ರಾಜ್ಯ ಕರಾವಳಿಯಲ್ಲಿ ಕಾರ್ಗೊ ಶಿಪ್‌ಗೆ ಬೆಂಕಿ; ಸುರತ್ಕಲ್ ಬಳಿ ಲಂಗರು

Update: 2024-07-25 17:49 GMT

ಉಡುಪಿ: ಅತ್ಯಂತ ದಹನಕಾರಿ ತೈಲ ಹಾಗೂ ಘನ ವಸ್ತುವನ್ನು ಗುಜರಾತ್‌ನ ಮುಂದ್ರಾ ಬಂದರಿನಿಂದ ಶ್ರೀಲಂಕಾದ ಕೊಲಂಬೊಗೆ ಒಯ್ಯುತ್ತಿದ್ದ ಬೃಹತ್ ಸರಕು ಹಡಗಿನಲ್ಲಿ (ಕಾರ್ಗೋ ಕಂಟೈನರ್) ಗೋವಾ -ಕಾರವಾರ ನಡುವೆ ಅರಬಿ ಸಮುದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸತತ ಪ್ರಯತ್ನದಿಂದ ಇದೀಗ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದರೂ, ಅಪಾಯಕಾರಿ ಸ್ಥಿತಿಯಲ್ಲಿ ಈ ಹಡಗು ಸುರತ್ಕಲ್‌ನಿಂದ 33 ನಾಟಿಕಲ್ ಮೈಲು ದೂರದಲ್ಲಿ ಲಂಗರು ಹಾಕಿದೆ ಎಂದು ತಿಳಿದುಬಂದಿದೆ.

ಸದ್ಯಕ್ಕೆ ಈ ಹಡಗು ಮಂಗಳೂರಿನ ಎನ್‌ಎಂಪಿಟಿಗೆ ಸಮೀಪದಲ್ಲಿರುವಂತೆ ಸುರತ್ಕಲ್ ಬಳಿ ನಡು ಸಮುದ್ರದಲ್ಲಿ ನಿಂತಿದೆ. ಸದ್ಯಕ್ಕೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದ್ದರೂ, ಮತ್ತೊಮ್ಮೆ ಬೆಂಕಿ ಕಾಣಿಸಿಕೊಳ್ಳುವ, ಇದರಿಂದ ಹಡಗು ಸಂಪೂರ್ಣ ಹಾನಿಗೊಂಡು ಮುಳುಗುವ ಹಾಗೂ ಅದರಲ್ಲಿರುವ ತೈಲ ಸೋರಿಕೆಯಾಗಿ ಸಮುದ್ರ ಸೇರುವ ಅಪಾಯ ಇರುವುದರಿಂದ ಸಮುದ್ರ ಮಾಲಿನ್ಯವು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸಮುದ್ರ ತೀರದಲ್ಲಿ ವ್ಯಾಪಿಸುವ ಅಪಾಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ತಮಗೆ ಸೂಚನೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹಾಗೂ ಮಲ್ಪೆ ಕರಾವಳಿ ಕಾವಲು ಪಡೆಯ ಎಸ್ಪಿ ಮಿಥುನ್ ಎಚ್.ಎನ್ ತಿಳಿಸಿದ್ದಾರೆ.

ಪನಾಮಾ ದೇಶದ ಫ್ಲಾಗ್‌ನ್ನು ಹೊಂದಿರುವ ಎಂವಿ ಎಂ.ಫ್ರಾಂಕ್‌ಫರ್ಟ್ ಕಾರ್ಗೋ ಕಂಟೈನರ್ ಹಡಗು ತೈಲ ಹಾಗೂ ದಹನಕಾರಿ ವಸ್ತುಗಳನ್ನು ಹೇರಿಕೊಂಡು ಮುಂದ್ರಾ ಬಂದರಿನಿಂದ ಹೊರಟಿದ್ದು, ಗೋವಾದಿಂದ ಕಾರವಾರದತ್ತ ಬರುತ್ತಿದ್ದಾಗ ಜು.19ರಂದು ಅದರಲ್ಲಿ ಬೆಂಕಿ ಕಾಣಿಸಿ ಕೊಂಡಿತ್ತು.

