ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್ ಪ್ರಕರಣ| ಪೀತ್‌ಬೈಲಿನ 3 ಕುಟುಂಬಗಳು ಮನೆಗೆ ವಾಪಸ್ಸಾಗಲು ನಿರ್ಧಾರ

Update: 2024-12-02 17:34 GMT

ಹೆಬ್ರಿ, ಡಿ.2: ನಕ್ಸಲ್ ನಾಯಕ ವಿಕ್ರಮ ಗೌಡ ಎನ್‌ಕೌಂಟರ್ ಸಂಭವಿಸಿ ಎರಡು ವಾರಗಳ ಬಳಿಕ ಘಟನೆ ನಡೆದ ಕಬ್ಬಿನಾಲೆಯ ಪೀತ್‌ಬೈಲಿನಲ್ಲಿನ ಮೂರು ಕುಟುಂಬಗಳು ತಮ್ಮ ಮನೆಗೆ ವಾಪಸ್ಸು ಹೋಗಲು ನಿರ್ಧರಿಸಿವೆ.

ನ.18ರಂದು ಪೀತ್‌ಬೈಲಿನ ಜಯಂತ್ ಗೌಡ ಅವರ ಮನೆಯಲ್ಲಿ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ನಕ್ಸಲ್ ನಾಯಕ ವಿಕ್ರಮ್ ಗೌಡ ಹತರಾಗಿದ್ದರು. ಈ ಕಾರ್ಯಾಚರಣೆಗೆ ಮೊದಲೇ ಎಎನ್‌ಎಫ್ ನವರು ಇಲ್ಲಿನ ಜಯಂತ್ ಗೌಡ, ಅವರ ಸಹೋದರರಾದ ನಾರಾಯಣ ಗೌಡ ಹಾಗೂ ಸುಧಾಕರ್ ಗೌಡ ಅವರನ್ನು ಮನೆಯಿಂದ ಸ್ಥಳಾಂತರಿಸಲಾಗಿತ್ತು.

ಅದರಂತೆ ಜಯಂತ್ ಗೌಡ ಕುಟುಂಬ ಕಬ್ಬಿನಾಲೆಯಲ್ಲಿರುವ ತನ್ನ ಮಗಳ ಮನೆಯಲ್ಲಿ ಹಾಗೂ ಉಳಿದ ಇಬ್ಬರ ಕುಟುಂಬಗಳು ತಮ್ಮ ಸಹೋದರರ ಮನೆಗಳಲ್ಲಿ ಉಳಿದುಕೊಂಡಿತ್ತು. ಆ ಬಳಿಕ ಪೀತ್‌ಬೈಲಿನ ಮೂರು ಮನೆಗಳು ಕೂಡ ಎಎನ್‌ಎಫ್‌ನವರ ವಶದಲ್ಲಿ ಇತ್ತು. ಎಎನ್‌ಎಫ್ ಸಿಬ್ಬಂದಿ ನಾರಾಯಣ ಗೌಡ ಹಾಗೂ ಸುಧಾಕರ ಗೌಡರ ಮನೆಯಲ್ಲಿ ಉಳಿದುಕೊಳ್ಳು ತ್ತಿದ್ದರು. ಇದೀಗ ಎಎನ್‌ಎಫ್‌ನವರು ಈ ಮೂರು ಕುಟುಂಬದವರನ್ನು ತಮ್ಮ ಮನೆಗಳಿಗೆ ವಾಪಾಸ್ಸು ಬರುವಂತೆ ತಿಳಿಸಿದೆ ಎನ್ನಲಾಗಿದೆ.

ಈ ಬಗ್ಗೆ ಎನ್‌ಕೌಂಟರ್ ನಡೆದ ಮನೆಯ ಯಜಮಾನ ಜಯಂತ್ ಗೌಡ ವಾರ್ತಾಭಾರತಿ ಜೊತೆ ಮಾತನಾಡಿ, ಎಎನ್‌ಎಫ್‌ನವರು ನಮ್ಮ ಮನೆಗಳನ್ನು ಎರಡು ದಿನಗಳ ಹಿಂದೆಯೇ ಬಿಟ್ಟುಕೊಟ್ಟಿದ್ದಾರೆ. ನಾವು ಮನೆಯಲ್ಲಿ ಪೂಜೆ ಮಾಡಿದ ಬಳಿಕವೇ ಹೋಗಿ ನೆಲೆಸುವುದಾಗಿ ತೀರ್ಮಾನಿಸಿದ್ದೇವೆ. ಡಿ.5ರಂದು ಪೂಜೆಯನ್ನು ಇಟ್ಟುಕೊಂಡಿದ್ದೇವೆ. ಸದ್ಯ ನಾವು ಈಗ ನಮ್ಮ ಮನೆಗಳಿಗೆ ಹೋಗಿ ಬರುತ್ತಿದ್ದೇವೆ. ಅಲ್ಲಿ ಉಳಿದುಕೊಳ್ಳುತ್ತಿಲ್ಲ. ಡಿ.5ರ ನಂತರ ಅಲ್ಲೇ ಇರುತ್ತೇವೆ ಎಂದು ತಿಳಿಸಿದರು.

