ಕೋಡಿ ಕೃಷಿಭೂಮಿಗೆ ನುಗ್ಗಿದ ಉಪ್ಪುನೀರು: ಕುಂದಾಪುರ ಎಸಿ, ತಹಶಿಲ್ದಾರ್ ಭೇಟಿ, ಪರಿಶೀಲನೆ

Update: 2025-03-04 20:51 IST
ಕೋಡಿ ಕೃಷಿಭೂಮಿಗೆ ನುಗ್ಗಿದ ಉಪ್ಪುನೀರು: ಕುಂದಾಪುರ ಎಸಿ, ತಹಶಿಲ್ದಾರ್ ಭೇಟಿ, ಪರಿಶೀಲನೆ
  • whatsapp icon

ಕುಂದಾಪುರ: ಕೋಡಿ ಆಸುಪಾಸಿನಲ್ಲಿ ಕೆಲದಿನಗಳಿಂದ ಉಪ್ಪುನೀರು ಕೃಷಿಭೂಮಿ ಹಾಗೂ ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದ್ದು ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಕೆ.ಮಹೇಶ್ಚಂದ್ರ, ತಹಶಿಲ್ದಾರ್ ಮಲ್ಲಿಕಾರ್ಜುನ್, ಪುರಸಭೆ ಮುಖ್ಯಾಧಿಕಾರಿ ಆನಂದ್ ಜೆ. ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಮಾಹಿತಿ ಪಡೆದರು.

ಕೋಡಿಯ ನಾಗಜೆಟ್ಟಿಗೇಶ್ವರ ದೇವಸ್ಥಾನ ಸಮೀಪದ ಮನೆಗಳು ಹಾಗೂ ಉಪ್ಪುನೀರಿನಿಂದ ಆವೃತವಾದ ಕೃಷಿಭೂಮಿ ಹಾಗೂ ಕೋಡಿ ಚಕ್ರಮ್ಮ ದೇವಸ್ಥಾನ ಬಳಿ ಕೃಷಿಭೂಮಿ ವೀಕ್ಷಿಸಿದ ಎಸಿ, ಅಧಿಕಾರಿಗಳು ಸ್ಥಳೀಯರು ಹಾಗೂ ಕೃಷಿಕರ ಅಹವಾಲುಗಳನ್ನು ಆಲಿಸಿದರು. ರಿಂಗ್ ರೋಡ್ ನಿರ್ಮಾಣ ಹಾಗೂ ಉಪ್ಪು ನೀರು ತಡೆಗೋಡೆ ರಚನೆ ಬಗ್ಗೆ ಸಾರ್ವಜನಿಕರು ಬೇಡಿಕೆ ಮುಂದಿಟ್ಟರು.

ಈ ಸಂದರ್ಭದಲ್ಲಿ ಕುಂದಾಪುರ ಪುರಸಭಾ ಅಧ್ಯಕ್ಷ ಮೋಹನದಾಸ್ ಶೆಣೈ, ಉಪಾಧ್ಯಕ್ಷೆ ವನಿತಾ ಬಿಲ್ಲವ, ತಹಶಿಲ್ದಾರ್ ಮಲ್ಲಿಕಾರ್ಜುನ್, ಪುರಸಭೆ ಮುಖ್ಯಾಧಿಕಾರಿ ಆನಂದ್ ಜೆ., ಸ್ಥಳೀಯರಾದ ಪ್ರಗತಿಪರ ಕೃಷಿಕ ಗಂಗಾಧರ ಪೂಜಾರಿ ಕೋಡಿ, ಶಂಕರ್ ಪೂಜಾರಿ, ಗೋಪಾಲ ಪೂಜಾರಿ, ಅಶೋಕ್ ಪೂಜಾರಿ ಕೋಡಿ, ನಾಗರಾಜ ಪುತ್ರನ್, ಸುರೇಖಾ ಮಧುಕರ್, ಯೋಗೇಶ್ ಪೂಜಾರಿ ಕೋಡಿ, ಭಾಸ್ಕರ್ ಪುತ್ರನ್, ದಿನೇಶ್, ತೇಜ ಪೂಜಾರಿ, ತಿಮ್ಮಪ್ಪ ಖಾರ್ವಿ, ಸುನೀಲ್ ಪೂಜಾರಿ ಕೋಡಿ, ರತ್ನಾಕರ್ ಶೇರಿಗಾರ್, ಸುಬ್ರಮಣ್ಯ, ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

