ಉಡುಪಿ: ಮೀಫ್ ನಿಂದ ಮೊಂಟೆಸ್ಸರಿ ಶಿಕ್ಷಕರಿಗೆ ಕಾರ್ಯಾಗಾರ
ಉಡುಪಿ, ಆ.29: ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಮ್ ವಿದ್ಯಾಸಂಸ್ಥೆಗಳ ಒಕ್ಕೂಟ (ಮೀಫ್) ಹಾಗೂ ಯೆನೆಪೊಯ ಅಕ್ಷರ ಹೌಸ್ ಆಫ್ ಚಿಲ್ಡ್ರನ್ ಸಹಭಾಗಿತ್ವದಲ್ಲಿ Pre KG, LKG, UKG ಶಿಕ್ಷಕರುಗಳಿಗೆ ಏಕದಿನ ಮೊಂಟೆಸ್ಸರಿ ತರಬೇತಿ ಕಾರ್ಯಾಗಾರವು ಉಡುಪಿಯ ಸ್ವಾಲಿಹಾತ್ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಮಣಿಪಾಲ್ ಎಂಐಟಿಯ ಪ್ರೊಫೆಸರ್ ಡಾ.ಅಬ್ದುಲ್ ಅಝೀಝ್, ವಿದ್ಯಾರ್ಥಿಗಳನ್ನು ದೇಶದ ಉತ್ತಮ ನಾಗಕರನ್ನಾಗಿಸುವಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು.
ಸ್ವಾಲಿಹಾತ್ ವಿದ್ಯಾಸಂಸ್ಥೆಯ ಖಜಾಂಚಿ ಅಬ್ದುಲ್ ಖಾದರ್ ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಹೊಣೆಗಾರಿಕೆಯ ಬಗ್ಗೆ ವಿವರಿಸಿದರು.
ಉಡುಪಿ ಝೋನ್ ಉಪಾಧ್ಯಕ್ಷ ಶಾಬಿಹ್ ಅಹ್ಮದ್ ಖಾಝಿ ಪ್ರಸ್ತಾವನೆಗೈದರು. ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿಯವರು ಅವಿಭಜಿತ ಜಿಲ್ಲೆಗಳ ಮೂರು ವಿಭಾಗಗಳಲ್ಲಿ ಮೊಂಟೆಸ್ಸರಿ ಕಾರ್ಯಾಗಾರಗಳನ್ನು ಸಂಘಟಿಸಿರುವ ಉದ್ದೇಶವನ್ನು ವಿವರಿಸಿದರು.
ಬೆಂಗಳೂರಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯವೊಂದು ಮೀಫ್ ಸದಸ್ಯತ್ವ ಹೊಂದಿರುವ ಶಿಕ್ಷಣ ಸಂಸ್ಥೆಗಳ ಪ್ರತಿಭಾವಂತ, ಹಾಗೂ ಬಡ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ನೀಡಿರುವ ಉಚಿತ ಸೀಟುಗಳ ಕೊಡುಗೆಯ ಪ್ರಯೋಜನ ಪಡೆಯುವಂತೆ ಹಾಗೂ ಈ ಬಗ್ಗೆ ಅರ್ಹರಿಗೆ ಮಾಹಿತಿ ನೀಡುವಂತೆ ಶಾಲಾಡಳಿತ ಮಂಡಳಿಗಳಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕ್ರೆಸೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಶಂಸುದ್ದೀನ್, ಆಡಳಿತಾಧಿಕಾರಿ ನವಾಬ್ ಹಸನ್, ಹೆಜಮಾಡಿ ಅಲ್ ಅಝರ್ ವಿದ್ಯಾ ಸಂಸ್ಥೆಯ ಸಂಚಾಲಕ ಶೇಕಬ್ಬ ಕೋಟೆ, ಎನ್.ಐ.ಮುಹಮ್ಮದ್, ಸ್ವಾಲಿಹಾತ್ ಸಮೂಹ ಸಂಸ್ಥೆಗಳ ಸಂಚಾಲಕ ಅಸ್ಲಂ ಹೈಕಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕ ಜಿ.ಎಂ.ಅನ್ವರ್ ಗೂಡಿನಬಳಿ ಸ್ವಾಗತಿಸಿದರು. ಹೂಡೆ ಸ್ವಾಲಿಹಾತ್ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಸಾದಾತ್ ವಂದಿಸಿದರು. ಪ್ರೋಗ್ರಾಂ ಸೆಕ್ರೆಟರಿ ಮುಹಮ್ಮದ್ ಶಾರಿಕ್ ಕಾರ್ಯಕ್ರಮ ನಿರೂಪಿಸಿದರು. ಅಕ್ಷರ ಹೌಸ್ ಆಫ್ ಚಿಲ್ಡ್ರನ್ ಯೆನೆಪೊಯ ಸಂಸ್ಥೆಯ ಫಾತಿಮಾ ಶಮೀನ ತಂಡದವರು ಕಾರ್ಯಾಗಾರ ನಡೆಸಿಕೊಟ್ಟರು.
ಉಡುಪಿ ಜಿಲ್ಲೆಗೆ ಒಳಪಟ್ಟ ಕುಂದಾಪುರ, ಬೈಂದೂರು, ಕಾಪು, ಬ್ರಹ್ಮಾವರ, ಕಾರ್ಕಳ, ತಾಲೂಕುಗಳ ಮೊಂಟೆಸ್ಸರಿ ವಿದ್ಯಾ ಸಂಸ್ಥೆಗಳ ಶಿಕ್ಷಕರು ಕಾರ್ಯಾಗಾರದ ಸದುಪಯೋಗ ಪಡೆದರು.