ಶೈಕ್ಷಣಿಕ ಧನಸಹಾಯ ಬಿಡುಗಡೆಗೆ ಆಗ್ರಹಿಸಿ ಕಾರ್ಮಿಕರ ಮಕ್ಕಳಿಂದ ಧರಣಿ

Update: 2024-09-10 15:54 GMT

ಕುಂದಾಪುರ, ಸೆ.10: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯು ಕಳೆದ ಮೂರು ವರ್ಷಗಳಿಂದ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯ ಜಮೆ ಮಾಡದೇ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕರ ಮಕ್ಕಳು ಇಂದು ರಾಜ್ಯ ಸರಕಾರದ ವಿರುದ್ಧ ಕುಂದಾಪುರ ಶಾಸಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಕರೆಯಂತೆ ಹಮ್ಮಿಕೊಳ್ಳಲಾದ ಪ್ರತಿಭಟನೆ ಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸುರೇಶ್ ಕಲ್ಲಾಗರ, ಕುಂದಾಪುರ ವಿಧಾನಸಭಾ ಕ್ಷೇತ್ರದ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನಸಹಾಯ ಬಿಡುಗಡೆಗೆ ಶಾಸಕರು ಸರಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.

2021-22 ಹಾಗೂ 2022-23 ಸಾಲಿನಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೊಡಬೇಕಾದ ಶೈಕ್ಷಣಿಕ ಧನಸಹಾಯ ಬಿಡುಗಡೆಗೆ ಹಲವು ರೀತಿಯ ಹೋರಾಟಗಳನ್ನು ನಮ್ಮ ಸಂಘದಿಂದ ನಡೆಸಲಾಗಿದೆ. ಈ ಬಗ್ಗೆ ಮಂಡಳಿ ಹಾಗೂ ಕಾರ್ಮಿಕ ಸಚಿವರು ನಮ್ಮ ಸಂಘಟನೆ ಜೊತೆ ಮಾತುಕತೆ ನಡೆಸಿ ಬಿಡುಗಡೆ ಮಾಡುವುದಾಗಿಯೂ ಭರವಸೆಯನ್ನೂ ನೀಡಿದ್ದಾರೆ. ಆದರೆ ಭರವಸೆ ಭರವಸೆಯಾಗಿಯೇ ಉಳಿದು ವಿಳಂಭ ಧೋರಣೆ ಅನುಸರಿಸಲಾಗುತ್ತಿದೆ. ಕಾರ್ಮಿಕ ಸಚಿವರು ಬೋಗಸ್ ಕಾರ್ಡ್ ನೆಪವೊಡ್ಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯುಂಟು ಮಾಡುತ್ತಿದ್ದಾರೆ ಎಂದು ದೂರಿದರು.

ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳಾದ ಪಲ್ಲವಿ, ಶ್ರೇಯಲ್ ಎಸ್, ಸಮೀರ್, ಭೂಮಿಕಾ ಕೆ.ಪೂಜಾರಿ, ಸಿಐಟಿಯು ತಾಲೂಕು ಸಂಚಾಲಕ ಚಂದ್ರಶೇಖರ ವಿ., ಕೃಷ್ಣ ಪೂಜಾರಿ, ಶಶಿಕಾಂತ್ ಎಸ್ ಕೆ., ವಿಜೇಂದ್ರ ಕೋಣಿ, ಸುಧೀರ್ ಪೂಜಾರಿ ಉಪಸ್ಥಿತರಿದ್ದರು.

ಕಟ್ಟಡ ಕಾರ್ಮಿಕರ ಮಕ್ಕಳು ಗ್ರಾಮೀಣ ಪ್ರದೇಶವಾದ ಗುಲ್ವಾಡಿ, ಸಳ್ವಾಡಿ- ಕಾಳಾವಾರ ಗ್ರಾಮಗಳಲ್ಲಿ ಗ್ರಾಮ ಪಂಚಾಯತ್ ಎದುರು ಪ್ರತಿಭಟಿಸಿ ಪಂಚಾಯತ್ ಅಧ್ಯಕ್ಷರ ಮೂಲಕ ಮನವಿ ನೀಡಿದರು. ಅಣ್ಣಪ್ಪಅಬ್ಬಿಗುಡ್ಡಿ, ರೆಹೆಮಾನ್, ರಾಮಚಂದ್ರ ನಾವಡ ಮೊದಲಾದವರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News