ಮುಕ್ತ ವಿವಿ ಉಡುಪಿ ಪ್ರಾದೇಶಿಕ ಕೇಂದ್ರದ ಕಟ್ಟಡ ನಿರ್ಮಾಣ: ಪ್ರೊ.ಶರಣಪ್ಪ ವಿ.ಹಲಸೆ
ಉಡುಪಿ, ಜು.24: ರಾಜ್ಯದರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ 34 ಪ್ರಾದೇಶಿಕ ಕೇಂದ್ರಗಳಿದ್ದು, ಇದರಲ್ಲಿ 9 ಕೇಂದ್ರಗಳಿಗೆ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಮೂರು ಜಿಲ್ಲಾ ಕೇಂದ್ರಗಳಲ್ಲಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಉಡುಪಿ ಜಿಲ್ಲೆಯಲ್ಲಿ ಜಾಗ ಗುರುತಿಸುವ ಪ್ರಕ್ರಿಯೆ ನಡೆಯು ತ್ತಿದ್ದು, 10-15ಕೋಟಿ ರೂ. ಅನುದಾನದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ವಿವಿಯು ಯುಜಿಸಿ ಮಾನ್ಯತೆ ಪಡೆದುಕೊಂಡು 61 ಸ್ನಾತಕ/ಸ್ನಾತಕೊತ್ತರ ಪದವಿ, ಡಿಪ್ಲೋಮಾ ಕೋರ್ಸ್‌ಗಳನ್ನು ನೀಡುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಎಂಎಸ್‌ಡಬ್ಲ್ಯು, ಬಿಎಸ್‌ಡಬ್ಲ್ಯು, ಎಂಸಿಎ ಮುಂತಾದ ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಲಾಗಿದೆ. 13 ಆನ್‌ಲೈನ್ ಕೋರ್ಸ್‌ಗಳಿಗೆ ಪ್ರಸ್ತಾವನೆ ಸಲ್ಲಿಸ ಲಾಗಿದ್ದು, ಅನುಮತಿ ದೊರೆತಲ್ಲಿ ಹೊರರಾಜ್ಯದ ವಿದ್ಯಾರ್ಥಿ ಗಳು ಕೂಡ ಪದವಿ ಯನ್ನು ಪಡೆಯಬಹುದಾಗಿದೆ ಎಂದರು.
ವಿವಿಯ ಉಡುಪಿ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಡಾ.ಮಹಾ ಲಿಂಗ ಕೆ.ಪಿ. ಮಾತನಾಡಿ, ಉಡುಪಿ ಕೇಂದ್ರದಲ್ಲಿ ಕಳೆದ 2022ರ ಜುಲೈ ತಿಂಗಳಲ್ಲಿ ಒಟ್ಟು 680 ಮಂದಿ ಹಾಗೂ 2023ರ ಜನವರಿ ತಿಂಗಳಲ್ಲಿ 636 ಮಂದಿ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಂಡಿದ್ದಾರೆ. ಪ್ರಸ್ತುತ ಮುಕ್ತ ವಿವಿ 2023-24(ಜುಲೈ) ಸಾಲಿನ ಪ್ರವೇಶಾತಿಯು ಉಡುಪಿ ಬನ್ನಂಜೆಯಲ್ಲಿರುವ ಹಳೆ ಜಿಪಂ ಕಟ್ಟಡದ ಎರಡನೇ ಮಹಡಿಯಲ್ಲಿ ನಡೆಯುತ್ತಿದೆಂದು ತಿಳಿಸಿದರು.
ಉಡುಪಿ ಪ್ರಾದೇಶಿಕ ಕೇಂದ್ರದಲ್ಲಿ 2019 ಮತ್ತು 2020ನೇ ಸಾಲಿನಲ್ಲಿ ಭವಾನಿ ಕೆ.ಎನ್. 7ನೆ ರ್ಯಾಂಕ್, ಶ್ರುತಿ 1ನೆ ರ್ಯಾಂಕ್, ಲತಾ ಡಿ. 4ನೆ ರ್ಯಾಂಕ್, ಸಂಗೀತಾ ಶೆಟ್ಟಿ 1ನೆ ರ್ಯಾಂಕ್, ಸಂದೀಪ್ 3ನೆ ರ್ಯಾಂಕ್, ಪೂಜಾ ಡಿ. 2ನೆ ರ್ಯಾಂಕ್, ಕಾಂತಿ ಎಸ್.ಶೆಟ್ಟಿ 9ನೆ ರ್ಯಾಂಕ್, ಕಾರ್ತಿಕ್ ಪಿ.ಆರ್. 7ನೆ ರ್ಯಾಂಕ್ ಗಳಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಿವಿ ಮಂಗಳೂರು ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಡಾ.ಬಸವರಾಜ, ಕಾರ್ಯಪಾಲಕ ಅಭಿಯಂತರ ಭಾಸ್ಕರ ಉಪಸ್ಥಿತರಿದ್ದರು.