ಲೋಕಸಭಾ ಚುನಾವಣೆ: ಹಿರಿಯಡ್ಕದಲ್ಲಿ ಶೇ.22 ಮತದಾನ
ಉಡುಪಿ: ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಶಾಲೆಯ ನಾಲ್ಕು ಮತಗಟ್ಟೆಯಲ್ಲಿ ಬೆಳಗ್ಗೆ ಹತ್ತು ಗಂಟೆಯ ವೇಳೆಗೆ ಸರಾಸರಿ ಶೇ22ರಷ್ಟು ಮತದಾನವಾಗಿತ್ತು.
ಪತ್ರಕರ್ತರ ತಂಡ ಈ ಮತದಾನ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಾಲ್ಕೂ ಮತಗಟ್ಟೆಗಳ ಎದುರು ಉದ್ದದ ಸರತಿ ಸಾಲುಗಳು ಕಂಡು ಬಂದವು. ಮೊದಲ ಬಾರಿ ಮತ ಹಾಕುವ ಯುವ ಮತದಾರರೊಂದಿಗೆ, 85ವರ್ಷ ಪ್ರಾಯದ ಮೆಣಕು ಶೆಟ್ಟಿ ಸಹ ಮತ ಹಾಕಿದರು.
ವೀಲ್ ಚೇರ್ ನಲ್ಲಿ ಬಂದ ಕೊಂಡಾಡಿಯ 70ವರ್ಷ ಪ್ರಾಯದ ಸುಂದರ ನಾಯ್ಕ್ ರಿಗೆ ಸ್ಕೌಟ್ ವಿದ್ಯಾರ್ಥಿಗಳು ಮತ ಹಾಕಲು ನೆರವಾದರು. ಕಣ್ಣು ಕಾಣದಿದ್ದರೂ ಕೊಂಡಾಡಿ ಕೊಲ್ಯದ 85ವರ್ಷ ಪ್ರಾಯದ ಮೆಣಕು ಶೆಟ್ಟಿ ಮಗಳ ನೆರವಿನಿಂದ ಮತ ಹಾಕಿದರು.
ಈವರೆಗಿನ ಎಲ್ಲಾ ಚುನಾವಣೆಯಲ್ಲೂ ಮತ ಹಾಕಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡ ಅಜ್ಜಿಯೊಬ್ಬರು ಪ್ರಾಯಶಃ ಇದು ತನ್ನ ಕೊನೆಯ ಮತದಾನ ಇರಬಹುದು ಎಂದರು.
ಉಡುಪಿ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿಯಾಗಿರುವ ಡಾ.ಕೆ.ವಿದ್ಯಾಕುಮಾರಿ ಹಾಗೂ ಜಿ.ಪಂ ಸಿಇಒ ಪ್ರತೀಕ್ ಬಾಯಲ್ ಅವರು ಅಜ್ಜರಕಾಡು ಶಾಲೆಯಲ್ಲಿ ಮತದಾನ ಮಾಡಿದರು.