ಉಡುಪಿ: ತೆಂಗಿನಕಾಯಿ ನಾರು ಸಾಗಿಸುತ್ತಿದ್ದ ವಾಹನ ಬೆಂಕಿಗಾಹುತಿ

Update: 2024-12-17 05:28 GMT

ಉಡುಪಿ, ಡಿ.17: ವಿದ್ಯುತ್ ತಂತಿ ತಗುಲಿದ ಪರಿಣಾಮ ತೆಂಗಿನಕಾಯಿಯ ನಾರು ಸಾಗಿಸುತ್ತಿದ್ದ ಪಿಕ್ ಅಪ್ ವಾಹನವೊಂದು ಬೆಂಕಿಯಿಂದ ಸುಟ್ಟು ಭಸ್ಮವಾದ ಘಟನೆ ಸೋಮವಾರ ರಾತ್ರಿ ಹೂಡೆಯಲ್ಲಿ ನಡೆದಿದೆ.

ಅಕ್ಬರ್ ಅಲಿ ಎಂಬವರಿಗೆ ಸೇರಿದ ಪಿಕ್ ಅಪ್ ನಲ್ಲಿ ತೆಂಗಿನಕಾಯಿ ನಾರನ್ನು ಸಾಗಿಸುತ್ತಿದ್ದಾಗ ರಸ್ತೆ ಬದಿಯ ವಿದ್ಯುತ್ ಕಂಬದ ತಂತಿ ವಾಹನಕ್ಕೆ ತಗಲಿತ್ತೆನ್ನಲಾಗಿದೆ. ಈ ವೇಳೆ ಕಾಣಿಸಿಕೊಂಡ ಬೆಂಕಿ ತೆಂಗಿನಕಾಯಿ ನಾರಿಗೆ ತಗುಲಿದೆ. ಬೆಂಕಿಯು ಇಡೀ ವಾಹನಕ್ಕೆ ವ್ಯಾಪಿಸಿ ಹೊತ್ತಿ ಉರಿಯಿತು.

ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಆಗಮಿಸಿದ ಮಲ್ಪೆ ಅಗ್ನಿಶಾಮಕ ದಳ ಸಿಬ್ಬಂದಿ, ಒಂದು ಜಲ ವಾಹನದ ಮೂಲಕ ಸುಮಾರು ಒಂದೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಅನಾಹುತ ಸಂಭವಿಸಿದ ಸ್ಥಳದ ಸಮೀಪದಲ್ಲೇ ವಸತಿ, ಹೊಟೇಲ್ ಗಳಿದ್ದು, ಬೆಂಕಿ ವ್ಯಾಪಿಸಿದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಅನಾಹುತದಿಂದ ತೆಂಗಿನನಾರು ಹಾಗೂ ವಾಹನದ ಟಯರ್ಗಳು ಸಂಪೂರ್ಣ ಸುಟ್ಟು ಹೋಗಿದ್ದು, ಸುಮಾರು ಒಂದೂವರೆ ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News