ರಾಜ್ಯದ 9 ಲಕ್ಷ ಕಾರ್ಮಿಕ ಮಕ್ಕಳಿಗೆ ಸ್ಕಾಲರ್‌ಶಿಪ್: ಸಚಿವ ಸಂತೋಷ್ ಲಾಡ್

Update: 2023-11-20 14:24 GMT

ಉಡುಪಿ, ನ.20: ಕಾರ್ಮಿಕ ಕಲ್ಯಾಣ ಮಂಡಳಿಯ ಮೂಲಕ ರಾಜ್ಯದ ಕಾರ್ಮಿಕ ಮಕ್ಕಳಿಗೆ ವಿತರಿಸಲಾಗುವ ಸ್ಕಾಲರ್‌ ಶಿಪ್‌ಗೆ ಈ ಬಾರಿ 13 ಲಕ್ಷ ಅರ್ಜಿಗಳು ಬಂದಿದ್ದು, ಇವುಗಳಲ್ಲಿ 9 ಲಕ್ಷ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ನ್ನು ವಿತರಿಸುತಿದ್ದೇವೆ ಎಂದು ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

ಮಣಿಪಾಲದಲ್ಲಿರುವ ಜಿಪಂನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಇಲಾಖೆಯ ಮಾಹಿತಿಗಳನ್ನು ಪತ್ರಕರ್ತ ರೊಂದಿಗೆ ಹಂಚಿಕೊಂಡರು.

ಬಿಜೆಪಿ ಅಧಿಕಾರದ ಅವಧಿಯಲ್ಲಿ ರಾಜ್ಯದ ಮೂರು ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿ ವೇತನ ನೀಡಲಾಗಿತ್ತು. ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಈಗ ಅದನ್ನು 9 ಲಕ್ಷಕ್ಕೆ ಏರಿಸಲಾಗಿದೆ. ಅಲ್ಲದೇ ಹಿಂದಿನ ಸರಕಾರ ಯಾವುದೇ ಸರಿಯಾದ ಕಾರಣಗಳಿಲ್ಲದೇ ಅವೈಜ್ಞಾನಿಕವಾಗಿ ಏರಿಸಿದ ಮೊತ್ತವನ್ನು ನಿರ್ದಿಷ್ಟ ಮಟ್ಟದಲ್ಲಿರಿಸಿದ್ದೇವೆ ಎಂದರು.

ಬಿಜೆಪಿ ಆಡಳಿತದಲ್ಲಿ ಕೋವಿಡ್ ಸಂದರ್ಭದ ಕಿಟ್ ವಿತರಣೆಯಲ್ಲಿ ಕಾರ್ಮಿಕ ನಿಧಿಯ ದುರ್ಬಳಕೆಯ ಆರೋಪ ಕೇಳಿ ಬಂದಿದ್ದು, ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿದ್ದ 13,000 ಕೋಟಿ ರೂ.ನಿಧಿ ಏಕಾಏಕಿ 6,500 ಕೋಟಿ ರೂ.ಗೆ ಇಳಿದಿತ್ತು. ಕೇವಲ 2,500ದಿಂದ 3000 ಕೋಟಿ ರೂ.ಮಾತ್ರ ಸೆಸ್ ಸಂಗ್ರಹವಾಗಿತ್ತು. ಅವೈಜ್ಞಾನಿಕವಾಗಿ 39 ಲಕ್ಷ ಕಾರ್ಡ್ ಗಳನ್ನು ಹೆಚ್ಚುವರಿಯಾಗಿ ಹಂಚಲಾಗಿತ್ತು. ಇದರಲ್ಲಿ ಸಾಕಷ್ಟು ನಕಲಿ ಕಾರ್ಡ್‌ಗಳ ಆರೋಪವೂ ಕೇಳಿಬಂದಿತ್ತು ಎಂದರು.

2008ರಿಂದ ನಿರ್ಮಿಸಿದ ಹೊಸ ಕಟ್ಟಡಗಳ ಜಿಯೋ ಮ್ಯಾಪಿಂಗ್ ಮೂಲಕ ಹೆಚ್ಚುವರಿಯಾಗಿ 3,000 ಕೋಟಿ ರೂ. ಸೆಸ್ ಸಂಗ್ರಹಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಜಿಯೋ ಮ್ಯಾಪಿಂಗ್ ನೆರವಿನಿಂದ ಕೇಂದ್ರ ಸಹಿತ ಕಟ್ಟಡ ನಿರ್ಮಾಣದಾರರು ನೀಡಬೇಕಾದ ಬಾಕಿ ಸೆಸ್ ವಸೂಲಿಗೂ ಕ್ರಮ ಕೈಗೊಳ್ಳಲಾಗುವುದು ಎಂದರು.