ಒಬ್ಬ ಸಿಬ್ಬಂದಿ ಕಣ್ಮರೆ: ಮಾಹಿತಿ ಸಿಕ್ಕಿದ ತಕ್ಷಣವೇ ಇಂಡಿಯನ್ ಕೋಸ್ಟ್ ಗಾರ್ಡ್ (ಐಸಿಜಿ) ಹಡಗಿನ ಬೆಂಕಿಯನ್ನು ನಂದಿಸಲು ರಕ್ಷಣಾ ಹಡಗು ಹಾಗೂ ಹೆಲಿಕಾಪ್ಟರ್‌ಗಳನ್ನು ಬಳಸಿದ್ದು, ಅವು ಸತತ 40 ಗಂಟೆಗಳ ಕಾಲ ಹೋರಾಡಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದವು. ಈ ಹಡಗಿನಲ್ಲಿ ಒಟ್ಟು 21 ಮಂದಿ ಸಿಬ್ಬಂದಿಗಳಿದ್ದು, ಇವರಲ್ಲಿ ಒಬ್ಬ ದುರಂತದಲ್ಲಿ ಸಾವನ್ನಪ್ಪಿರುವ ಅಥವಾ ಕಣ್ಮರೆಯಾಗಿರುವ ಮಾಹಿತಿ ಇದೆ ಎಂದು ಮಿಥುನ್ ತಿಳಿಸಿದ್ದಾರೆ.

ಈ ಹಂತದಲ್ಲಿ ಹಡಗು ಜಿಲ್ಲೆಯನ್ನು ದಾಟಿ ಹೋಗಿದ್ದು, ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧರಾಗಿರುವಂತೆ ಜಿಲ್ಲಾಡಳಿತಕ್ಕೆ ಸೂಚನೆಗಳನ್ನು ನೀಡಲಾಗಿತ್ತು. ಸಮುದ್ರ ತೀರದಲ್ಲಿ ವಾಸವಾಗಿರುವ ಜನತೆಗೆ ಮಾಹಿತಿಗಳನ್ನು ನೀಡಲು ಹಾಗೂ ಸಮುದ್ರ ತೀರದ ಮಾಲಿನ್ಯವನ್ನು ಸ್ವಚ್ಛಗೊಳಿಸಲು ಸಂಪನ್ಮೂಲಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲು ಸೂಚಿಸ ಲಾಗಿತ್ತು ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದರು. ಇದೇ ರೀತಿಯ ಸೂಚನೆಗಳನ್ನು ಐಇಜಿ ಕಾರವಾರ ಹಾಗೂ ದಕ್ಷಿಣ ಕನ್ನಡದ ಜಿಲ್ಲಾಡಳಿತಕ್ಕೂ ನೀಡಿತ್ತು ಎಂದು ತಿಳಿದುಬಂದಿದೆ.

ಪ್ರಸ್ತುತ ಹಡಗು ಸದ್ಯ ಮಂಗಳೂರಿಗೆ ಹತ್ತಿರದಲ್ಲಿದ್ದು, ಅದರಲ್ಲಿ ಅಂತಾರಾಷ್ಟ್ರೀಯ ಕಡಲ ಅಪಾಯಕಾರಿ ಸರಕು (ಐಎಂಡಿಜಿ) ಕೆಟಗರಿ-4ರ ದಹನಕಾರಿ ಘನ ಹಾಗೂ ದ್ರವಗಳಿರುವುದರಿಂದ ಕಾರ್ಗೋ ಹಡಗು ಬೆಂಕಿಯಿಂದ ಸಂಪೂರ್ಣ ಸುಟ್ಟು ಹೋದರೆ ಅಥವಾ ಸಮುದ್ರದಲ್ಲಿ ಮುಳುಗಿ ಅದರಲ್ಲಿರುವ ಸರಕುಗಳು ಸೋರಿಕೆಯಾಗಿ ಸಮುದ್ರ ಮಾಲಿನ್ಯ ಹಾಗೂ ಇವು ಸಮುದ್ರ ತೀರ ಪ್ರದೇಶದಲ್ಲಿರುವ ಮರಳಿನಲ್ಲಿ ಶೇಖರಗೊಳ್ಳಬಹದು ಎಂದು ಐಸಿಜಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಈ ವಸ್ತುಗಳನ್ನು ಮಾನವ ಶ್ರಮದ ಮೂಲಕ ಶೇಖರಿಸಲು ಸಾಧ್ಯವಿದೆ. ಇದಕ್ಕಾಗಿ ಸಾಕಷ್ಟು ಮಾನವ ಸಂಪನ್ಮೂಲಗಳೊಂದಿಗೆ ಸಿದ್ಧರಾಗಿರುವಂತೆ ಹಾಗೂ ತುರ್ತು ಸಂದರ್ಭದಲ್ಲಿ ಬೇಕಾದ ಎಲ್ಲಾ ಸಲಕರಣೆಗಳನ್ನು ಸಹ ಹೊಂದಿರುವಂತೆ ಅಧಿಕಾರಿಗಳು ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದರು ಎಂದು ತಿಳಿದುಬಂದಿದೆ.

