ಕರಾವಳಿಯಲ್ಲಿ ಮಹಿಷ ದಸರಾ ಆಚರಣೆಗೆ ಅವಕಾಶ ನೀಡುವುದಿಲ್ಲ: ಬಜರಂಗ ದಳದ ಸುನೀಲ್ ಕೆ.ಆರ್. ಘೋಷಣೆ

Update: 2023-10-07 15:17 GMT

ಸುನೀಲ್ ಕೆ.ಆರ್

ಉಡುಪಿ, ಅ.7: ಉಡುಪಿಯೂ ಸೇರಿದಂತೆ ಕರಾವಳಿಯ ಎಲ್ಲೇ ಆದರೂ ಮಹಿಷ ದಸರಾ ಹೆಸರಿನಲ್ಲಿ ಯಾವುದೇ ಆಚರಣೆ ನಡೆಸಲು ನಾವು ಬಿಡುವುದೇ ಇಲ್ಲ. ಅದನ್ನು ತಡೆದೇ ತಡೆಯುತ್ತೇವೆ ಎಂದು ಬಜರಂಗ ದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್.ಘೋಷಿಸಿದ್ದಾರೆ.

ಉಡುಪಿಯಲ್ಲಿ ಅ.10ರಂದು ನಡೆಯುವ ಹಿಂದೂ ಸಮಾಜೋತ್ಸವದ ಕುರಿತಂತೆ ಮಾಹಿತಿ ನೀಡಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರನ್ನು ಅ.15ರಂದು ನಡೆಯುವ ಮಹಿಷ ದಸರಾ ಆಚರಣೆ ಕುರಿತಂತೆ ಪ್ರಶ್ನಿಸಿದಾಗ ಅವರು ಈ ವಿಷಯ ತಿಳಿಸಿದರು.

ಭಾರತೀಯ ಸಂಸ್ಕೃತಿಯ ಕುರಿತಂತೆ ನಮಗೆ ಚೆನ್ನಾಗಿ ಅರಿವಿದೆ. ಹಿಂದೂ ಸಮಾಜದೊಳಗೆ ಭಾಷೆ, ವೇಷಭೂಷಣ ಹಾಗೂ ಇತರ ವಿಷಯಗಳಲ್ಲಿ ವೈವಿದ್ಯತೆ ಇದ್ದರೂ, ಹಿಂದೂ ಸಮಾಜದಲ್ಲಿ ಒಳ್ಳೆಯ ಬಾಂಧವ್ಯವಿದೆ. ಇಲ್ಲಿ ಆರಾಧನೆ ಯಲ್ಲೂ ವಿಭಿನ್ನತೆ ಇದೆ. ಆದರೆ ಈ ಹೆಸರಿನಲ್ಲಿ ಅಸುರನಾದ ಮಹಿಷನನ್ನು ಆರಾಧಿಸುವುದನ್ನು ನಾವು ಒಪ್ಪುವುದಿಲ್ಲ ಎಂದರು.

ಮಹಿಷ ದಸರಾವನ್ನು ಹಿಂದೂ ಸಮಾಜ ಒಟ್ಟಾಗಿ ವಿರೋಧಿಸಬೇಕು. ಇದನ್ನು ಸಂಘಟಿಸುವವರ ವಿರುದ್ಧ ಸರಕಾರ ಹಾಗೂ ಪೊಲೀಸರು ಮೊಕದ್ದಮೆ ಹೂಡಬೇಕು. ಇದೊಂದು ದೇಶದ್ರೋಹಿ, ಭಯೋತ್ಪಾದಕತೆ. ಇದು ಹಿಂದೂ ಸಮಾಜವನ್ನು ಒಡೆ ಯಲು ಬುದ್ಧಿಜೀವಿಗಳೆನಿಸಿಕೊಂಡವರು ಮಾಡುವ ಕೃತ್ಯ. ಇದನ್ನು ಯಾರೂ ಬೆಂಬಲಿಸಬಾರದು ಎಂದವರು ನುಡಿದರು.

ʼಸಂಘ ಪರಿವಾರದ ಬೆದರಿಕೆಗೆ ಬಗ್ಗುವುದಿಲ್ಲʼ

ಮಹಿಷ ದಸರಾ ಆಚರಣೆಗೆ ಉಡುಪಿ ಸೇರಿದಂತೆ ಕರಾವಳಿಯಲ್ಲಿ ಅವಕಾಶ ನೀಡುವುದಿಲ್ಲ ಎಂಬ ಬಜರಂಗ ದಳದ ನಾಯಕ ಸುನೀಲ್ ಕೆ.ಆರ್. ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಹಿಷ ದಸರಾವನ್ನು ಅ.15ರಂದು ಉಡುಪಿಯಲ್ಲಿ ಸಂಘಟಿಸಲಿರುವ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವ ಸೇನೆಯ ಪರವಾಗಿ ಪ್ರತಿಕ್ರಿಯಿಸಿರುವ ಹಿರಿಯ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ, ದಲಿತರು ಸಂಘ ಪರಿವಾರದ ಬೆದರಿಕೆಗೆ ಬಗ್ಗುವುದಿಲ್ಲ ಎಂದಿದ್ದಾರೆ.

ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳಿವೆ. ಅಂಬೇಡ್ಕರ್ ನೀಡಿದ ಸಂವಿಧಾನ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಎಲ್ಲಾ ಅನುಮತಿ ಪಡೆದು ನಡೆಯುವ ಕಾರ್ಯಕ್ರಮಕ್ಕೆ ರಕ್ಷಣೆ ನೀಡುವುದು ಸರಕಾರದ ಜವಾಬ್ದಾರಿ. ನಾವು ಅನುಮತಿಗಾಗಿ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಅವರಿಂದ ಕಾರ್ಯಕ್ರಮಕ್ಕೆ ಅನುಮತಿಯ ನಿರೀಕ್ಷೆಯಲ್ಲಿದ್ದೇವೆ. ಸಂಘಪರಿವಾರ, ಬಜರಂಗ ದಳದ ಬೆದರಿಕೆಗೆಲ್ಲ ಅಂಬೇಡ್ಕರ್ ಅನುಯಾಯಿಗಳಾದ ನಾವು ಬೆದರುವುದಿಲ್ಲ ಎಂದರು.

ಮಹಿಷ ಮಂಡಲವನ್ನಾಳಿದ ದ್ರಾವಿಡ ದೊರೆ ಮಹಿಷಾಸುರ ಮಹಾರಾಜರ ಕುರಿತು ಜನತೆಗೆ ಅರಿವಿನ ಜಾಗೃತಿ ಮೂಡಿ ಸುವ ಉದ್ದೇಶದಿಂದ ಅ.15ರಂದು ಉಡುಪಿಯಲ್ಲಿ ಮೊದಲ ಬಾರಿಗೆ ಮಹಿಷ ದಸರಾ ಹಾಗೂ ಮೂಲಕ ನಿವಾಸಿಗಳ ಸಾಂಸ್ಕೃತಿಕ ಹಬ್ಬವನ್ನು ಆಚರಿಸಲಾಗುವುದು ಎಂದು ಉಡುಪಿ ಜಿಲ್ಲಾ ಅಂಬೇಡ್ಕರ್ ಯುವ ಸೇನೆ ಈಗಾಗಲೇ ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News