ವೃದ್ಧಾಪ್ಯ ವೇತನವೂ ಹೋಯ್ತು... ಮಾಸಾಶನ ಸಿಗಲೇ ಇಲ್ಲ: ಸುಕೇಶ್ ಪಾಣ

Update: 2023-08-31 16:42 GMT

ಉಡುಪಿ : ಪಾಣರ ಯಾನೆ ನಲಿಕೆಯವರು ಕೋಲ ಕಟ್ಟುವವರು ಹಾಗೂ ಧರ್ಮ ನರ್ತಕ ವೃತ್ತಿ ಮಾಡುತ್ತಾರೆ. ಕಳೆದ ಕೋವಿಡ್ ಸಂದರ್ಭದಲ್ಲಿ ಈ ಸಮಾಜ ತೀವ್ರ ಸಂಕಷ್ಟದಲ್ಲಿದ್ದಾಗ 60 ವರ್ಷ ಮೇಲ್ಪಟ್ಟ ಧರ್ಮನರ್ತಕರಿಗೆ ಮಾಸಾಶನ ನೀಡುವುದಾಗಿ ಅಂದಿನ ಬಿಜೆಪಿ ಸರಕಾರ ಘೋಷಿಸಿತು.

ಇದರಿಂದ 60ರಿಂದ 70ರಷ್ಟಿರುವ ಹಿರಿಯ ನರ್ತಕರು ಮಾಸಾಶನಕ್ಕೆ ಅರ್ಜಿ ಸಲ್ಲಿಸಲು ಮುಂದಾದರು. ಇವರಲ್ಲಿ ಕೆಲವರಿಗೆ ವೃದ್ಧಾಪ್ಯ ವೇತನ ಸಿಗುತ್ತಿತ್ತು. ಮಾಸಾಶನಕ್ಕಾಗಿ ಅದನ್ನು ಬಿಡುವಂತೆ ಹೇಳಲಾಯಿತು. ಮಾಸಾಶನ ಮಂಜೂರಾಗುವ ಮೊದಲೇ ವೃದ್ಧಾಪ್ಯ ವೇತನವನ್ನು ರದ್ದುಪಡಿಸಲಾಯಿತು ಎಂದು ಸುಕೇಶ್ ಪಾಣ ವಿವರಿಸಿದರು.

ಸಮಾಜದ ಹಿರಿಯ ದೈವ ನರ್ತಕರಾದ ಸಾಧು ಪಾಣರ ಮಂಚಿ ಅವರಿಗೆ ವೃದ್ಧಾಪ್ಯ ವೇತನ ಸಿಗುತ್ತಿತ್ತು. ಮಾಸಾಶನಕ್ಕೆ ಅರ್ಜಿ ಸಲ್ಲಿಸಿದಾಗ ಅವರಿಗೆ ವೃದ್ಧಾಪ್ಯ ವೇತನವನ್ನು ನಿಲ್ಲಿಸಲಾಯಿತು. ಈಗ ಅವರಿಗೆ ಅತ್ತ ವೃದ್ಧಾಪ್ಯ ವೇತನವೂ ಇಲ್ಲ. ಇತ್ತ ಮಾಸಾಶನವೂ ಮಂಜೂರಾಗಿಲ್ಲ. ಇದರಿಂದ ಸಾಧು ಪಾಣರ ತೀವ್ರ ಸಂಕಷ್ಚದಲ್ಲಿದ್ದಾರೆ ಎಂದು ಪಾಣ ಬೇಸರದಿಂದ ನುಡಿದರು.

ಸರಕಾರ ಮಾಸಾಶನ ಘೋಷಣೆ ಮಾಡಿದ್ದು ಮಾತ್ರ. ಇದುವರೆಗೆ ಯಾರಿಗೂ ಮಂಜೂರಾಗಿಲ್ಲ. ಅನುದಾನವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ಸಮಾಜದ ಹಿರಿಯರು ಮಾಸಾಶನಕ್ಕೆ ಅರ್ಜಿಯನ್ನೇ ಹಾಕಿಲ್ಲ. ಯಾರೂ ನಮ್ಮ ನೆರವಿಗೂ ಬಂದಿಲ್ಲ ಎಂದು ಪಾಂಡುರಂಗ ಪಡ್ಡಂ ವಿಷಾಧ ವ್ಯಕ್ತಪಡಿಸಿದರು.

ರಿಷಬ್ ಶೆಟ್ಟಿಯ ಕಾಂತಾರ ಚಿತ್ರದ ಯಶಸ್ಸಿನ ಬಳಿಕ ನಮ್ಮ ಪಾಣರ ಯಾನೆ ನಲಿಕೆ ಸಮಾಜದ ಬಗ್ಗೆ ಇಂದಿನ ಜನತೆಗೆ ಅರಿಯು ಮೂಡಿದೆ. ಆದರೆ ಇದರಿಂದ ನಮ್ಮ ಸಮಾಜಕ್ಕೆ ಯಾವುದೇ ಲಾಭ ಸಿಕ್ಕಿಲ್ಲ. ನಮ್ಮ ಸಂಕಷ್ಟ ಮುಂದುವರಿದೆ ಎಂದು ಅವರು ನೋವಿನಿಂದ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News