್ಯ 45 ರಿಕ್ಷಾಗಳು ಇಲ್ಲಿವೆ. ಸಾರಿಗೆ ಪ್ರಾಧಿಕಾರ (ಆರ್.ಟಿ.ಒ) ನಿಗದಿ ಪಡಿಸಿದಂತೆ ಬಾಡಿಗೆಯನ್ನು ಮೊದಲೇ ಪಾವತಿಸಿ, ಟಿಕೆಟ್ ಪಡೆದುಕೊಳ್ಳಬೇಕು. ಒಂದು ರಿಕ್ಷಾದಲ್ಲಿ 3 ಪ್ರಯಾಣಿಕರು ಪ್ರಯಾಣಿಸಬಹುದು. 20ಕಿಲೋಗಿಂತ ಹೆಚ್ಚಿರುವ ಲಗೇಜ್‌ಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕು. ಪ್ರಿಪೇಯ್ಡ್ ಆಟೋ ಪ್ರಯಾಣ ಪ್ರಯಾಣಿಕರಿಗೆ ಹಣ ಉಳಿತಾಯದ ಜೊತೆ, ಭದ್ರತೆಯೂ ಇರಲಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News