ತನಿಖೆ, ಪರಿಶೀಲನೆಗೆ ತಂಡ: ಇದೀಗ ಸುರತ್ಕಲ್‌ನಿಂದ 33 ನಾಟಿಕಲ್ ಮೈಲು ದೂರದಲ್ಲಿ ಲಂಗರು ಹಾಕಿರುವ ಹಡಗು ಯಾವ ಸ್ಥಿತಿಯಲ್ಲಿದೆ. ಬೆಂಕಿ ಹತ್ತಿಕೊಳ್ಳಲು ಕಾರಣ, ಇದನ್ನು ಮುಂದೆ ಕೊಂಡೊಯ್ಯಲು ಸಾಧ್ಯವೇ, ಮತ್ತೆ ಇಂಜಿನ್ ಸ್ಟಾರ್ಟ್ ಮಾಡಿದರೆ ಅಪಾಯವಿದೆಯೇ ಎಂಬ ಬಗ್ಗೆ ಸಮಗ್ರವಾದ ಅಧ್ಯಯನ ನಡೆಸಿ ವರದಿ ನೀಡಲು ತಜ್ಞರ ತಂಡ ವೊಂದು ಇಂದು ಅಥವಾ ನಾಳೆ ಅಲ್ಲಿಗೆ ಭೇಟಿ ನೀಡಲಿದೆ ಎಂದು ಮಿಥುನ್ ತಿಳಿಸಿದರು.

ತಜ್ಞರ ತಂಡದ ವರದಿಯನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ತಂಡದಿಂದ ಹಸಿರುನಿಶಾನೆ ದೊರೆತರೆ ಮಾತ್ರ ಅದನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯ. ಅಲ್ಲದೇ ಹಡಗನ್ನು ಎಳೆದೊಯ್ಯಲು ಶಾರ್ಜಾದಿಂದ ಟಗ್ ಒಂದು ಹೊರಟಿದೆ. ಸದ್ಯ ಹಡಗಿನಲ್ಲಿ ಬೆಂಕಿಯ ಅಪಾಯವಿಲ್ಲ. ಅದೇ ರೀತಿ ಯಾವುದೇ ರೀತಿಯಲ್ಲೂ ತೈಲ ಸೋರಿಕೆಯಾಗುತ್ತಿಲ್ಲ ಎಂದು ಮಿಥುನ್ ಸ್ಪಷ್ಟ ಪಡಿಸಿದರು.

ಆದರೆ ಒಮ್ಮೆ ಇಂಜಿನ್‌ನ್ನು ಆನ್ ಮಾಡಿದರೆ ಮತ್ತೆ ಬೆಂಕಿ ಕಾಣಿಸಿಕೊಳ್ಳುವ, ತೈಲ ಸೋರಿಕೆಯ, ಹಡಗು ಮುಳುಗುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಆದರೆ ಸದ್ಯ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಹಡಗಿನ ಮೇಲೆ ನಿಗಾ ಇರಿಸಿದ್ದಾರೆ ಎಂದವರು ಹೇಳಿದರು.

‘ಗುಜರಾತ್‌ನಿಂದ ಸರಕು ತುಂಬಿ ಹೊರಟ ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿಯ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ಬಂದಿದ್ದು, ಕೆಲವು ಸೂಚನೆಗಳನ್ನು ನೀಡಲಾಗಿತ್ತು. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಕರಾವಳಿ ಕಾವಲು ಪಡೆ, ಮೀನುಗಾರಿಕಾ ಇಲಾಖೆ ಹಾಗೂ ಪರಿಸರ ಇಲಾಖೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದ್ದೇವೆ.’

-ಡಾ.ಕೆ.ವಿದ್ಯಾಕುಮಾರಿ, ಉಡುಪಿ ಜಿಲ್ಲಾಧಿಕಾರಿ.

‘ಸದ್ಯಕ್ಕೆ ಹಡಗಿನಲ್ಲಿದ್ದ ಬೆಂಕಿಯನ್ನು ಸಂಪೂರ್ಣ ನಂದಿಸಲಾಗಿದೆ. ಅದೇ ರೀತಿ ಹಡಗಿನಿಂದ ತೈಲವೂ ಸೇರಿದಂತೆ ಯಾವುದೇ ಸೋರಿಕೆಯಾಗುತ್ತಿಲ್ಲ. ತಜ್ಞರ ತಂಡದ ವರದಿಯ ಆಧಾರದಲ್ಲಿ ಮುಂದಿನ ಕ್ರಮದ ಕುರಿತು ಸಂಬಂಧಿತರು ನಿರ್ಧರಿಸಲಿದ್ದಾರೆ. ನಾವು ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿದ್ದೇವೆ.’

ಮಿಥುನ್ ಎಚ್.ಎನ್., ಮಲ್ಪೆ ಕರಾವಳಿ ಕಾವಲು ಪಡೆ ಎಸ್ಪಿ.



Writer - ವಾರ್ತಾಭಾರತಿ

contributor

Editor - Riyaz

contributor

Byline - ಬಿ.ಬಿ.ಶೆಟ್ಟಿಗಾರ್

contributor

Similar News