ಲಿಕೋ ಬ್ಯಾಂಕಿನ ಎಟಿಎಂ, ಡಿಜಿಟಲ್ ಸೌಲಭ್ಯ ಲೋಕಾರ್ಪಣೆ
ಉಡುಪಿ, ಸೆ.9: ಉಡುಪಿಯ ಎಲ್‌ಐಸಿ ಎಂಪ್ಲಾಯೀಸ್ ಕೋ ಆಪರೇಟಿವ್ ಬ್ಯಾಂಕ್ ಲಿ.(ಲಿಕೋ ಬ್ಯಾಂಕ್) ತನ್ನ ಗ್ರಾಹಕ ರಿಗೆ ಅತ್ಯಾಧುನಿಕ ಬ್ಯಾಂಕಿಂಗ್ ಸೇವೆ ನೀಡುವ ನಿಟ್ಟಿನಲ್ಲಿ ಪ್ರಾರಂಭಿಸಿರುವ ನೂತನ ಎಟಿಎಂ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಶನಿವಾರ ಬ್ಯಾಂಕ್‌ನ ಆವರಣದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಬ್ಯಾಂಕ್‌ನ ಎಟಿಎಂನ್ನು ಉದ್ಘಾಟಿಸಿದ ಭಾರತೀಯ ಜೀವವಿಮಾ ನಿಗಮ ಉಡುಪಿ ವಿಭಾಗೀಯ ಕಚೇರಿಯ ಹಿರಿಯ ವಿಭಾಗಾಧಿಕಾರಿ ರಾಜೇಶ್ ವಿ. ಮುಧೋಳ್ ಅವರು ರುಪೇ ಕಾರ್ಡ್‌ನ್ನು ಬಿಡುಗಡೆಗೊಳಿಸಿದರು.
ಬಳಿಕ ಲಿಕೋ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ರಾಜೇಶ್ ವಿ. ಮುಧೋಳ್, ಜಿಲ್ಲೆಯಲ್ಲಿ 6 ದಶಕಗಳ ಇತಿಹಾಸವುಳ್ಳ ಲಿಕೋ ಬ್ಯಾಂಕ್ ದಕ್ಷ ಆಡಳಿತ, ವೃತ್ತಿಪರತೆ ಹೊಂದಿದ ಸಿಬ್ಬಂದಿಗಳು ಹಾಗೂ ಪ್ರಾಮಾಣಿಕ ಗ್ರಾಹಕರಿಂದಾಗಿ ಬಲಿಷ್ಠವಾಗಿ ಬೆಳೆದು ನಿಂತಿದೆ ಎಂದರು.
ಬ್ಯಾಂಕ್ ತನ್ನ ಗ್ರಾಹಕರಿಗೆ ಆಧುನಿಕ ಬ್ಯಾಂಕಿಂಗ್ ಸೇವೆ ನೀಡುವ ಉದ್ದೇಶ ದಿಂದ ಪ್ರಾರಂಭಿಸಿರುವ ಎಟಿಎಂ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತಾಗಬೇಕು ಎಂದು ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಎಲ್‌ಐಸಿ ಎಂಪ್ಲಾಯೀಸ್ ಕೋ-ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಕೆ. ಕೃಷ್ಣ ವಹಿಸಿದ್ದರು. ಲಿಕೋ ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಶಿಕಲಾ ಪ್ರಾಸ್ತಾವಿಕವಾಗಿ ಮಾತನಾಡಿ, ಬ್ಯಾಂಕ್, 160 ಕೋಟಿ ರೂ. ಠೇವಣಿ, 105 ಕೋಟಿ ರೂ. ಸಾಲ, 180 ಕೋಟಿ ರೂ. ದುಡಿಯುವ ಬಂಡವಾಳವನ್ನು ಹೊಂದಿದೆ. ಬ್ಯಾಂಕ್ ಸಾಲ ಮರುಪಾವತಿ ಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿದೆ ಎಂದರು.
ಭಾರತೀಯ ಜೀವವಿಮಾ ನಿಗಮ ಉಡುಪಿ ವಿಭಾಗೀಯ ಕಚೇರಿ ಮಾರ್ಕೆಟಿಂಗ್ ಮ್ಯಾನೇಜರ್ ಬಿಜು ಜೋಸೆಫ್ ಐಎಂಪಿಎಸ್/ಮೊಬೈಲ್ ಬ್ಯಾಂಕಿಂಗ್ ಸೇವೆಗೆ ಚಾಲನೆ ನೀಡಿದರು. ಸೇಲ್ಸ್ ಮ್ಯಾನೇಜರ್ ಪುರಂದರ ಯುಪಿಐಗೆ ಚಾಲನೆ ನೀಡಿದರು.
ಐಡಿಬಿಐ ಬ್ಯಾಂಕ್ ಜನರಲ್ ಮ್ಯಾನೇಜರ್ ಗಣೇಶ್ ತಿಂಗಳಾಯ ಉಪಸ್ಥಿತರಿದ್ದರು. ಲಿಕೋ ಬ್ಯಾಂಕ್‌ನ ನಿರ್ದೇಶಕ ಶಿವಪ್ರಸಾದ್ ಕೆ. ಸ್ವಾಗತಿಸಿ, ಉಪಾಧ್ಯಕ್ಷ ಎ. ದಯಾನಂದ ವಂದಿಸಿದರು. ಸಿಸ್ಟಂ ಮ್ಯಾನೇಜರ್ ಪೂನಾಂ ಕದಂ ಕಾರ‌್ಯಕ್ರಮ ನಿರೂಪಿಸಿದರು.