‘ನಮ್ಮ ಸಿಬ್ಬಂದಿಗಳು ಪೀತ್‌ಬೈಲಿನಲ್ಲಿಯೇ ಇದ್ದಾರೆ. ಅಲ್ಲಿ ಕೂಂಬಿಂಗ್ ಕಾರ್ಯಚರಣೆ ಕೂಡ ನಿರಂತರವಾಗಿ ನಡೆಯು ತ್ತಿದೆ. ಅದೇ ರೀತಿ ತನಿಖೆ ಪ್ರಕ್ರಿಯೆಗಳು ಕೂಡ ನಡೆಯುತ್ತಿವೆ’ ಎಂದು ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕ ಜೀತೇಂದ್ರ ದಯಾಮ ತಿಳಿಸಿದ್ದಾರೆ.

ಎಎನ್‌ಎಫ್‌ನವರಿಂದ ಆದಿವಾಸಿಗಳ ಮನೆ ತೆರವಿಗೆ ಆಗ್ರಹ

ನಕ್ಸಲ್ ನಾಯಕ ವಿಕ್ರಮ್ ಗೌಡ ನಕ್ಸಲ್ ನಿಗ್ರಹ ದಳದ ಎನ್ ಕೌಂಟರ್‌ನಲ್ಲಿ ಹತ್ಯೆ ಮಾಡಿದ ಘಟನೆಯ ಎರಡು ದಿನಗಳ ಮೊದಲು ಆ ಪ್ರದೇಶದ ಆದಿವಾಸಿ ಮಲೆಕುಡಿಯ ಸಮುದಾಯದ ಮನೆಗಳ ನಿವಾಸಿಗಳನ್ನು ತೆರವು ಮಾಡಿದ್ದರೂ ಇಂದಿಗೂ ಅದನ್ನು ಆದಿವಾಸಿಗಳಿಗೆ ಬಿಟ್ಟು ಕೊಡದೆ ಅಸಂವಿಧಾನಿಕವಾಗಿ ನಡೆದುಕೊಳ್ಳುತ್ತಿರುವ ರಾಜ್ಯ ಸರಕಾರದ ನಡೆ ಅತ್ಯಂತ ಖಂಡನೀಯ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ, ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಟೀಕಿಸಿದ್ದಾರೆ.

ಸಾಕಷ್ಟು ಸಂಶಯಕ್ಕೆ ಎಡೆಮಾಡಿ ಕೊಟ್ಟ ಎನ್‌ಕೌಂಟರ್ ಹೆಸರಿನಲ್ಲಿ ನಡೆದ ಮಾನವ ಹತ್ಯೆಯ ಬಗ್ಗೆ ಇಂದಿಗೂ ರಾಜ್ಯ ಸರಕಾರ ನ್ಯಾಯಾಂಗ ತನಿಖೆಗೆ ಆದೇಶ ಮಾಡದೆ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ. ಎನ್‌ಕೌಂಟರ್ ನಡೆದು 15 ದಿನಗಳಾದರೂ ಇಂದಿಗೂ ತಮ್ಮ ಮನೆಗಳಿಗೆ ಆದಿವಾಸಿಗಳ ಪ್ರವೇಶವನ್ನು ನಿರ್ಬಂಧಿಸಿರುವ ರಾಜ್ಯ ಸರಕಾರ ನಡೆ ಅತ್ಯಂತ ಅಮಾನವೀಯತೆಯ ಸಂಕೇತವಾಗಿದೆ. ರಾಜ್ಯದಲ್ಲಿ ಈ ಹಿಂದೆ ನಡೆದ ಯಾವುದೇ ಎನ್‌ಕೌಂಟರ್ ನಡೆಸುವ ಮೊದಲು ಯಾವುದೇ ಮನೆಯನ್ನು ತೆರವು ಮಾಡಿದ ಇತಿಹಾಸವಿಲ್ಲ. ಆದರೆ ವಿಕ್ರಮ್ ಗೌಡ ಎನ್‌ಕೌಂಟರ್‌ನಲ್ಲಿ ಮಾತ್ರ ಎನ್‌ಕೌಂಟರ್ ಮೊದಲು ಸ್ಥಳೀಯ ಮನೆಯವರನ್ನು ತೆರವು ಮಾಡಿದ ಎರಡು ದಿನಗಳ ನಂತರ ಎನ್ ಕೌಂಟರ್ ನಡೆಸಿದ ಘಟನೆ ಸಂಶಯಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ತಕ್ಷಣ ಮಧ್ಯ ಪ್ರವೇಶ ಮಾಡಿ ಆದಿವಾಸಿ ಮಲೆಕುಡಿಯ ಸಮುದಾಯದ ಮನೆಗಳಲ್ಲಿ ಅನಧಿಕೃತವಾಗಿ, ಕಾನೂನು ಬಾಹಿರವಾಗಿ ನೆಲೆಸಿರುವ ಎಎನ್‌ಎಫ್ ಸಿಬ್ಬಂದಿಗಳನ್ನು ತೆರವುಗೊಳಿಸಿ ಆದಿವಾಸಿಗಳನ್ನು ಸ್ವತಂತ್ರವಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಮತ್ತು ನಾಗರಿಕ ಸಮಾಜದಲ್ಲಿ ಸಂಶಯಕ್ಕೆ ಎಡೆಮಾಡಿಕೊಟ್ಟಿರುವ ವಿಕ್ರಮ್ ಗೌಡ ಎನ್‌ಕೌಂಟರ್ ಬಗ್ಗೆ ತಕ್ಷಣ ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ಎನ್ ಕೌಂಟರ್ ನಡೆಸಿದ ಎಎನ್‌ಎಫ್ ಸಿಬ್ಬಂದಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News