ಮಂಗಳೂರು ವಿವಿ ಅಂತರ ಕಾಲೇಜು ಅತ್ಲೆಟಿಕ್ ಚಾಂಪಿಯನ್‌ಶಿಪ್: ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ

Update: 2024-11-30 16:08 GMT

ಉಡುಪಿ, ನ.30: ಇಂದು ನಗರದ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ಎರಡು ದಿನಗಳ ಮಂಗಳೂರು ವಿಶ್ವವಿದ್ಯಾನಿಲಯದ 2024-25ನೇ ಸಾಲಿನ ಅಂತರ ಕಾಲೇಜು ಅತ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ನಿರೀಕ್ಷೆಯಂತೆ ಮೂಡಬಿದರೆಯ ಆಳ್ವಾಸ್ ಕಾಲೇಜು ಪುರುಷರ ಹಾಗೂ ಮಹಿಳೆಯರ ತಂಡ ಪ್ರಶಸ್ತಿಗಳೊಂದಿಗೆ ಸಮಗ್ರ ಪ್ರಶಸ್ತಿಯನ್ನೂ ತನ್ನ ಮಡಿಲಿಗೇರಿಸಿಕೊಂಡಿತು.

ಮೊದಲ ದಿನ ನಾಲ್ಕು ಹೊಸ ಕೂಟ ದಾಖಲೆಗಳು ಬರೆಯಲ್ಪಟ್ಟರೆ ಎರಡನೇ ದಿನವಾದ ಇಂದು ಮತ್ತೆ 7 ಹೊಸ ಕೂಟ ದಾಖಲೆಗಳು ಅಳಿಸಿಹೋದವು. ಈ ಮೂಲಕ ಎರಡು ದಿನಗಳಲ್ಲಿ ಒಟ್ಟು 11 ಹೊಸ ಕೂಟ ದಾಖಲೆಗಳು ಬರೆಯಲ್ಪಟ್ಟಿವೆ. ಎಲ್ಲಾ ದಾಖಲೆಗಳನ್ನು ಆಳ್ವಾಸ್‌ನ ಅತ್ಲೀಟ್‌ಗಳೇ ಬರೆದಿರುವುದು ವಿಶೇಷವಾಗಿದೆ.

ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜು 292 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಸೈಂಟ್ ಫಿಲೋಮಿನಾ ಕಾಲೇಜು ಅಸೋಸಿಯೇಷನ್ ಟ್ರೋಫಿ ಗೆದ್ದುಕೊಂಡಿತು. ಎಸ್‌ಡಿಎಂ ಉಜಿರೆ 64 ಅಂಕಗಳೊಂದಿಗೆ ಎರಡನೇ, ಆತಿಥೇಯ ತೆಂಕನಿ ಡಿಯೂರು ಜಿಎಫ್‌ಜಿಸಿ 35 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆಯಿತು. ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜು ತಂಡ ನಾಲ್ಕನೇ ಸ್ಥಾನಿಯಾಯಿತು.

ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಕಾಲೇಜು 277 ಅಂಕಗಳೊಂದಿಗೆ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ ಟ್ರೋಫಿಯನ್ನು ಮತ್ತೆ ಕೈಗೆತ್ತಿಕೊಂಡಿತು. ಉಡುಪಿ ಅಜ್ಜರಕಾಡಿನ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು ತಂಡ 48 ಅಂಕಗಳೊಂದಿಗೆ ರನ್ನರ್‌ ಅಪ್, ಎಸ್‌ಡಿಎಂ ಉಜಿರೆ 45 ಅಂಕಗಳೊಂದಿಗೆ ಮೂರನೇ ಸ್ಥಾನಿಯಾಯಿತು. ತೆಂಕನಿಡಿಯೂರಿ ಜಿಎಫ್‌ಜಿಸಿ 27, ಉಡುಪಿಯ ಎಂಜಿಎಂ ಕಾಲೇಜು 16 ಹಾಗೂ ವಾಮಪದವಿನ ಸರಕಾರಿ ಕಾಲೇಜು10 ಅಂಕಗಳೊಂದಿಗೆ 4ರಿಂದ 7ರೊಳಗಿನ ಸ್ಥಾನ ಪಡೆಯಿತು.

ಒಟ್ಟಾರೆಯಾಗಿ ಆಳ್ವಾಸ್ ಕಾಲೇಜು 569 ಅಂಕಗಳೊಂದಿಗೆ ಕೂಟದ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಎಸ್‌ಡಿಎಂ ಉಜಿರೆ 109 ಅಂಕಗಳೊಂದಿಗೆ ರನ್ನರ್ ಅಪ್ ಹಾಗೂ ತೆಂಕನಿಡಿಯೂರಿನ ಸರಕಾರಿ ಕಾಲೇಜು 62 ಅಂಕಗಳೊಂದಿಗೆ ಮೂರನೇ ಸ್ಥಾನಿಯಾಯಿತು.

