ಮತ್ಸ್ಯ ಸಂಪತ್ತಿಗೆ ಮಾರಕವಾದ ಬುಲ್ಟ್ರಾಲ್, ಲೈಟ್ಫಿಶಿಂಗ್: ತ್ರಾಸಿಯಲ್ಲಿಂದು 3 ಜಿಲ್ಲೆಗಳ ನಾಡದೋಣಿ ಮೀನುಗಾರರ ಪ್ರತಿಭಟನೆ

Update: 2024-11-10 11:30 IST
ಮತ್ಸ್ಯ ಸಂಪತ್ತಿಗೆ ಮಾರಕವಾದ ಬುಲ್ಟ್ರಾಲ್, ಲೈಟ್ಫಿಶಿಂಗ್: ತ್ರಾಸಿಯಲ್ಲಿಂದು 3 ಜಿಲ್ಲೆಗಳ ನಾಡದೋಣಿ ಮೀನುಗಾರರ ಪ್ರತಿಭಟನೆ
  • whatsapp icon

ಕುಂದಾಪುರ: ಕರಾವಳಿ ಜಿಲ್ಲೆಗಳು ತಮ್ಮ ಆರ್ಥಿಕತೆಗೆ ಬಹುತೇಕ ಮೀನುಗಾರಿಕೆಯನ್ನೇ ನೆಚ್ಚಿಕೊಂಡಿದೆ. ಜಿಲ್ಲೆಗಳ ಅಭಿವೃದ್ಧಿಯಲ್ಲಿ ಮೀನುಗಾರಿಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಿದೆ. ಸಾಂಪ್ರದಾಯಿಕ ಮೀನುಗಾರಿಕೆ ನಡೆಸಿ ಅದೆಷ್ಟೋ ಬಡ ಕುಟುಂಬಗಳು ಹೊತ್ತಿನ ಊಟ ಮಾಡುತ್ತಿವೆ. ಆದರೆ ಇತ್ತೀಚೆಗೆ ಮತ್ಸ್ಯಕ್ಷಾಮ ಮೊದಲಾದ ಸಮಸ್ಯೆಗಳ ನಡುವೆಯೇ ಬುಲ್ಟ್ರಾಲ್ ಹಾಗೂ ಬೆಳಕು ಮೀನುಗಾರಿಕೆ (ಲೈಟ್ ಫಿಶಿಂಗ್) ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಸಂಬಂಧಿಸಿದಂತೆ ಹಲವು ಮನವಿಗಳನ್ನು ಸಲ್ಲಿಸಿದರೂ ಎಚ್ಚೆತ್ತುಕೊಳ್ಳದ ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜಾಣ ಕುರುಡುತನಕ್ಕೆ ಬೇಸತ್ತ ಮೂರು ಜಿಲ್ಲೆಗಳ ನಾಡದೋಣಿ ಮೀನುಗಾರರು ಜ.10ರಂದು ತ್ರಾಸಿಯಲ್ಲಿ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ.

ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ಮೂರು ಜಿಲ್ಲೆಗಳ ಸಾವಿರಾರು ಮಂದಿ ನಾಡದೋಣಿ ಮೀನುಗಾರರು ಶುಕ್ರವಾರ ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಲಿದ್ದಾರೆ ಎಂದು ತಿಳಿದುಬಂದಿದೆ.

ಲೈಟ್ ಫಿಶಿಂಗ್ ಮತ್ತು ಬುಲ್ಟ್ರಾಲ್ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರದೇ ಇದ್ದರೆ ರಾಜ್ಯ ಕರಾವಳಿಯಲ್ಲಿ ಮೀನುಗಾರಿಕೆ ಸಂಪೂರ್ಣವಾಗಿ ನಾಶವಾಗುತ್ತದೆ. ಮೀನು ಮರಿ ಸಂತತಿಯೊಂದಿಗೆ ಮೀನಿನ ಸಂಪನ್ಮೂಲಗಳು ನಾಶವಾಗುತ್ತವೆ. ಆದ್ದರಿಂದ ಈ ಎರಡು ಮಾದರಿಯ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂಬುದು ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳ ವಿವಿಧ ನಾಡ ದೋಣಿ ಮೀನುಗಾರರ ಸಂಘಟನೆಗಳ ಒಕ್ಕೊರಳ ಒತ್ತಾಯವಾಗಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು 2017ರಲ್ಲೇ ಮೀನು ಸಂತತಿಗಳ ನಾಶಕ್ಕೆ ಕಾರಣವಾಗುವ ಬುಲ್ಟ್ರಾಲ್ ಮತ್ತು ಬೆಳಕು ಮೀನುಗಾರಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದವು. ಈ ಕುರಿತಂತೆ ಕೆಲ ತಿಂಗಳ ಹಿಂದೆ ಉಡುಪಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೊಲೀಸ್ ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು.