ದೇಶದಲ್ಲಿ ಶೇ.90ರಷ್ಟು ಹಾಗೂ ರಾಜ್ಯದಲ್ಲಿ ಶೇ.85ರಷ್ಟು ಅಸಂಘಟಿತ ಕಾರ್ಮಿಕರಿದ್ದು, ರಾಜ್ಯದಲ್ಲಿ ಸುಮಾರು 1.80 ಕೋಟಿ ಜನರು ಸಾಮಾಜಿಕ ಭದ್ರತೆಯಿಂದ ವಂಚಿತರಾಗಿ ಅಸಂಘಟಿತ ವಲಯದಲ್ಲಿದ್ದಾರೆ ಎಂದರು. ಇ -ಕಾಮರ್ಸನಲ್ಲಿ 5 ಲಕ್ಷ, ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ 45ರಿಂದ 50 ಲಕ್ಷ, ಸಿನಿಮಾರಂಗದಲ್ಲಿ 5 ಲಕ್ಷ, ಮನೆಗೆಲಸದಲ್ಲಿ 20 ಲಕ್ಷ ಮಂದಿ ತೊಡಗಿಸಿ ಕೊಂಡಿದ್ದು ಇವರೆಲ್ಲರೂ ಅಸಂಘಟಿತ ಕ್ಷೇತ್ರದಲ್ಲಿದ್ದಾರೆ.

ಗ್ಯಾರೇಜ್ ಕೆಲಸಗಾರರ ಸಹಿತ ವಾಣಿಜ್ಯ ವಾಹನ ಪರವಾನಗಿದಾರರು 35 ಲಕ್ಷ ಮಂದಿಯಿದ್ದು, ಇವರೆಲ್ಲರ ಅನುಕೂಲ ಕ್ಕಾಗಿ ಯೋಜನೆ ಯೊಂದನ್ನು ರೂಪಿಸಲಾಗುತ್ತಿದೆ. ಕಾರ್ಮಿಕ ಇಲಾಖೆ ಸಂಗ್ರಹಿಸುತ್ತಿರುವ ಸೆಸ್ ಆದಾಯದಲ್ಲಿ 1.20 ಕೋಟಿಯಷ್ಟು ಅಸಂಘಟಿತ ಕಾರ್ಮಿಕರನ್ನು ಸಾಮಾಜಿಕ ಭದ್ರತೆ ಯೋಜನೆಗೊಳಪಡಿಸುವ ಗುರಿಯಿದೆ. ಸೆಸ್ ಆದಾಯ ಸಂಗ್ರಹ ಹೆಚ್ಚಿದರೆ ಮತ್ತಷ್ಟು ಜನರಿಗೆ ಸೌಲಭ್ಯ ಒದಗಿಸಲಾಗುವುದು. ಇವರಿಗೆ ಯುನಿವರ್ಸಲ್ ಕಾರ್ಡ್ ಕೊಡಲೂ ಉದ್ದೇಶಿಸಲಾಗಿದೆ ಎಂದರು.

ಇಎಸ್‌ಐ ಆಸ್ಪತ್ರೆಗೆ ಜಾಗ: ಉಡುಪಿ ಜಿಲ್ಲೆಗೆ ಮಂಜೂರಾಗಿರುವ ಇಎಸ್‌ಐ ಆಸ್ಪತ್ರೆಗಾಗಿ ಜಮೀನನ್ನು ಗುರುತಿಸಿದ್ದು, ಎಲ್ಲಾ ದಾಖಲೆಗಳ ಸಹಿತ ಮರು ಪ್ರಸ್ತಾವನೆಯನ್ನು ಕೇಂದ್ರ ಕಾರ್ಮಿಕ ಇಲಾಖೆಗೆ ಕಳುಹಿಸಲಾಗಿದೆ. ರಾಜ್ಯದಲ್ಲಿ ಇಎಸ್‌ಐ ಚಂದಾದಾರರಿಗೆ ರೆಫರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ವಾರ್ಷಿಕ 44 ಕೋಟಿ ರೂ. ವ್ಯಯವಾಗುತ್ತಿದೆ. ರಾಜ್ಯದಲ್ಲಿ 19 ಆಸ್ಪತ್ರೆ ಹಾಗೂ ನಾಲ್ಕು ಮೆಡಿಕಲ್ ಕಾಲೇಜು ಆಸ್ಪತ್ರೆಗಳಿವೆ. ಇವುಗಳಿಗೆ ರಾಜ್ಯ ಸರಕಾರ 450 ಕೋಟಿ ರೂ.ನೀಡಿದೆ ಎಂದು ಸಂತೋಷ್ ಲಾಡ್ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಕಾರ್ಮಿಕರಿಗೆ ನೀಡಿದ ನಕಲಿ ಕಾರ್ಡುಗಳನ್ನು ಪತ್ತೆ ಹಚ್ಚಿ ರದ್ದು ಪಡಿಸಲಾಗುತ್ತಿದೆ. ಟೈಲರ್‌ಗಳಿಗೂ ಸಾಮಾಜಿಕ ಭದ್ರತೆ ಯೋಜನೆ ಒದಗಿಸಲು ಬೇಡಿಕೆಯಿದೆ ಎಂದರು.

ಕಾರ್ಮಿಕ ಇಲಾಖಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕಾರ್ಮಿಕ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾರತಿ ಡಿ. ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News