7 ಕೂಟ ದಾಖಲೆ: ಇಂದು ಪುರುಷರ ವಿಭಾಗದಲ್ಲಿ ಮೂರು ಹಾಗೂ ಮಹಿಳೆಯರ ವಿಭಾಗದ 4 ಹೊಸ ಕೂಟ ದಾಖಲೆಗಳು ಬರೆಯಲ್ಪಟ್ಟವು. ಪುರುಷರ ವಿಭಾಗದಲ್ಲಿ ಚಂದನ ಯಾದವ್ ಎಚ್.ಎಂ. 10,000ಮೀ. ಓಟದಲ್ಲಿ 29ನಿ.50.1ಸೆ.ಗಳಲ್ಲಿ ದೂರ ಕ್ರಮಿಸಿ, 29:54.08ಸೆ.ಗಳ ಹಳೆ ದಾಖಲೆ ಮುರಿದರು. ಪುರುಷರ 100ಮೀ. ರಿಲೇ ಸ್ಪರ್ಧೆಯಲ್ಲಿ ಆಳ್ವಾಸ್ ತಂಡ 41.4ಸೆ.ಗಳಲ್ಲಿ ದೂರ ಕ್ರಮಿಸುವ ಮೂಲಕ 41.8ಸೆ.ಗಳ ಹಳೆ ದಾಖಲೆಯನ್ನು ಅಳಿಸಿ ಹಾಕಿತು. ಪೋಲ್‌ವಾಲ್ಡ್ ಸ್ಪರ್ಧೆ ಯಲ್ಲಿ ಅದೇ ಕಾಲೇಜಿನ ಅಮನ್ ಸಿಂಗ್ ಅವರು 4.65ಮೀ. ಎತ್ತರ ನೆಗೆಯುವ ಮೂಲಕ 4.55ಮೀ.ಗಳ ಹಳೆ ದಾಖಲೆ ಯನ್ನು ಉತ್ತಮ ಪಡಿಸಿದರು.

ಇಂದು ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ನ ಪ್ರಜ್ಞಾ ಅವರು 400ಮೀ. ಹರ್ಡಲ್ಸ್ ಓಟದಲ್ಲಿ 1ನಿ 00.5ಸೆ.ಗಳ ಹೊಸ ಕೂಟ ದಾಖಲೆ ಬರೆದು 1ನಿ 02.3ಸೆ.ಗಳ ಹಳೆಯ ದಾಖಲೆ ಮುರಿದರು. ಆಳ್ವಾಸ್‌ನ 400ಮೀ. ರಿಲೇ ತಂಡ 3ನಿ 47.1ಸೆ.ಗಳಲ್ಲಿ ದೂರವನ್ನು ಕ್ರಮಿಸುವ ಮೂಲಕ 3ನಿ 52.50 ಸೆ.ಗಳ ಹಳೆ ದಾಖಲೆ ಮುರಿಯಿತು.

ಕಮಲ್ಜಿತ್ ಕೌರ್ ಅವರು ಮಹಿಳೆಯರ ಪೆಪ್ಟಾತ್ಲಾನ್‌ನಲ್ಲಿ ಒಟ್ಟು 5013 ಅಂಕಗಳನ್ನು ಸಂಗ್ರಹಿಸುವ ಮೂಲಕ 4596 ಅಂಕಗಳ ಹಳೆ ದಾಖಲೆ ಮುರಿದರೆ, ಹ್ಯಾಮರ್ ತ್ರೋನಲ್ಲಿ ಶೃತಿ ಸಿಂಗ್ ಅವರು 57.20ಮೀ. ದೂರ ಎಸೆದು ಈವರೆಗೆ ಇದ್ದ 56.20ಮೀ.ಗಳ ದಾಖಲೆಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡರು.

ಇಂದು ನಡೆದ ಸ್ಪರ್ಧೆಗಳಲ್ಲಿ ಪುರುಷರ 200ಮೀ. ಓಟದ ಚಿನ್ನದ ಪದಕ ಆಳ್ವಾಸ್‌ನ ಮಹಾಂತೇಶ್ ಅವರ ಪಾಲಾಯಿತು. ಅವರು ದೂರವನ್ನು 21.55ಸೆ.ಗಳಲ್ಲಿ ಕ್ರಮಿಸಿದರು. ಇದೇ ಸ್ಪರ್ಧೆಯ ಮಹಿಳೆಯರ ವಿಭಾಗದ ಚಿನ್ನದ ಪದಕವನ್ನು ಆಳ್ವಾಸ್‌ನ ಶೃದ್ಧಾ ಕೊರಳೊಡ್ಡಿದರು. ಅವರು ದೂರವನ್ನು 24.9ಸೆ.ಗಳಲ್ಲಿ ಮೊದಲಿಗರಾಗಿ ಗುರಿಮುಟ್ಟಿದ್ದರು.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News