ಅದರಂತೆ ರಾಜ್ಯದ ಬೋಟ್ಗಳು ಬೆಳಕು ಮೀನುಗಾರಿಕೆ, ಬುಲ್ ಟ್ರಾಲಿಂಗ್ ಮೀನುಗಾರಿಕೆ, ಸಣ್ಣ ಮೀನು ಮರಿಗಳನ್ನು ಹಿಡಿಯುವುದನ್ನು ನಿಷೇಧಿಸಲು ಹಾಗೂ ದಂಡ ವಿಧಿಸುವ ಸಲುವಾಗಿ ಸಂಬಂಧಿತ ಇಲಾಖಾಧಿಕಾರಿಗಳ, ಸಿಬ್ಬಂದಿಯ ಕಾರ್ಯಾಚರಣೆ ತಂಡವನ್ನೂ ರಚಿಸಲಾಗಿತ್ತು. ಆದರೂ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂಬುದು ಕರಾವಳಿ ಜಿಲ್ಲೆಗಳ ನಾಡ ದೋಣಿ ಮೀನುಗಾರರ ಆರೋಪವಾಗಿದೆ.

ಸಚಿವರ ದ್ವಂದ್ವ ನಿಲುವು ಆರೋಪ!: ರಾಜ್ಯದಲ್ಲಿ ನಿಷೇಧಿತ ಆದೇಶ ಇರುವ ಮೀನುಗಾರಿಕೆಯಾದ ಲೈಟ್ ಫಿಶಿಂಗ್ ಪರವಾಗಿ ಮೀನುಗಾರಿಕಾ ಸಚಿವರಿದ್ದಾರೆಂದು ನಾಡದೋಣಿ ಮೀನುಗಾರರು ಆರೋಪಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸಾಂಪ್ರದಾಯಿಕ ಮೀನುಗಾರರ ಒಕ್ಕೂಟವು ಮೀನುಗಾರಿಕಾ ಸಚಿವ ಮಂಕಾಳ ಎಸ್. ವೈದ್ಯ ಹಾಗೂ ಸಂಬಂಧಪಟ್ಟ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳನ್ನು ಅನೇಕ ಸಂದರ್ಭಗಳಲ್ಲಿ ಭೇಟಿಯಾಗಿ ಲೈಟ್ ಫಿಶಿಂಗ್ ಮತ್ತು ಬುಲ್ಟ್ರಾಲ್ ಮೀನುಗಾರಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು.

ಇದರ ಪರಿಣಾಮ ಸಚಿವರು ಮೀನುಗಾರಿಕಾ ಇಲಾಖೆಯ ನಿರ್ದೇಶಕ ರನ್ನು, ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಮತ್ತು ಕರಾವಳಿ ಕಾವಲು ಪಡೆಯ ಅಧಿಕಾರಿಗಳ ಸಭೆ ಕರೆದು ಮೇಲೆ ಹೇಳಿದ ಲೈಟ್ ಫಿಶಿಂಗ್ ಮತ್ತು ಬುಲ್ಟ್ರಾಲ್ ಮೀನುಗಾರಿಕೆಯನ್ನು ತಕ್ಷಣ ನಿಲ್ಲಿಸಬೇಕೆಂದು ಆದೇಶ ನೀಡಿದ್ದರು. ಅದರಂತೆ ಬುಲ್ಟ್ರೋಲ್ ಮೀನುಗಾರಿಕೆಯನ್ನು ಸಂಬಂಧಪಟ್ಟ ಅಧಿಕಾರಿಗಳು ನಿಯಂತ್ರಣಕ್ಕೆ ತಂದಿದ್ದರು.

