ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇರಲಿಲ್ಲ, ಕೇವಲ ವದಂತಿ: ಖುಷ್ಬೂ ಸುಂದರ್ ಸ್ಪಷ್ಟನೆ
ಉಡುಪಿ, ಜು.27: ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇಡಲು ಸಾಧ್ಯವೇ ಇಲ್ಲ. ಇದೆಲ್ಲ ಕೇವಲ ವದಂತಿ. ಈ ಸಂಬಂಧ ಹರಿದಾಡುತ್ತಿರುವ ಸುಳ್ಳು ವಿಡಿಯೋ ಗಳನ್ನು ನಂಬಬಾರದು. ಇದೊಂದು ಶೈಕ್ಷಣಿಕ ಕೇಂದ್ರವಾಗಿದ್ದು, ಇಲ್ಲಿ ಹಿಡನ್ ಕ್ಯಾಮೆರಾ ಇರಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಹೇಳಿದ್ದಾರೆ.
ಉಡುಪಿ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಕಾಲೇಜಿನಲ್ಲಿ ವಿಚಾರಣೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಪೊಲೀಸರ ಜೊತೆಗೆ ನಾವು ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ಪೊಲೀಸರ ಸಹಕಾರದೊಂದಿಗೆ ನಮ್ಮ ತನಿಖೆ ಮುಂದುವರಿಯಲಿದೆ ಎಂದರು.
ಈಗಷ್ಟೇತನಿಖೆಯನ್ನು ಆರಂಭ ಮಾಡಿದ್ದೇವೆ. ಯಾವುದೇ ಮಾಹಿತಿಗಳನ್ನು ಹೊರಗೆ ಹೇಳಲು ಸಾಧ್ಯವಿಲ್ಲ. ಮಾಹಿತಿ ಸಂಗ್ರಹ ಮಾಡಲು ನಮಗೆ ಇನ್ನು ಸ್ವಲ್ಪ ಸಮಯ ಬೇಕು. ಈ ಕುರಿತು ಈಗಲೇ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಒಳಗಡೆ ಏನು ಚರ್ಚೆ ಆಯಿತು ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಯಾರು ಕೂಡ ಈ ವಿಚಾರದಲ್ಲಿ ಯಾವುದೇ ಅಂತಿಮ ತೀರ್ಮಾನಕ್ಕೆ ಬರಬೇಡಿ. ಸಾಕ್ಷ್ಯ ಸಿಕ್ಕಿದೆಯೇ ಎಂಬುದರ ಬಗ್ಗೆಯೂ ಏನೂ ಹೇಳಲು ಸಾಧ್ಯವಿಲ್ಲ ಎಂದ ಅವರು, ಪೊಲೀಸರ ಹೇಳಿಕೆ ಹೊರತಾಗಿ ಬೇರೆ ಯಾವುದೇ ಊಹಾ ಪೋಹಗಳಿಗೆ ಕಿವಿ ಕೊಡಬಾರದು. ಎಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ವರ್ತಿಸಬೇಕೆಂದು ಪ್ರಾಮಾಣಿಕವಾಗಿ ಕೋರುತ್ತೇನೆ. ಯಾವುದೇ ವದಂತಿಗಳಿಗೆ, ವಾಟ್ಯಾಪ್ ಮೆಸೇಜ್‌ಗಳಿಗೆ ಗಮನ ಕೊಡಬಾರದು ಎಂದು ಮನವಿ ಮಾಡಿದರು.
ಮಹಿಳಾ ಆಯೋಗದ ಪರವಾಗಿ ನಾನು ಸ್ಥಳದಲ್ಲಿ ಇದ್ದೇನೆ. ಸದ್ಯ ನಿಮಗೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಆಯೋಗಕ್ಕೆ ದೂರು ಬಂದ ಕಾರಣ ನಾನು ಇಲ್ಲಿ ಇದ್ದೇನೆ. ಆರೋಪಗಳು ಅನೇಕ ಇರಬಹುದು. ಅದರ ಆಧಾರದಲ್ಲಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಖುಷ್ಬೂ ಸುಂದರ್ ತಿಳಿಸಿದರು.
‘ಬ್ರೇಕಿಂಗ್ ನ್ಯೂಸ್ ಕೊಡಲು ಬಂದಿಲ್ಲ’ ನಾನು ನಿಮಗೆ ಯಾವುದೇ ಬ್ರೇಕಿಂಗ್ ನ್ಯೂಸ್ ಕೊಡಲು ಇಲ್ಲಿ ಬಂದಿಲ್ಲ. ಇದು ವಿದ್ಯಾರ್ಥಿನಿಯರು, ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ವಿಚಾರವಾಗಿರುವುದ ರಿಂದಕಾಯಬೇಕಾಗುತ್ತದೆ. ಇದು ಎರಡು ನಿಮಿಷದ ನೂಡಲ್ಸ್ ಥರ ಅಲ್ಲ ಎಂದು ಆಯೋಗದ ಸದಸ್ಯೆ ಖುಷ್ಭೂ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದರು. ನಾವೇ ಈ ಕುರಿತು ಸರಿಯಾದ ಮಾಹಿತಿಯನ್ನು ನೀಡುತ್ತೇವೆ. ಸಂಬಂಧಪಟ್ಟ ಮೊಬೈಲ್ ಫೋನ್‌ಗಳು ವಿಧಿ ವಿಜ್ಞಾನ ಪ್ರಯೋಗಕ್ಕೆ ಕಳುಹಿಸಲಾಗಿದೆ. ಇದಕ್ಕೆ ಹೊರತಾಗಿ ಯಾವುದೇ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ನಮಗೆ ನಮ್ಮ ಕೆಲಸ ಮಾಡಲು ಬಿಡಿ. ನಾವು ಯಾರನ್ನು ಮಾತನಾಡಿಸುತ್ತೇವೆ, ಎಲ್ಲಿಗೆ ಹೋಗುತ್ತೇವೆ ಎಂಬುದರ ಬಗ್ಗೆ ಹಿಂಬಾಲಿಸಬೇಡಿ ಎಂದರು. |