ಉಡುಪಿ| ಮೆಹಂದಿ ಸೇರಿ ಎಲ್ಲಾ ಸಮಾರಂಭಗಳಲ್ಲೂ ಮದ್ಯ ಸರಬರಾಜಿಗೆ ಅಬಕಾರಿ ಇಲಾಖೆಯ ಅನುಮತಿ ಕಡ್ಡಾಯ
ಉಡುಪಿ, ಡಿ.22: ಮನೆಗಳಲ್ಲಿ ನಡೆಯುವ ಮೆಹಂದಿ ಸೇರಿದಂತೆ ಇತರ ಸಮಾರಂಭ, ಕ್ರಿಸ್ಮಸ್, ಹೊಸ ವರ್ಷ ಆಚರಣೆ ಹಾಗೂ ಇತರ ಸಭೆ ಸಮಾರಂಭಗಳಲ್ಲಿ ಊಟದೊಂದಿಗೆ ಮದ್ಯ ಸರಬರಾಜು ಮಾಡಲು ಅಬಕಾರಿ ಇಲಾಖೆಯಿಂದ ಕಡ್ಡಾಯ ವಾಗಿ ಸಿಎಲ್-5 ಸನ್ನದು ಪಡೆದುಕೊಳ್ಳಬೇಕು ಎಂದು ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ (ಜಾರಿ ಮತ್ತು ತನಿಖೆ) ಡಾ.ಬಾಲಕೃಷ್ಣ ಸಿ.ಎಚ್. ತಿಳಿಸಿದ್ದಾರೆ.
ಅಜ್ಜರಕಾಡಿನಲ್ಲಿರುವ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ಎಲ್ಲಾ ಇವೆಂಟ್ ಮ್ಯಾನೇಜ್ಮೆಂಟ್, ಮದುವೆ ಸಭಾಂಗಣ, ಇತರೆ ಕಾರ್ಯಕ್ರಮ ಜರಗುವ ಸಭಾಂಗಣ, ಹೋಮ್‌ಸ್ಟೇ, ರೆಸಾರ್ಟ್‌ಗಳ ಮಾಲಕರು ಹಾಗೂ ವ್ಯವಸ್ಥಾಪಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಯಾವುದೇ ಸಭೆ ಸಮಾರಂಭಗಳಲ್ಲಿ ಗೋವಾ ಮದ್ಯ/ತೆರಿಗೆ ರಹಿತ ಮದ್ಯ/ನಕಲಿ ಮದ್ಯವನ್ನು ಉಪಯೋಗಿಸದಂತೆ ಅವರು ಎಲ್ಲರಿಗೂ ಸೂಚನೆ ಗಳನ್ನು ನೀಡಿದರು. ಮನೆಗಳಲ್ಲಿ ನಡೆಯುವ ಮೆಹಂದಿ ಹಾಗೂ ಇತರೆ ಸಮಾರಂಭಗಳಲ್ಲಿ ಊಟದೊಂದಿಗೆ ಮದ್ಯ ಸರಬರಾಜು ಮಾಡುವುದಾದ್ದಲ್ಲಿ ಸಹ ಕಡ್ಡಾಯವಾಗಿ ಸಿಎಲ್-5 ಸನ್ನದು ಪಡೆದುಕೊಳ್ಳಬೇಕು, ತೆರಿಗೆ ಪಾವತಿಸಿದ ಮದ್ಯವನ್ನೇ ಉಪಯೋಗಿಸಬೇಕು ಎಂದರು.
ಯಾವುದೇ ಅಬಕಾರಿ ಅಕ್ರಮಗಳು ನಡೆದಿರುವುದು ಕಂಡುಬಂದಲ್ಲಿ ಮೊಕದ್ದಮೆ ದಾಖಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಜಿಲ್ಲೆಯಲ್ಲಿ ಯಾವುದೇ ಅಬಕಾರಿ ಅಕ್ರಮಗಳು ಕಂಡುಬಂದಲ್ಲಿ ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತರು ಮೊ.ನಂ.: 9449597104, ಉಡುಪಿ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರು, ಮೊ.ನಂ: 9482520693, ಕುಂದಾಪುರ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರು, ಮೊ.ನಂ: 9448921980, ಉಡುಪಿ ವಲಯ-1 ಅಬಕಾರಿ ನಿರೀಕ್ಷಕರು: ಮೊ.ನಂ.944883554, ಉಡುಪಿ ವಲಯ-2 ಅಬಕಾರಿ ನಿರೀಕ್ಷಕರು: ಮೊ.ನಂ.9731860034, ಕಾರ್ಕಳ ವಲಯ ಅಬಕಾರಿ ನಿರೀಕ್ಷಕರು ಮೊ.ನಂ: 8892839092, ಕುಂದಾಪುರ ವಲಯ ಅಬಕಾರಿ ನಿರೀಕ್ಷಕರು ಮೊ.ನಂ.: 9731674117, ಜಿಲ್ಲಾತಂಡ ಅಬಕಾರಿ ನಿರೀಕ್ಷಕರು ಮೊ.ನಂ.: 9035773785ನ್ನು ಸಂಪರ್ಕಿಸಿ ದೂರು ಸಲ್ಲಿಸಬಹುದು ಎಂದರು.
ಸಭೆಯಲ್ಲಿ ಜಿಲ್ಲಾ ಅಬಕಾರಿ ಉಪ ಆಯುಕ್ತರು ಬಿಂದುಶ್ರೀ ಪಿ. ಜಿಲ್ಲೆಯ ಅಬಕಾರಿ ಇಲಾಖೆ ಅಧಿಕಾರಿಗಳು, ಜಿಲ್ಲೆಯ ಇವೆಂಟ್ ಮ್ಯಾನೇಜ್ಮೆಂಟ್, ಮದುವೆ ಸಭಾಂಗಣ, ಇತರೆ ಕಾರ್ಯಕ್ರಮ ಜರುಗುವ ಸಭಾಂಗಣ, ಹೋಮ್‌ಸ್ಟೇ, ರೆಸಾರ್ಟ್‌ಗಳ ಮಾಲಕರು, ವ್ಯವಸ್ಥಾಪಕರು ಉಪಸ್ಥಿತರಿದ್ದರು.