ಅವೈಜ್ಞಾನಿಕ ಮೀನುಗಾರಿಕೆಯಿಂದ ಮತ್ಸ್ಯ ಸಂಪತ್ತಿಗೆ

ಪೆಟ್ಟು: ಉಡುಪಿ, ದ.ಕ ಹಾಗೂ ಉ.ಕನ್ನಡ ಮೂರು ಜಿಲ್ಲೆಗಳ ಸುಮಾರು ೩೨೦ ಕಿ.ಮೀ. ಉದ್ದದ ಸಮುದ್ರದಲ್ಲಿ ಲೈಟ್ಫಿಶಿಂಗ್ ಹಾಗೂ ಬುಲ್ಟ್ರಾಲ್ ಮೂಲಕ ಮೀನುಗಾರಿಕೆ ಅವೈಜ್ಞಾನಿಕವಾಗಿ ನಡೆಯುತ್ತಿದ್ದು ಇದರಿಂದ ಸಣ್ಣ ಮೀನುಗಳು, ಮರಿ-ಮೊಟ್ಟೆಗಳು ನಾಶವಾಗಿ ಭವಿಷ್ಯದಲ್ಲಿ ಮತ್ಸ್ಯ ಸಂಪತ್ತು ಗಣನೀಯ ಪ್ರಮಾಣದಲ್ಲಿ ಕುಸಿಯುವ ಭೀತಿಯಿದೆ.

ರಾಜ್ಯದಲ್ಲಿ ಸಮುದ್ರ ತೀರದಿಂದ ೧೨ ನಾಟಿಕಲ್ ಮೈಲು ಪ್ರದೇಶದಲ್ಲಿ ಬೆಳಕು ಮೀನುಗಾರಿಕೆ ನಿಷೇಧಿಸಿ ೨೦೧೭ರಲ್ಲಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದ್ದರೂ ಇನ್ನು ಈ ಅವ್ಯವಸ್ಥೆ ಅವ್ಯಾಹತವಾಗಿ ಮುಂದುವರಿದಿದೆ. ಕಾನೂನು ಉಲ್ಲಂಘನೆ ಪ್ರಕರಣಗಳಿಗೆ ಕರ್ನಾಟಕ ’ಕಡಲು ಮೀನುಗಾರಿಕೆ ನಿಯಂತ್ರಣ ಕಾಯ್ದೆ-೧೯೮೬’ರ ಅಡಿಯಲ್ಲಿ ದಂಡ ವಿಧಿಸುವ ಅಧಿಕಾರವೂ ಕೂಡ ಇಲಾಖಾಧಿಕಾರಿಗಳಿದ್ದರೂ ದಂಡ ಪ್ರಯೋಗವಾಗಿಲ್ಲ ಎನ್ನುತ್ತಾರೆ ಬಡ ಮೀನುಗಾರರು.

ಮೀನುಗಾರರಿಂದ ರಾ.ಹೆದ್ದಾರಿ ತಡೆ

ಜ.10ರಂದು ಬೆಳಗ್ಗೆ ಗಂಗೊಳ್ಳಿಯಿಂದ ಬೈಂದೂರು-ಪಡುವರಿ ತನಕದ ನಾಡದೋಣಿ ಮೀನುಗಾರರು ಸಾವಿರಾರು ಸಂಖ್ಯೆಯಲ್ಲಿ ದೋಣಿಗಳನ್ನು ಸಮುದ್ರ ತೀರದಲ್ಲಿ ಲಂಗರು ಹಾಕಲಿದ್ದಾರೆ. ಬಳಿಕ ಕರಾವಳಿಗೆ ಹೊಂದಿಕೊಂಡ ೩ ಜಿಲ್ಲೆಗಳಿಂದ ಬರುವ ನಾಡದೋಣಿ ಮೀನುಗಾರರು ಪ್ರತಿಭಟನೆ ನಡೆಸಲಿದ್ದು, ೧೧ ಗಂಟೆ ಸುಮಾರಿಗೆ ರಸ್ತೆ ತಡೆ (ರಾ.ಹೆದ್ದಾರಿ ೬೬) ನಡೆಸಲಿದ್ದೇವೆ. ಸಚಿವರು, ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮನವಿ ಸ್ವೀಕರಿಸಿ ಸ್ಪಂದನ ನೀಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

