ಸರಕಾರಿ ಯೋಜನೆ ಜನರಿಗೆ ತಲುಪಲು ಗ್ರಾಮ ಒನ್ ಸಹಕಾರಿ: ಉಡುಪಿ ಜಿಲ್ಲಾಧಿಕಾರಿ
ಉಡುಪಿ: ಗ್ರಾಮೀಣ ಪ್ರದೇಶಗಳಲ್ಲಿ ಸರಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗ್ರಾಮ ಒನ್ ಸೇವಾ ಕೇಂದ್ರಗಳು ಸಹಕಾರಿಯಾಗಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ ದಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ಸೇವಾ ಸಿಂಧು/ ಗ್ರಾಮ ಒನ್ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಗ್ರಾಮ ಒನ್ ಕೇಂದ್ರಗಳ ನಿರ್ವಾಹಕರ ಗ್ರಾಮ ಒನ್ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ 208ಕ್ಕೂ ಹೆಚ್ಚು ಗ್ರಾಮ ಒನ್ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದ ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವಂತಾಗಿದೆ. ಜಿಲ್ಲೆಯ ಗ್ರಾಮ ಒನ್ ಕೇಂದ್ರದ ಅತ್ಯುತ್ತಮ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಗ್ರಾಮ ಒನ್ ಕೇಂದ್ರಗಳು ಇಲಾಖೆಗಳ ಸಮನ್ವಯದೊಂದಿಗೆ ಇನ್ನಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಆಯುಷ್ಮಾನ್ ಭಾರತ, ಗ್ಯಾರಂಟಿ ಯೋಜನೆಗಳು ಸೇರಿದಂತೆ ಸರಕಾರದ ವಿವಿಧ ಯೋಜನೆಗಳಿಗೆ ಗ್ರಾಮ ಒನ್ ನಿರ್ವಾಹಕರು ಸಾರ್ವಜನಿಕರಿಂದ ಹೆಚ್ಚುವರಿ ಶುಲ್ಕವನ್ನು ಪಡೆಯದೇ ಸರಕಾರ ನಿಗದಿಪಡಿಸಿದ ಶುಲ್ಕವನ್ನು ಪಡೆಯುವ ಮೂಲಕ ಸಾರ್ವಜನಿಕರಿಗೆ ತಮ್ಮ ಪ್ರಾಮಾಣಿಕ ಸೇವೆಯನ್ನು ನೀಡಬೇಕು ಎಂದರು.
ಸಮ್ಮಿಲನವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಗ್ರಾಮೀಣ ಭಾಗದ ಜನರು ಸರಕಾರದ ಯೋಜನೆಗಳ ಸದುಪಯೋಗ ಪಡೆಯಲು ಗ್ರಾಮಮಟ್ಟ ದಲ್ಲಿ ಸ್ಥಾಪನೆಯಾಗಿರುವ ಗ್ರಾಮ ಒನ್ ಸೆಂಟರ್ಗಳ ಸೇವೆಯನ್ನು ಪಡೆದು ಕೊಳ್ಳಬಹುದು ಎಂದರು.
ಗ್ರಾಮ ಒನ್ನ ಜಿಲ್ಲಾ ಯೋಜನಾ ವ್ಯವಸ್ಥಾಪಕ ನವೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಾರ್ವಜನಿಕರಿಗೆ ಸೌಲಭ್ಯ ಗಳನ್ನು ಒದಗಿಸುವ ನಿಟ್ಟಿನಲ್ಲಿ ಗ್ರಾಮ ಒನ್ ಕೇಂದ್ರಗಳು ವಾರದ ಏಳು ದಿನವೂ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮ ಒನ್ ಕೇಂದ್ರಗಳ ಮೂಲಕ ಸರಕಾರದ ಯೋಜನೆಗಳ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಉತ್ತಮ ಸಮಾಜ ಸೇವೆಗಾಗಿ ನಂದಾ ಕಿಶೋರ್ ಬ್ರಹ್ಮಾವರ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಇಡಿಸಿಎಸ್ ನಿರ್ದೇಶನಾಲಯದ ಉಪ ನಿರ್ದೇಶಕ ಮಹವೀರ್, ಗ್ರಾಮ ಒನ್ ಕೇಂದ್ರಗಳ ಮಾಲಕರು, ನಿರ್ವಾಹಕರು ಹಾಗೂ ಇತರರು ಉಪಸ್ಥಿತರಿದ್ದರು.
ಸುಷ್ಮಾ ಉದ್ಯಾವರ ಸ್ವಾಗತಿಸಿ, ವಿಕಾಸ್ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ವಂದಿಸಿದರು.