‘ಹಲವೆಡೆ ಕೃಷಿಭೂಮಿ ಪ್ರದೇಶಗಳಿಗೆ ಉಪ್ಪುನೀರು ನುಗ್ಗಿರುವುದು ಕಂಡು ಬಂದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸಣ್ಣ ನೀರಾವರಿ ಹಾಗೂ ಬಂದರು ಮತ್ತು ಒಳನಾಡು ಸಾರಿಗೆ ಇಲಾಖಾಧಿಕಾರಿಗಳಿಗೆ ಶೀಘ್ರ ಸ್ಥಳಕ್ಕೆ ಭೇಟಿ ನೀಡಲು ಸೂಚಿಸಲಾಗುತ್ತದೆ. ಅವರು ತಾಂತ್ರಿಕ ವರದಿ ಸಿದ್ದಪಡಿಸಿ, ಅಂದಾಜುಪಟ್ಟಿ ತಯಾರಿಸಿ ನೀಡುತ್ತಾರೆ. ಇದನ್ನು ಜಿಲ್ಲಾಧಿಕಾರಿ, ಸರಕಾರಕ್ಕೆ ಸಲ್ಲಿಸುತ್ತೇವೆ’

-ಕೆ.ಮಹೇಶ್ಚಂದ್ರ, ಉಪವಿಭಾಗಾಧಿಕಾರಿಗಳು, ಕುಂದಾಪುರ

ಉಪ್ಪುನೀರು ತುಂಬಿದ ಕೊಡ ಹಿಡಿದು ಗ್ರಾಮಸ್ಥರ ಪ್ರತಿಭಟನೆ

ಕೋಡಿ ಭಾಗದ ಕೃಷಿಗದ್ದೆ, ಮನೆಯಂಗಳದಲ್ಲಿ ನುಗ್ಗುತ್ತಿರುವ ಉಪ್ಪುನೀರಿನ ಸಮಸ್ಯೆ ಬಗ್ಗೆ ಯಾವುದೇ ಸ್ಪಂದನ ದೊರೆತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಮಂಗಳವಾರ ಪುರಸಭೆ ಹಾಗೂ ತಾಲೂಕು ಕಚೇರಿ ಎದುರು ಉಪ್ಪುನೀರು ತುಂಬಿದ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.

ಈ ಬಗ್ಗೆ ಸತತ ೨೦ ವರ್ಷಗಳಿಂದ ಸ್ಥಳೀಯ ಆಡಳಿತಕ್ಕೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ, ಇಲ್ಲಿಯ ತನಕ ಶಾಶ್ವತ ಪರಿಹಾರ ಕೊಡಲು ಸಾಧ್ಯವಾಗಲಿಲ್ಲ. ನೂರಾರು ಎಕರೆ ಕೃಷಿ ಭೂಮಿ, ತೆಂಗಿನ ತೋಟ ಸಂಪೂರ್ಣ ನಾಶವಾಗಿದೆ. ಬಾವಿಯಲ್ಲಿ ಸಿಹಿ ನೀರು ಸದಾಕಾಲ ಲಭ್ಯವಿದ್ದರೂ ಉಪ್ಪುನೀರು ಬಂದು ಸೇರಿ ಬಾವಿ ನೀರು ಕೂಡ ಉಪ್ಪಾಗಿ ಕುಡಿಯದಂತಾಗಿದೆ. ದೂರದಿಂದ ನೀರನ್ನು ಹೊತ್ತು ತರುವ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಅಲ್ಲಲ್ಲಿ ಎಕರೆಗಟ್ಟಲೆ ಜಾಗದಲ್ಲಿ ಉಪ್ಪುನೀರು ಸಂಗ್ರಹವಾಗಿ ವಿಪರೀತ ಸೊಳ್ಳೆ ಕಾಟ ಇದೆ. ಶಾಶ್ವತ ಪರಿಹಾರ ದೊರೆಯಬೇಕು ಎಂದು ತಹಶೀಲ್ದಾರ್, ಸಹಾಯಕ ಕಮಿಷನರ್, ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ರತ್ನಾಕರ ಶೇರೆಗಾರ್, ಅಶೋಕ್ ಪೂಜಾರಿ ಕೋಡಿ, ಸುಬ್ರಹ್ಮಣ್ಯ ಶೇರೆಗಾರ್, ಪ್ರಸಾದ್ ಗಾಣಿಗ, ದಿನೇಶ್ ಉಪಸ್ಥಿತರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News