‘ಕೇಂದ್ರ ಮತ್ತು ರಾಜ್ಯ ಸರಕಾರದೊಂದಿಗೆ ನ್ಯಾಯಾಲಯವೂ ಈ ಅವೈಜ್ಞಾನಿಕ ಮೀನುಗಾರಿಕೆಯ ಮೇಲೆ ನಿಷೇಧ ಹೇರುವ ಆದೇಶ ಹೊರಡಿಸಿದೆ. ಅದಲ್ಲದೆ ಈ ಹಿಂದೆ ಈ ಎರಡು ಅವೈಜ್ಞಾನಿಕ ಮೀನುಗಾರಿಕೆಯನ್ನು ನಿಲ್ಲಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶವನ್ನು ನೀಡಿದ್ದ ಮೀನುಗಾರಿಕಾ ಇಲಾಖೆ ಸಚಿವರೇ ಇದೀಗ ಏಕಾಏಕಿ ರಾಜ್ಯದಲ್ಲಿ ಲೈಟ್ ಫಿಶಿಂಗ್ ನಿಷೇಧ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಕರಾವಳಿಯ ಮೂರು ಜಿಲ್ಲೆಗಳ ನಾಡ ದೋಣಿ ಮೀನುಗಾರಿಕೆ ಮಾಡುವ ಬಡ ಮೀನುಗಾರರ ಬದುಕನ್ನು ನಾಶ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ. ಅವರು ಈ ಹೇಳಿಕೆಯನ್ನು ಹಿಂಪಡೆಯಬೇಕು. ಈ ಅವೈಜ್ಞಾನಿಕ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಕಡಲ ಮಕ್ಕಳಿಗೆ ನ್ಯಾಯ ಒದಗಿಸುವ ಬೇಡಿಕೆ ಮುಂದಿಟ್ಟು ನಾವು ಈ ವಿನೂತನ ಪ್ರತಿಭಟನೆಗೆ ಮುಂದಾಗಿದ್ದೇವೆ. ಇದಕ್ಕೂ ಸ್ಪಂದನ ಸಿಗದಿದ್ದರೆ ಉಗ್ರಹೋರಾಟ ಮಾಡಲಿದ್ದೇವೆ.

- ನಾಗೇಶ ಖಾರ್ವಿ, ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ


ಮಾತು ಮರೆತ ಸಚಿವರು?

ನಾಡದೋಣಿ ಮೀನುಗಾರ ಮುಖಂಡರು ಹೇಳುವ ಪ್ರಕಾರ, ಈ ಮೀನುಗಾರಿಕಾ ಋತುವಿನಲ್ಲಿ ನವೆಂಬರ್ನಿಂದ ಹಲವು ಪರ್ಸಿನ್ ಬೋಟ್ಗಳು ಲೈಟ್ ಫಿಶಿಂಗ್ ಪ್ರಾರಂಭಿಸಿವೆ. ಈ ನಡುವೆಯೇ ಡಿ.೫ರಂದು ರಾಜ್ಯ ಮೀನುಗಾರಿಕ ಮತ್ತು ಬಂದರು ಸಚಿವ ಮಂಕಾಳ ಎಸ್. ವೈದ್ಯ ಪತ್ರಿಕಾ ಹೇಳಿಕೆಯೊಂದನ್ನು ಹೊರಡಿಸಿ ರಾಜ್ಯದಲ್ಲಿ ಲೈಟ್ ಫಿಶಿಂಗ್ಗೆ ನಿಷೇಧ ಹೇರುವ ಯಾವುದೇ ಚಿಂತನೆ ಸರಕಾರದ ಮುಂದೆ ಇಲ್ಲ ಎಂದು ತಿಳಿಸಿದ್ದು ನಾಡದೋಣಿ ಮೀನುಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಕಳೆದ ವಿಧಾನ ಪರಿಷತ್ ಅಧಿವೇಶನದಲ್ಲಿ (21-2-2024) ಪ್ರಶ್ನೆ ಸಂಖ್ಯೆ 730ರಲ್ಲಿ ಕೇಳಿದ ಪ್ರಶ್ನೆಗೆ ಉತ್ತರವನ್ನು ನೀಡಿದ್ದ ಸಚಿವರು, ರಾಜ್ಯದಲ್ಲಿ ಬೆಳಕು ಮೀನುಗಾರಿಕೆ ಮತ್ತು ಬುಲ್ಟ್ರಾಲ್ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ ಎಂದು ಉತ್ತರಿಸಿದ್ದರು.

ಆದರೆ ಸಚಿವರು ತಾನೇ ನೀಡಿದ ಉತ್ತರವನ್ನು ಒಂಭತ್ತು ತಿಂಗಳ ಒಳಗೆ ಮರೆತು ಬಿಟ್ಟಿದ್ದಾರೆ ಎಂದು ಮೀನುಗಾರರು ಅಸಮಾಧಾನ ಹೊರಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - Safwan

contributor

Byline - ಯೋಗೀಶ್ ಕುಂಭಾಸಿ

contributor

Similar News